ಕನ್ನಡ ಶಾಲೆಗಳು ಮುಚ್ಚುತ್ತಿರುವುದೇ ಕನ್ನಡದ ಅವನತಿಯ ಸಂಕೇತ – ಪಾರಂಪಳ್ಳಿ ನರಸಿಂಹ ಐತಾಳ

Spread the love

ಕನ್ನಡ ಶಾಲೆಗಳು ಮುಚ್ಚುತ್ತಿರುವುದೇ ಕನ್ನಡದ ಅವನತಿಯ ಸಂಕೇತ – ಪಾರಂಪಳ್ಳಿ ನರಸಿಂಹ ಐತಾಳ

ಕುಂದಾಪುರ: ಸರಕಾರಿ ಶಾಲೆಗಳಲ್ಲೂ ಶಿಕ್ಷಕರ ಕೊರತೆ, ಮೂಲ ಸೌಕರ್ಯದ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿರುವುದೇ ಕನ್ನಡದ ಅವನತಿಯ ಸಂಕೇತ ಎಂದು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ, ಶಿಕ್ಷಕ ಪಾರಂಪಳ್ಳಿ ನರಸಿಂಹ ಐತಾಳ ತಿಳಿಸಿದರು.

ಅವರು ಕ.ಸಾ.ಪ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಸಾಲಿಗ್ರಾಮ-ಪಾರಂಪಳ್ಳಿಯ ಮಹಾವಿಷ್ಣು ಸಭಾಂಗಣದಲ್ಲಿ ಜರಗಿದ ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಶಾಲೆಗಳಿಗೆ ಸರಕಾರ ಸೂಕ್ತ ಮೂಲ ಸೌಕರ್ಯಗಳನ್ನು ನೀಡಬೇಕು. ಈ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನೀಡುವ ಕೃಪಾಂಕ ಹೆಚ್ಚಬೇಕು. ಗ್ರಾಮೀಣ ಕೃಪಾಂಕ ವ್ಯವಸ್ಥೆ ಕೇವಲ ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರಿಗೆ ಮಾತ್ರ ದೊರಕಬೇಕು. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯವನ್ನು ಸಂಘಟನೆಗಳ ಜತೆಗೆ ಸರಕಾರ ಕೂಡ ಮಾಡಬೇಕು. ಆಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಶಿವ ನಾಯ್ಕ್ ಅವರು ರಾಷ್ಟ್ರ ಧ್ವಜಾರೋಹಣ ಹಾಗೂ ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ವೈದ್ಯ ಡಾ. ವಿಷ್ಣುಮೂರ್ತಿ ಐತಾಳ ಸಾಧಕ ಶಿಕ್ಷಕರನ್ನು ಸಮ್ಮಾನಿಸಿದರು.

ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿಂದಿನ ಸಮ್ಮೇಳನಾಧ್ಯಕ್ಷ ಡಾ.ಜಗದೀಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಕ.ಸಾ.ಪ. ಪದಾಧಿಕಾರಿಗಳಾದ ನರೇಂದ್ರ ಕುಮಾರ್ ಕೋಟ, ಮನೋಹರ ಪಿ., ಸತೀಶ್ ವಡ್ಡರ್ಸೆ, ಅಚ್ಯುತ್ ಪೂಜಾರಿ, ರಂಗಪ್ಪಯ್ಯ ಹೊಳ್ಳ, ಉದ್ಯಮಿ ರಾಮಚಂದ್ರ ಉಪಾಧ್ಯ ಹಾಗೂ ಎಲ್ಲಾ ತಾಲೂಕು ಘಟಕದ ಅಧ್ಯಕ್ಷರು, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಇದ್ದರು.

ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೆ ಸ್ವಾಗತಿಸಿ, ಜ್ಯೋತಿ ಕೃಷ್ಣ ಪೂಜಾರಿ ನಿರೂಪಿಸಿ, ಗೆಳೆಯರ ಬಳಗದ ತಾರಾನಾಥ ಹೊಳ್ಳ ವಂದಿಸಿದರು.

ಗ್ರಾಮೀಣ ಭಾಗಕ್ಕೆ ಸಮ್ಮೇಳನ
ಸಾಹಿತ್ಯ ಸೇವೆಯನ್ನು ಮನೆ-ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಸಾಹಿತ್ಯ ಚಟುವಟಿಕೆಯನ್ನು ಆಯೋಜಿಸುವುದಾಗಿ ಕ.ಸಾ.ಪ. ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ತಿಳಿಸಿದರು ಹಾಗೂ ಪ್ರತಿ ಶಾಲೆಗೆ ಭೇಟಿ ನೀಡಿ ಪುಸ್ತಕ, ಗಿಡಗಳನ್ನು ನೀಡುವ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.

ಸಮ್ಮೇಳನ ವಿಶೇಷ:-

  • ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು.
  • ಬ್ರಹ್ಮಾವರ ತಾಲೂಕಿನ ವಿಶೇಷಗಳು ಒಂದು ಬೀಸು ನೋಟ ವಿಶೇಷ ಉಪನ್ಯಾಸದ ಮೂಲಕ ತಾಲೂಕಿನ ವಿಶೇಷತೆಗಳನ್ನು ಪರಿಚಯಿಸಲಾಯಿತು.
  • ತಾಲೂಕಿನಲ್ಲಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಲಾಯಿತು.
  • ಬಹುವಿಧಗೋಷ್ಠಿಯ ಮೂಲಕ ಜನಪದ ಸಾಹಿತ್ಯ, ಕುಂದಗನ್ನಡ ಸಾಹಿತ್ಯ, ಕಥವಾಚನ, ಅನುಭವ ಕಥನ
    ಮೊದಲದ ಹಲವು ವಿಚಾರಗಳ ಕುರಿತು ವಿಚಾರ ಮಂಡನೆ ನಡೆಯಿತು.
  • ಭಾಗವತ ನಾರಾಯಣ ಶಬರಾಯ ಅವರಿಂದ ತೆಂಕು-ಬಡಗು ಎರಡು ತಿಟ್ಟುಗಳ ಆಯ್ದ ಯಕ್ಷಗಾಯನದ
    ಸಮನ್ವಯ ನಡೆಯಿತು.

Spread the love