ಒಕ್ಕಲಿಗರ ಸಂಘ ದುಬೈ ಯುಎಇ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Spread the love

ಒಕ್ಕಲಿಗರ ಸಂಘ ದುಬೈ ಯುಎಇ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ದುಬೈ: ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅಭಿಪ್ರಾಯಪಟ್ಟರು.


ಒಕ್ಕಲಿಗರ ಸಂಘ ದುಬೈ ಯುಎಇ ವತಿಯಿಂದ ದುಬೈನ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮಿಯವರ ಆಶಿರ್ವಾದದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ತಾಯ್ನೆಲದ ಪರ ನಮ್ಮ ಜವಾಬ್ದಾರಿಗಳು’ ಎಂಬ ಧ್ಯೇಯೋದ್ದೇಶದೊಂದಿಗೆ ಒಕ್ಕಲಿಗರ ಸಂಘ ದುಬೈ ಯುಎಇ ಹಮ್ಮಿಕೊಂಡಿರುವ ‘ವಿಶ್ವ ಪರಿಸರ ದಿನಾಚರಣೆ’ ನಿಜಕ್ಕೂ ಶ್ಲಾಘನೀಯ. ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ, ಒಕ್ಕಲಿಗರ ಸಂಘದ ಮೂಲಕವೇ ನಡೆಯಲಿ, ನನ್ನ ಸಂಪೂರ್ಣ ಮಾರ್ಗದರ್ಶನ, ಸಹಕಾರ ನಿಮ್ಮ ಜೊತೆ ಸದಾ ಇದೆ’ ಎಂದರು.

ಕಾರ್ಯಕ್ರಮದ ಆಯೋಜಕರು, ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ ಚನ್ನರಾಯಪಟ್ಟಣ ಅವರು ಮಾತನಾಡಿ, ಡಾ.ಆರ್ ಕೆ ನಾಯರ್ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಘ ಭಾರತದಲ್ಲಿ ಹಾಗೂ ದುಬೈನಲ್ಲೂ ಅರಣ್ಯ ನಿರ್ಮಿಸಲು ಕೈಜೋಡಿಸಲಿದೆ, ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಮಿಯಾವಾಕಿ ಮಾದರಿಯಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸುವ ಮೂಲಕ ಭಾರತದಲ್ಲಿ 100ಕ್ಕೂ ಹೆಚ್ಚಿನ ಅರಣ್ಯಗಳನ್ನು ಸೃಷ್ಟಿಸಿದ ಡಾ.ಆರ್.ಕೆ. ನಾಯರ್, ನಾಸಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಮಂಡನೆ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

ಮೇಜರ್ ಜನರಲ್ ಒಮರ್ ಮಹಮ್ಮದ್ ಅಲ್ ಮರ್ಝೂಕಿ, ಶಿಕ್ಷಣ ತಜ್ಞ ರಮೇಶ್ ಡ್ಯಾಫೊಡೀಲ್ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಗಿಡಗಳನ್ನು ಸ್ವೀಕರಿಸಿ ಆರೈಕೆ ಮಾಡುವ ಜವಾಬ್ದಾರಿಯೊಂದಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಪಣ ತೊಟ್ಟರು.

ಒಕ್ಕಲಿಗರ ಸಂಘ ದುಬೈ ಸದಸ್ಯ ಹರೀಶ್ ಗೌಡಗಿಡಗಳ ಸಂರಕ್ಷಣೆ, ನರ್ಸರಿ ಗಿಡ, ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ಆಶಿಶ್ ಹರೀಶ್ ಕೋಡಿಯವರ ಕೊಳಲು ವಾದನ, ಸೌಹಾರ್ದ ಲಹರಿ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ, ಅಕ್ಷತ ಜಿ ಆಚಾರ್ಯ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ, ಆಹ್ವಾನಿತರಿಗೆ, ಪ್ರಾಯೋಜಕರಿಗೆ ಒಕ್ಕಲಿಗರ ಸಂಘ ಕೋರ್ ಕಮಿಟಿ ಸದಸ್ಯ ಶಿವಪ್ರಕಾಶ್ ಗೌಡ ಧನ್ಯವಾದ ಅರ್ಪಿಸಿದರು.


Spread the love