ಕಾಂಗ್ರೆಸ್ ಕೋವಿಡ್ ವಿರುದ್ದ ಹೋರಾಡುತ್ತಿದ್ದರೆ, ಬಿಜೆಪಿ ಶಾಸಕರು ಡಿನ್ನರ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ – ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Spread the love

ಕಾಂಗ್ರೆಸ್ ಕೋವಿಡ್ ವಿರುದ್ದ ಹೋರಾಡುತ್ತಿದ್ದರೆ, ಬಿಜೆಪಿ ಶಾಸಕರು ಡಿನ್ನರ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ – ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಉಡುಪಿ: ರಾಜ್ಯದಲ್ಲಿ ವಿಪಕ್ಷವಾಗಿ ಕಾಂಗ್ರೆಸ್ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಬಿಜೆಪಿಯ ಶಾಸಕರು ಅಧಿಕಾರ, ಮಂತ್ರಿಗಿರಿಯ ಕಚ್ಚಾಟದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಅವರು ಶುಕ್ರವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇಂತಹ ಕೊರೋನಾ ಸಮಯದಲ್ಲಿ ಪ್ರತಿಯೊಬ್ಬ ಶಾಸಕರು ಸರಕಾರಕ್ಕೆ ಬೆಂಬಲ ಸೂಚಿಸಬೇಕು ಮತ್ತು ನಾಯಕರು ಮುಖ್ಯಮಂತ್ರಿಗಳಿಗೆ ಶಕ್ತಿ ನೀಡಬೇಕು ಅದನ್ನು ಬಿಟ್ಟು ರಾತ್ರಿ ಡಿನ್ನರ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ. ಈ ಸಂಕಷ್ಟ ಕಾಲದಲ್ಲಿ ರಾಜಕೀಯ ಮಾಡ್ತಾ ಇರೋದು ನಮ್ಮ ರಾಜ್ಯದ ದುರ್ದೈವ, ದುರಂತ ಎಂದರು.

ಕೋವಿಡ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಪಕ್ಷವಾಗಿ ಕಾಂಗ್ರೆಸ್ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಪಕ್ಷದ ಮುಖಂಡರು ಸರಕಾರಕ್ಕೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರೂ ಸರಕಾರ ಮಾತ್ರ ಅದನ್ನು ಒಪ್ಪಿಲ್ಲ. ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಪಿಪಿಇ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಖರೀದಿಯಲ್ಲಿ ಹಣದ ದುರುಪಯೋಗ ಆಗಿದೆ. ಈ ಬಗ್ಗೆ ತನಿಖೆಗೆ ಅವಕಾಶ ನೀಡುವಂತೆ ಸರಕಾರವನ್ನು ಕೋರಿಕೊಂಡರು ವಿಧಾನಸಭಾಧ್ಯಕ್ಷರು ಅವಕಾಶವನ್ನು ನಿರಾಕರಿಸಿದ್ದಾರೆ ಎಂದರು.

“ವಲಸೆ ಕಾರ್ಮಿಕರ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಸರಿಯಾದ ಕ್ರಮ ಕೈಗೊಂಡಿಲ್ಲ. ಆಹಾರದ ಸೌಲಭ್ಯವಿಲ್ಲದೇ, ತವರು ರಾಜ್ಯಕ್ಕೆ ವಾಪಸ್ ತೆರಳಲು ಸರಿಯಾದ ಸಾರಿಗೆ ಸೌಕರ್ಯವಿಲ್ಲದೇ ಕಾರ್ಮಿಕರು ಪರದಾಡುತ್ತಿದ್ದಾರೆ” ಎಂದರು ಆರೋಪಿಸಿದರು. “ಕೇಂದ್ರ ಸರ್ಕಾರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಕೊರೊನಾ ಆಪತ್ತಿನ ಸಂದರ್ಭದಲ್ಲಿ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು” ಎಂದು ಸಲೀಂ ಅಹ್ಮದ್ ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಸಿದ್ಧತೆಗಳು ನಡೆದಿವೆ. ಈ ಮೂಲಕ ಬೂತ್ ಮಟ್ಟದಿಂದ ಪಕ್ಷ ಬಲವರ್ದನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಪಕ್ಷದ ತತ್ವ ಸಿದ್ಧಾಂತ, ಇತಿಹಾಸವನ್ನು ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ತಿಳಿಸಿ ಪಕ್ಷದ ಶಕ್ತಿ ವರ್ದನೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. ಬೂತ್ಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಜಿಪಿಎಸ್ ಮೂಲಕ ಕೆಪಿಸಿಸಿಗೆ ಲಿಂಕ್ ಮಾಡಿಕೊಂಡು ಮೇಲ್ವಿಚಾರಣೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು.

ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ದೇಶದ ಕೋಟಿಗಟ್ಟಲೆ ಜನತೆ ಹಾಗೂ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಪಂಚಾಯತ್, ಬ್ಲಾಕ್, ವಾರ್ಡ್ ಸೇರಿದಂತೆ ದ.ಕ. ಜಿಲ್ಲೆಯ 300 ಕಡೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಲ್ಲಿ ಸುಮಾರು 150 ಮುಖಂಡರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದು ನೇರ ಪ್ರಸಾರವಾಗಲಿದೆ. ತಂತ್ರಜ್ಞಾನ ಬಳಸಿ 8,000 ಕಡೆ ಝೂಮ್ ಮೂಲಕ ಬೆಂಗಳೂರಿನ ಕಾರ್ಯಕ್ರಮ ಇತರ ಕಡೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಸಾಕ್ಷಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಯು ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ನಾಯಕರಾದ ಎಮ್ ಎ ಗಫೂರ್, ಜಿ ಎ ಬಾವಾ, ಕಳ್ಳಿಗೆ ತಾರನಾಥ್ ಶೆಟ್ಟಿ, ಮಂಜುನಾಥ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love