ಕಡಬ: ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ   ಸಾವು

Spread the love

ಕಡಬ: ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ   ಸಾವು

ಕಡಬ(ಉಪ್ಪಿನಂಗಡಿ): ಹೊಳೆ ನೀರಿನಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ನೀರಿನ ಆಳದಲ್ಲಿ ಮುಳುಗಿ ಮೃತಪಟ್ಟ ಘಟನೆ ನೂಜಿಬಾಳ್ತಿಲ ಗ್ರಾಮದ ಸುಳ್ಯಮಜಲು ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಇಚ್ಲಂಪಾಡಿ ಗ್ರಾಮದ ಬರೆಮೇಲು ಮಠ ನಿವಾಸಿ ಕೃಷ್ಣಪ್ಪ ದಾಸ್ ಅವರ ಪುತ್ರ ವೆಂಕಟೇಶ್ ದಾಸ್ (24) ಹಾಗೂ ಇಚ್ಲಂಪಾಡಿ ಗ್ರಾಮದ ಕಲ್ಯ ನಿವಾಸಿ ಸುಂದರ ಗೌಡ ಅವರ ಪುತ್ರ ಗುರುನಂದನ್ (21) ಮೃತರು.

ಇಚ್ಲಂಪಾಡಿ ಗ್ರಾಮದ ಬರೆಮೇಲು ಮಠ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು ಶುಕ್ರವಾರ ದೃಢಕಲಶ ನಡೆದಿತ್ತು. ಸಂಜೆ ವೇಳೆಗೆ ವೆಂಕಟೇಶ್ ದಾಸ್, ಗುರುನಂದನ್ ಹಾಗೂ ಇವರಿಬ್ಬರ ಸಹೋದರಿಯರು ಹಾಗೂ ಇನ್ನಿಬ್ಬರು ಯುವತಿಯರು ಸೇರಿದಂತೆ ಒಟ್ಟು ಆರು ಮಂದಿ ಗುಂಡ್ಯ ಹೊಳೆಯ ಸುಳ್ಯಮಜಲು ಎಂಬಲ್ಲಿಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಗುರುನಂದನ್ ಹಾಗೂ ವೆಂಕಟೇಶ್ ದಾಸ್ ನದಿ ನೀರಿನಲ್ಲಿ ಮುಳುಗಿದ್ದರು. ಇದನ್ನು ಗಮನಿಸಿದ್ದ ಜೊತೆಗಿದ್ದ ಯುವತಿಯರು ಬೊಬ್ಬೆ ಹಾಕಲಾರಂಭಿಸಿದ್ದರು. ಸ್ಥಳೀಯರು ನದಿ ದಡಕ್ಕೆ ಬಂದ ವೇಳೆಗೆ ಇಬ್ಬರು ನದಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ನುರಿತ ಈಜುಗಾರರು ನದಿ ಆಳದಲ್ಲಿ ಮುಳುಗಿ ಹುಡುಕಾಟ ನಡೆಸಿದ ವೇಳೆ ಇಬ್ಬರ ಮೃತದೇಹವೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love