ಕಾನೂನು ಚೌಕಟ್ಟಿನಡಿಯಲ್ಲೇ ಬಗರ್ ಹುಕುಂ ಸಮಿತಿ ರಚನೆಯಾಗಿದೆ – ಕೆ. ಗೋಪಾಲ ಪೂಜಾರಿ

Spread the love

ಕಾನೂನು ಚೌಕಟ್ಟಿನಡಿಯಲ್ಲೇ ಬಗರ್ ಹುಕುಂ ಸಮಿತಿ ರಚನೆಯಾಗಿದೆ – ಕೆ. ಗೋಪಾಲ ಪೂಜಾರಿ

  • ಬಿಜೆಪಿ ಅವಧಿಯಲ್ಲಿಯೂ ಹೆಚ್ಚುವರಿಯಾಗಿ ಸಮಿತಿ ರಚನೆಯಾಗಿತ್ತು
  • ಕಾಂಗ್ರೆಸ್ ಮಾಡಿದರೆ ತಪ್ಪು, ಬಿಜೆಪಿ ಮಾಡಿದರೆ ಸರಿ ಎನ್ನುವ ವಾದ ಸರಿಯಲ್ಲ
  • ಬಿಜೆಪಿಯ ಮಂಡಲ ಅಧ್ಯಕ್ಷರು ಈ‌ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಹೆಚ್ಚುವರಿ ಸಮಿತಿಗೆ ಒಕೆ ಎಂದಿದ್ದರು
  • ರಾಜಕೀಯ ಕಾರಣಕ್ಕಾಗಿ ಅನಗತ್ಯವಾಗಿ ಮಂಡಲ ಅಧ್ಯಕ್ಷರು ಹುಯಿಲೆಬ್ಬಿಸುತ್ತಿದ್ದಾರೆ
  • ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಶೆಟ್ಟಿ ಆರೋಪಕ್ಕೆ ಮಾಜಿ ಶಾಸಕ‌ ಕೆ. ಗೋಪಾಲ ಪೂಜಾರಿ ತಿರುಗೇಟು

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈಗಾಗಲೇ ಅಂದಾಜು 32,000 ಬಗರ್ ಹುಕುಂ‌ ಅರ್ಜಿಗಳು ಬಾಕಿ ಇದ್ದು ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ‌ ಸರ್ಕಾರ ಕಾನೂನು ಚೌಕಟ್ಟಿನ‌ ಅಡಿಯಲ್ಲಿ ಹೆಚ್ಚುವರಿಯಾಗಿ ನನ್ನ ಅಧ್ಯಕ್ಷತೆಯಲ್ಲಿ ಇನ್ನೊಂದು ಬಗರ್ ಹುಕುಂ ಸಮಿತಿಯನ್ನು ರಚಿಸಿದೆ. ಇದರಿಂದ ಈಗಾಗಲೇ ರಚನೆಯಾಗಿರುವ ಶಾಸಕರ ನೇತೃತ್ವದ ಸಮಿತಿಯ ಯಾವುದೇ ಕಾರ್ಯಕಲಾಪಕ್ಕೂ ತೊಡಕಾಗುವುದಿಲ್ಲ‌ ಎಂದು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಸ್ಪಷ್ಟನೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆಯಲಾದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಅರ್ಜಿಗಳ ಸಂಖ್ಯೆ ಜಾಸ್ತಿ‌ ಇರುವುದರಿಂದ‌ ನಾನು ಶಾಸಕನಾಗಿದ್ದಾಗಲೇ ಹೆಚ್ಚುವರಿಯಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ತೀರ್ಥಹಳ್ಳಿಯಲ್ಲಿ ಶಿವಮೂರ್ತಿ ಎನ್ನುವವರನ್ನು ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಿಜೆಪಿ‌ ಸರ್ಕಾರದಲ್ಲಿ‌ ಮಾಡಿದರೆ ಸರಿ, ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದರೆ ತಪ್ಪು ಎನ್ನುವ ಬಿಜೆಪಿಯ ಮಂಡಲ ಅಧ್ಯಕ್ಷರು ಈ‌ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಹೆಚ್ಚುವರಿ ಸಮಿತಿಗೆ ಒಕೆ ಎಂದಿದ್ದರು. ಆದರೆ ಇದೀಗ ರಾಜಕೀಯ ಕಾರಣಕ್ಕಾಗಿ ಅನಗತ್ಯವಾಗಿ ಹುಯಿಲೆಬ್ಬಿಸುತ್ತಿದ್ದಾರೆ ಎಂದು ದೂರಿದರು.

ಕಳೆದ‌ ಶಾಸಕರ ಅವಧಿಯಲ್ಲಿ ಅತೀ ಹೆಚ್ಚು ಅಕ್ರಮ-ಸಕ್ರಮ ಅರ್ಜಿಗಳು ವಿಲೇವಾರಿ ಆಗಬಹುದು ಎನ್ನುವ ನಿರೀಕ್ಷೆಗಳಿದ್ದರೂ ಕೆಲವು ಕಾರಣಗಳಿಂದಾಗಿ ನಿರೀಕ್ಷೆಯಂತೆ‌ ಕ್ಷೇತ್ರದ ಜನರಿಗೆ ಪರಿಹಾರ ದೊರಕದೆ ಇರುವುದರಿಂದ‌ ಜನರ ಅನುಕೂಲಕ್ಕಾಗಿ ಅಧಿಕಾರಿಗಳಿಂದ‌ ಮಾಹಿತಿ‌ ಪಡೆದು ಕಾನೂನಾತ್ಮಕವಾಗಿಯೇ ಹೆಚ್ಚುವರಿ ಸಮಿತಿಯನ್ನು ನೇಮಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶಗಳು ಇಲ್ಲ. ಅಲ್ಲದೇ ಶಾಸಕರ‌‌ ನೇತೃತ್ವದ ಸಮಿತಿಗೆ ಅಡಚಣೆಯುಂಟು ಮಾಡಬೇಕು ಎನ್ನುವ ದುರುದ್ದೇಶಗಳು ಇಲ್ಲ. ಎರಡೂ ಸಮಿತಿಗಳು ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡಲಿದೆ. ಹತ್ತು-ಹದಿನೈದು ಸೆಂಟ್ಸ್ ಹಾಗೂ ಕಡಿಮೆ‌ ವಿಸ್ತೀರ್ಣದ ಅರ್ಜಿಗಳನ್ನು ಮೊದಲ ಆದ್ಯತೆಯಲ್ಲಿ‌ ವಿಂಗಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾಮಾಜಿಕ‌ ನ್ಯಾಯದ ಅಡಿಯಲ್ಲಿ‌ ಸಮಿತಿ ಕರ್ತವ್ಯ ನಿರ್ವಹಿಸಲಿದೆ ಎಂದರು.

ಅರಣ್ಯ ಇಲಾಖೆಯ ಡೀಮ್ಡ್ ಸಮಸ್ಯೆಯ ಕುರಿತು ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಲ್ಲಿ‌ ಪ್ರಸ್ತಾಪಿಸಲಾಗಿದ್ದು, ಜಿಲ್ಲೆಯಲ್ಲಿನ ಡೀಮ್ಡ್‌ ಸಮಸ್ಯೆಯ ಕುರಿತು ಸಮಗ್ರ ಮಾಹಿತಿ ಕೊಡಲು ಕೋರಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ‌ ನಡೆಸಲಾಗಿದ್ದು, ಸಮಸ್ಯೆ ಶೀಘ್ರದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುವುದು.

ಈ‌ ಹಿಂದೆ ಬಿಜೆಪಿ ಪಕ್ಷದ ಶಾಸಕರು ಕ್ಷೇತ್ರದಲ್ಲಿದ್ದಾಗ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಯಾವುದೇ ವೆಂಟೆಡ್ ಡ್ಯಾಮ್‌ಗಳ ಹಲಗೆ ಹಾಕುವ ಕೆಲಸದಲ್ಲಿ ನಾವು ಹಸ್ತಾಕ್ಷೇಪವನ್ನು ಮಾಡಿಲ್ಲ. ಹಾಗೂ ಅನಗತ್ಯವಾಗಿ ರಾಜಕೀಯ ಆರೋಪಗಳನ್ನೂ ಮಾಡಿಲ್ಲ. ಸಾಮಾನ್ಯವಾಗಿ ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ‌‌ ಬಂದಾಗ ಆ ಪಕ್ಷದ ಕಾರ್ಯಕರ್ತರು ಈ ರೀತಿಯ ಸಣ್ಣ-ಪುಟ್ಟ ಕಾಮಗಾರಿಗಳನ್ನು ನಿರ್ವಹಿಸುವುದು ಸರ್ವೇ ಸಾಮಾನ್ಯ. ಇದೀಗ ಕ್ಷೇತ್ರದಲ್ಲಿ ವೆಂಟೆಡ್ ಡ್ಯಾಮ್ ಗಳ ಹಲಗೆ ಹಾಕುವ ನಿರ್ವಹಣೆಯ ಕುರಿತು ರಾಜಕೀಯ ಕಾರಣಕ್ಕಾಗಿ ಆಕ್ಷೇಪ ವ್ಯಕ್ತವಾಗುತ್ತಿರುವುದು ಬೇಸರ ತಂದಿದೆ ಎಂದರು.

ಮಲ್ಪೆಯ ಪಡುಕೆರೆಯಲ್ಲಿ‌ ನಿರ್ಮಾಣ ಮಾಡಲು ಉದ್ದೇಶಿಸಿರುವ ಮರೀನಾ ಬೀಚ್‌ ಮಾದರಿಯ‌ ಯೋಜನೆಯನ್ನು ಅಂದಿನ‌ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಅದೇ ಯೋಜನೆಯನ್ನು ಬೇರೆ ಹೆಸರಿನಿಂದ‌ ಬೈಂದೂರಿನ ಸೋಮೇಶ್ವರ ಕಡಲು ಕಿನಾರೆಯಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಗಳು‌ ನಡೆಯುತ್ತಿವೆ. ಈ ಯೋಜನೆ ಸ್ಥಳೀಯರಿಗಾಗಿಯೋ ಅಥವಾ ಇನ್ನಾವುದಕ್ಕೋ ಎಂದು ಸಂಸದರು ಸ್ಪಷ್ಟಪಡಿಸಬೇಕು. ಒಂದು ವೇಳೆ ಮೀನುಗಾರರು ಹಾಗೂ ಸ್ಥಳೀಯರು ಈ ಯೋಜನೆಗೆ ವಿರೋಧ ವ್ಯಪ್ತಪಡಿಸಿದರೆ ತಾನು ಅವರೊಂದಿಗೆ ನಿಲ್ಲುವುದಾಗಿ ತಿಳಿಸಿದರು.

ಮರವಂತೆಯ ಬಂದರು ಅಭಿವೃದ್ದಿಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮಹರಾಷ್ಟ್ರ ಮೂಲದ ಗುತ್ತಿಗೆದಾರರು ವಹಿಸಿಕೊಂಡಿದ್ದಾರೆ. ಅವರು ಜಿಲ್ಲೆಯ ಉಪ ಗುತ್ತಿಗೆದಾರರೊಬ್ಬರಿಗೆ ಉಪ ಗುತ್ತಿಗೆಯನ್ನು ನೀಡಲಾಗಿದೆ ಎನ್ನುವ ಮಾಹಿತಿ‌ ಇದೆ. ಕಾಮಗಾರಿ ಮಾಡುವ ಮನಸ್ಸಿಲ್ಲದವರು ಈ‌ ಗುತ್ತಿಗೆಯನ್ನು‌ ವಹಿಸಿಕೊಂಡಿದ್ದು ಯಾಕೆ‌ ಎಂದು‌ ಪ್ರಶ್ನಿಸಿದ ಪೂಜಾರಿಯವರು, ಈ ಹಿಂದೆಯೂ ಇಲ್ಲಿ ನಿರ್ವಹಣೆಯಾದ‌ ಕಾಮಗಾರಿಗಳು ಕಳಪೆಯಾಗಿತ್ತು ಎನ್ನುವ ಆರೋಪಗಳಿದ್ದು, ಗುತ್ತಿಗೆದಾರರು ನೇರವಾಗಿ ಕಾಮಗಾರಿ‌ ಮಾಡಲು ಅಸಾಧ್ಯವಾದರೆ ಕೂಡಲೇ ಕಾಮಗಾರಿಯ ಟೆಂಡರ್ ಅನ್ನು ರದ್ದು ಪಡಿಸಿ ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಬೈಂದೂರು- ರಾಣಿಬೆನ್ನೂರು ರಾ.ಹೆದ್ದಾರಿಗೆ ಸಂಬಂಧಿಸಿದಂತೆ ಕೊಲ್ಲೂರು ಪ್ರದೇಶದಲ್ಲಿ ನಡೆಯುವ ಕಾಮಗಾರಿಗಳ ವೇಳೆ ಅಲ್ಲಿನ ಪುರಾತನ ಹಾಗೂ ಇತಿಹಾಸ ಪ್ರಸಿದ್ದವಾದ ಮಾರಿಗುಡಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದು, ಈಗಾಗಲೇ ಈ ಕುರಿತು ರಾ.ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಗುಡಿಯ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು‌ ಬಳಸಿಕೊಂಡು ಗುಡಿಯನ್ನು ಉಳಿಸಿಕೊಳ್ಳುವಂತೆ ಸಲಹೆ‌ ನೀಡಲಾಗಿದೆ. ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಕ್ಷೇತ್ರದ ಬ್ರಹ್ಮರಥೋತ್ಸವ, ನಿತ್ಯ ಉತ್ಸವ ಹಾಗೂ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ರಥಬೀದಿಯಲ್ಲೇ ರಾ.ಹೆದ್ದಾರಿಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಈ ಪ್ರಸ್ತಾಪಿತ ಯೋಜನೆಯನ್ನು ಬೈಪಾಸ್ ಮೂಲಕ ಮುಂದುವರೆಸಿಕೊಂಡು ಹೋಗುವಂತೆ ಸ್ಥಳೀಯರ‌ ಬೇಡಿಕೆ‌ ಇದ್ದು ಈ ಕುರಿತು ಪರಿಶೀಲನೆ‌ ನಡೆಸುವಂತೆ ಅಧಿಕಾರಿಗಳನ್ನು‌ ಒತ್ತಾಯಿಸಲಾಗಿದೆ. ಶೀಘ್ರದಲ್ಲೇ ಹೆದ್ದಾರಿ‌ ಇಲಾಖೆಯ ಅಧಿಕಾರಿಗಳೊಂದಿಗೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲನ್ನು ಆಲಿಸುವುದಾಗಿ ತಿಳಿಸಿದರು.

ಗಂಗೊಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಜಟ್ಟಿ ಕುಸಿತದ ಬಗ್ಗೆ ಹಿಂದಿನ ಸರ್ಕಾರ ಖಾಸಗಿಯವರಿಂದ ವರದಿಯನ್ನು‌ ಪಡೆಯಲಾಗಿದ್ದು ನಾನು ಆ ವೇಳೆಯಲ್ಲೇ ಈ ಪ್ರಕರಣದ ತನಿಖೆಯನ್ನು ಸರ್ಕಾರದ ತನಿಖಾ‌ ಸಂಸ್ಥೆಗಳ ಮೂಲಕ‌‌ ನಡೆಸುವಂತೆ ಒತ್ತಾಯಿಸಿದ್ದು, ಯಾವುದೇ ಕಾರಣಕ್ಕೂ ಖಾಸಗಿ ತನಿಖೆಯನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಮಾತುಕತೆ‌‌ ನಡೆಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುಡಿಬೆಟ್ಟು ಪ್ರದೀಪ ಶೆಟ್ಟಿಯವರು,
ಬೈಂದೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ನೀರಿನ‌ ಮೂಲಗಳನ್ನು‌ ಗುರುತಿಸಿಕೊಳ್ಲದೆ ಎಲ್ಲಿಗೆ ನೀರು ಸರಬರಾಜು‌ ಮಾಡಬೇಕು ಎನ್ನುವುದನ್ನು ನಿರ್ಧರಿಸದೆ ಕಾಮಗಾರಿಗಳನ್ನು‌ ಮಾಡಲಾಗುತ್ತಿದೆ. ಯೋಜನೆಯ ಪ್ರತಿಫಲ ಕ್ಷೇತ್ರದ ಜನರಿಗೆ ದೊರಕದೆ ಇನ್ಯಾರಿಗೋ ದೊರಕುತ್ತಿದೆ ಎನ್ನುವ ಭಾವನೆಗಳಿದ್ದು, ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕ ಅಭಿಪ್ರಾಯದಡಿಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎ‌ಂದು ಆಗ್ರಹಿಸಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅರವಿಂದ‌ ಪೂಜಾರಿ‌ ಪಡುಕೋಣೆ, ಪ್ರಮುಖರಾದ ಹರೀಶ್ ತೋಳಾರ್ ಕೊಲ್ಲೂರು, ಪ್ರಸನ್ನ ಕುಮಾರ್ ಶೆಟ್ಟಿ‌ ಕೆರಾಡಿ, ಮಂಜುನಾಥ ಪೂಜಾರಿ ಕಟ್ ಬೇಲ್ತೂರು, ಸುರೇಶ್ ಜೋಗಿ ನಾಗೂರು, ಭರತ್ ದೇವಾಡಿಗ ಬಿಜೂರು, ಮಂಜುನಾಥ್ ಪೂಜಾರಿ ಬಿಜೂರು ಇದ್ದರು.


Spread the love