ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಧ್ಯಮದವರಿಗೆ ಅವಮಾನ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ

Spread the love

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಧ್ಯಮದವರಿಗೆ ಅವಮಾನ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ

ಕುಂದಾಪುರ: ಕುಂದಾಪುರದಲ್ಲಿ ಜ.27 ರಂದು ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯ ವೇಳೆ ಕಾಂಗ್ರೆಸ್ ನಾಯಕರ ನಡೆಯಿಂದಾಗುತ್ತಿರುವ ಅಸಮಾಧಾನದ ವಿರುದ್ಧ ಕಾರ್ಯಕರ್ತರು ಮಾತನಾಡುತ್ತಿರುವ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ಮಾಧ್ಯಮದವರನ್ನು ತಳ್ಳಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿ ಹೊರದಬ್ಬಿರುವುದನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರವಾಗಿ ಖಂಡಿಸಿದೆ.

ಕುಂದಾಪುರದಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ಉಸ್ತುವಾರಿ ಸಚಿವರು ಆಗಮಿಸುತ್ತಿದ್ದು, ಮಾಧ್ಯಮ ಮಿತ್ರರಿಗೆ ಆಹ್ವಾನ ನೀಡಲಾಗಿತ್ತು. ಸಚಿವರ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದ್ದು, ಪತ್ರಕರ್ತರು ಕುಳಿತು ವರದಿ ಮಾಡುತ್ತಿದ್ದರು. ಈ ವೇಳೆಯಲ್ಲಿ ಕಾರ್ಯಕರ್ತರೊಬ್ಬರು ಪಕ್ಷದ ಮುಖಂಡರುಗಳ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿ‌ ಮಾತನಾಡುತ್ತಿದ್ದಾಗ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದರು‌. ಈ ಸಂದರ್ಭ ಸಭಾ ವೇದಿಕೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ವೇದಿಕೆಯಿಂದ ಇಳಿದು ಬಂದು ಮಾಧ್ಯಮದವರ ಕ್ಯಾಮೆರಾ ಚಿತ್ರೀಕರಣಕ್ಕೆ ಅಡ್ಡಗಟ್ಟಿ ತಳ್ಳಿದ್ದಾರೆ. ಇದರಿಂದ ಕೆಲ ಹೊತ್ತು ಸಂದಿಗ್ಧತೆ ವಾತಾವರಣ ಸೃಷ್ಟಿಯಾಯಿತು. ಇದೆಲ್ಲಾ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಹಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಸಹಿತ ಎರಡು ಬ್ಲಾಕ್ ಕಾಂಗ್ರೆಸ್‌ನ ಮುಖಂಡರುಗಳು ದುರ್ವರ್ತನೆ ತೋರಿದ ಮುಖಂಡನನ್ನು ತಡೆಯುವ ಯಾವುದೇ ಪ್ರಯತ್ನ ಮಾಡದೇ ಮೂಕ ಪ್ರೇಕ್ಷಕರಾಗಿ ವರ್ತಿಸಿದ್ದಾರೆ. ಬಳಿಕ ಸಚವೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ಮೊದಲಿಗೆ ಮಾಧ್ಯಮದವರನ್ನು ಹೊರಹೋಗಿ ಎಂದು ನೇರವಾಗಿ ಹೇಳುವ ಮೂಲಕ ಅವಮಾನ ಪಡಿಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆ ತಂದಿದ್ದಾರೆ.

ಕುಂದಾಪುರದಲ್ಲಿ ನಡೆಯುವ ವಿವಿಧ ಪಕ್ಷಗಳ ಕಾರ್ಯಕ್ರಮದಲ್ಲಿ ಕುಂದಾಪುರ ಮಾಧ್ಯಮ ಮಿತ್ರರು ಸೌಹಾರ್ದಯುತವಾಗಿ ಭಾಗವಹಿಸಿ ಕಾರ್ಯಕ್ರಮದ ವರದಿ ಮಾಡುತ್ತಾ ಬಂದಿದ್ದು, ಕಾಂಗ್ರೆಸ್ ಪಕ್ಷದ ಈ ದುರ್ವರ್ತನೆ ಪತ್ರಕರ್ತರ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಆದ್ದರಿಂದ ಈ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಕಾರ್ಯಾಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಗ್ರಹಿಸಿದೆ.


Spread the love