ಕಡಬ ಸಮೀಪ ನಕ್ಸಲ್ ಚಟುವಟಿಕೆ ಶಂಕೆ: ಪೊಲೀಸ್, ಎಎನ್ಎಫ್ ತಂಡದಿಂದ ತೀವ್ರಗೊಂಡ ಶೋಧ ಕಾರ್ಯ

Spread the love

ಕಡಬ ಸಮೀಪ ನಕ್ಸಲ್ ಚಟುವಟಿಕೆ ಶಂಕೆ: ಪೊಲೀಸ್, ಎಎನ್ಎಫ್ ತಂಡದಿಂದ ತೀವ್ರಗೊಂಡ ಶೋಧ ಕಾರ್ಯ

ಮಂಗಳೂರು: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಅರಣ್ಯದ ಅಂಚಿನಲ್ಲಿರುವ ಮನೆಯೊಂದಕ್ಕೆ ಗುರುವಾರ ರಾತ್ರಿ ಮುಸುಕು ಹಾಕಿಕೊಂಡು, ಆಯುಧಗಳ ಸಮೇತ ಬಂದಿದ್ದ ಶಂಕಿತ ನಕ್ಸಲರ ತಂಡದಲ್ಲಿ ಆರು ಮಂದಿ ಸದಸ್ಯರಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಸದಸ್ಯರೆಲ್ಲರೂ ಒಂದೇ ತರಹದ ಡ್ರೆಸ್, ಬೂಟುಗಳನ್ನು ಧರಿಸಿ ದೊಡ್ಡ ಬ್ಯಾಗ್ಗಳನ್ನು ಹಿಡಿದುಕೊಂಡಿದ್ದರು. ಅವರ ಬ್ಯಾಗ್ಗಳಲ್ಲಿ ಗನ್ನಂತಹ ಸಾಧನಗಳು ಇದ್ದವು ಎಂದು ಮನೆ ಮಂದಿ ಹೇಳಿದ್ದಾರೆ.

ಶಂಕಿತ ನಕ್ಸಲರ ಗ್ಯಾಂಗ್ ಸದಸ್ಯರು ಮನೆಯೊಂದಕ್ಕೆ ನುಗ್ಗಿ ಅಲ್ಲಿನ ಲೈಟ್ಗಳನ್ನು ಆಫ್ ಮಾಡಿದ್ದರು. ಮನೆಯ ಮಾಲೀಕರಿಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಲು ಹೇಳಿದ್ದರು. ನಂತರ ಟಿವಿಯ ವಾಲ್ಯೂಮ್ ಕೂಡ ಹೆಚ್ಚಿಸಿದ್ದರು. ಇನ್ನು ನಾಲ್ವರು ಮನೆಯ ಮುಂಭಾಗ ಮತ್ತು ಹಿತ್ತಲಲ್ಲಿ ಕಾವಲುಗಾರರಾಗಿ ನಿಂತಿದ್ದರು.

ನಂತರ ನಕ್ಸಲರು ಆಹಾರ ತಯಾರಿಸಲು ಹೇಳಿ ಅನ್ನ ಮತ್ತು ಚಿಕನ್ ಕರಿ ಸೇವಿಸಿದ್ದಾರೆ. ಮನೆಯವರು ನೋಡುತ್ತಿದ್ದ ಟಿವಿ ಧಾರಾವಾಹಿಯನ್ನೂ ನೋಡಿ ಮನೆಯಿಂದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಕಾಡಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ತಂಗಿದ್ದ ಸಮಯದಲ್ಲಿ ಅವರ ಆರು ಮೊಬೈಲ್ ಫೋನ್ ಹ್ಯಾಂಡ್ಸೆಟ್ಗಳು ಮತ್ತು ಲ್ಯಾಪ್ಟಾಪ್ ಅನ್ನು ಮನೆಯಲ್ಲಿ ಚಾರ್ಜ್ ಮಾಡಿದ್ದಾರೆ. ಮನೆಯ ಸದಸ್ಯರು ನೀಡಿದ ಮಾಹಿತಿಯಂತೆ ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಮಾತನಾಡುತ್ತಿದ್ದರು.

ನಕ್ಸಲರ ಭೇಟಿಯ ಸುಳಿವು ದೊರೆತ ತಕ್ಷಣ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್) ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮನೆಗೆ ಧಾವಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾಂಗ್ಗಾಗಿ ಹುಡುಕಾಟ ನಡೆಸಿದ್ದಾರೆ. ನಕ್ಸಲರು ಭೇಟಿ ನೀಡಿದ ಮನೆ ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಕಾಡಿನ ಅಂಚಿನಲ್ಲಿದೆ.

10 ರಿಂದ 12 ವರ್ಷಗಳ ನಂತರ ಈ ಪ್ರದೇಶಕ್ಕೆ ನಕ್ಸಲರು ಆಗಾಗ ಭೇಟಿ ನೀಡುತ್ತಿರುವುದು ಕಂಡು ಬರುತ್ತಿದೆ. ಪರಿಣಾಮವಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ಪೊಲೀಸರು ಬೀಟ್ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ, ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆ ಚುರುಕುಗೊಂಡಿದೆ.


Spread the love