ಕಲ್ಲಡ್ಕ ಭಟ್ಟರ ಬಾಯಿಗೆ ಸರಕಾರ ಕಾನೂನಿನ ಮೂಲಕ ಬೀಗ ಜಡಿಯಬೇಕು – ವೆರೋನಿಕಾ ಕರ್ನೆಲಿಯೊ

Spread the love

ಕಲ್ಲಡ್ಕ ಭಟ್ಟರ ಬಾಯಿಗೆ ಸರಕಾರ ಕಾನೂನಿನ ಮೂಲಕ ಬೀಗ ಜಡಿಯಬೇಕು – ವೆರೋನಿಕಾ ಕರ್ನೆಲಿಯೊ

ಉಡುಪಿ: ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹರಕಲು ಬಾಯಿಗೆ ರಾಜ್ಯ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಬೀಗ ಜಡಿಯಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

ಪ್ರತಿ ಬಾರಿ ಮುಸ್ಲಿಂರ ಹಾಗೂ ಕ್ರಿಶ್ಚಿಯನ್ನರ ವಿರುದ್ದ ದ್ವೇಷ ಕಾರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ಈ ಬಾರಿ ಮತ್ತೆ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ವಿಚಾರವಾಗಿದೆ. ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಕುಂದುಂಟು  ಮಾಡಿದ ಹಾಗೂ  ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುವ ಕೆಲಸವನ್ನು ಅವರು ಮಾಡಿದ್ದು ಈಗಾಗಲೇ ಹಲವಾರು ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ದ ಪ್ರಕರಣಗಳು ದಾಖಲಾಗಿವೆ. ಕೇವಲ ಪ್ರಕರಣ ದಾಖಲಾದರೆ ಸಾಲದು ಇಲಾಖೆ ಅವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲವಾದಲ್ಲಿ ಇಂತಹ ವ್ಯಕ್ತಿಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗಲಿದ್ದು ಇದನ್ನು ಸರಕಾರ ತಡೆಯಬೇಕು.

ಮಹಿಳೆಯರನ್ನು ಮಾತೆ ಎಂದು ಕರೆಯುವ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಮುಸ್ಲಿಂ ಮಹಿಳೆಯರೂ ಕೂಡ ಮಾತೆಯರೇ ಎನ್ನುವ ವಿವೇಕ ಇಲ್ಲದೆ ಹೋಯಿತೆ? ಅಥವಾ ಒಂದು ಸಮುದಾಯವನ್ನು ಪ್ರಚೋದಿಸಿ ಚುನಾವಣೆಯ ಸಂದರ್ಭದಲ್ಲಿ ಗಲಭೆಯನ್ನು ಸೃಷ್ಟಿ ಮಾಡುವ ಹುನ್ನಾರವೇ ಎನ್ನುವುದುನ್ನು ಪೊಲೀಸರು ತನಿಖೆಯಿಂದ ಬಹಿರಂಗಪಡಿಸಬೇಕಾಗಿದೆ. ಇಂತಹ ಅವಮಾನಕಾರಿ ಹೇಳಿಕೆಯನ್ನು ನೀಡಿರುವ ಭಟ್ಟರ ವಿರುದ್ದ ರಾಜ್ಯದ ಎಲ್ಲಾ ಠಾಣೆಗಳಲ್ಲಿ ಜಾಮೀನುರಹಿತ ಪ್ರಕರಣದ ಅಡಿಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love