ಐದು ರಾಜ್ಯಗಳ ವಿಮಾನ, ಬಸ್, ರೈಲು ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ನಿರ್ಬಂಧ

Spread the love

ಐದು ರಾಜ್ಯಗಳ ವಿಮಾನ, ಬಸ್, ರೈಲು ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ನಿರ್ಬಂಧ

ಬೆಂಗಳೂರು: ರಾಜ್ಯದಲ್ಲಿ ನೆರೆ ರಾಜ್ಯಗಳಿಂದ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಿರುವ ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ಪ್ರಯಾಣಿಕರಿಗೆ ಗಡಿ ಬಂದ್ ಮಾಡುವ ಕಟ್ಟುನಿಟ್ಟನ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಹಾಗೂ ರಾಜಸ್ತಾನದಿಂದ ಬರುವ ಪ್ರಯಾಣಿಕ ವಿಮಾನಗಳನ್ನು ಸಧ್ಯಕ್ಕೆ ನಿಷೇಧಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳ ಭೂ ಮಾರ್ಗದ ಗಡಿಗಳನ್ನು ಈಗಾಗಲೇ ಬಂದ್ ಮಾಡಿದ್ದು, ಈ ಆದೇಶವನ್ನು ಇನ್ನೂ 15 ದಿನಗಳ ಕಾಲ ಮುಂದುವರೆಸಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಮುಂದಿನ 15 ದಿನಗಳ ಕಾಲ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಗುಜರಾತ್ ನಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.

ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿದಂತೆ ಈ ಮೂರು ರಾಜ್ಯಗಳ ವಿಮಾನ, ರಸ್ತೆ ಮತ್ತು ರೈಲು ಸಂಚಾರವನ್ನು ನಿರ್ಬಂಧಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆರೆ ರಾಜ್ಯಗಳು ಮತ್ತು ಹೊರ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು, ಪ್ರಯಾಣಿಕರು, ವಿದ್ಯಾರ್ಥಿಗಳು ಆಗಮಿಸಿದ್ದು, ಇವರನ್ನು ಕ್ವಾರೆಂಟೈನ್ ನಲ್ಲಿ ಇಡಲಾಗಿದೆ. ಇವರೆಲ್ಲರಿಗೂ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ ನಂತರ ಹೊರ ರಾಜ್ಯದವರನ್ನು ಹಂತ ಹಂತವಾಗಿ ಕರೆಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


Spread the love