ಕಾಡ್ಗಿಚ್ಚು ನಿಗ್ರಹಕ್ಕೆ ಕಟ್ಟೆಚ್ಚರ ವಹಿಸಲು ಈಶ್ವರ ಖಂಡ್ರೆ ಸೂಚನೆ

Spread the love

ಕಾಡ್ಗಿಚ್ಚು ನಿಗ್ರಹಕ್ಕೆ ಕಟ್ಟೆಚ್ಚರ ವಹಿಸಲು ಈಶ್ವರ ಖಂಡ್ರೆ ಸೂಚನೆ

ಮಂಗಳೂರು:  ಮುಂಬರುವ ಬೇಸಿಗೆಯಲ್ಲಿ ರಾಜ್ಯದ ಯಾವುದೇ ಕಾಡಿನಲ್ಲಿ ಕಾಡ್ಗಿಚ್ಚಿನಿಂದ ಹಾನಿ ಆಗದಂತೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಕಟ್ಟೆಚ್ಚರ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯದ ಕಾಡ್ಗಿಚ್ಚು ನಂದಿಸುವ ಅಣಕು ಕಾರ್ಯಾಚರಣೆ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಬಾರಿ ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಇದ್ದು, ಕಾಡ್ಗಿಚ್ಚಿನ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಸತತ ನಿಗಾ ಇಟ್ಟು ಯಾವುದೇ ಅಗ್ನಿ ದುರಂತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದರು.

ಇದಕ್ಕೂ ಮುನ್ನ ಸಚಿವರು ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಭೇಟಿ ನೀಡಿ, ಅರಣ್ಯ ಸಂರಕ್ಷಣೆ ಕುರಿತ ಬೀದಿ ನಾಟಕ ವೀಕ್ಷಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಋತುಮಾನಗಳೇ ಬದಲಾಗಿದೆ. ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ ಎಂದು ತಿಳಿಸಿದರು.

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಯುವಜನರು ಪಶು, ಪಕ್ಷಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕು. ಪ್ರಕೃತಿ ಪರಿಸರ ಉಳಿಸಬೇಕು ಎಂದು ಹೇಳಿದರು.


Spread the love