ಕಾಪು ಅಭಿವೃದ್ಧಿಗೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅನಿವಾರ್ಯ; ಸೊರಕೆ

Spread the love

ಉಡುಪಿ: ಕಾಪು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತಜ್ಞರ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದ್ದು, ಆ ಯೋಜನೆಯಂತೆ ಕಾಪುವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪುರಸಭೆ ಚುನಾವಣೆಯನ್ನು ಗೆಲ್ಲುವುದು ಅನಿವಾರ್ಯ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

congress-workers-meet

ಅವರು ಕಾಪು ವೀರಭದ್ರ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಾಪು ಪುರಸಭೆಯ ಸಮಗ್ರ ಅಭಿವೃದ್ಧಿಗೆ ರೂ. 120ಕೋಟಿ ಅನುದಾನ ಬಿಡುಗಡೆ ಗೊಂಡಿದ್ದು, ಸಮಿತಿ ರಚಿಸಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. 5 ಕೋಟಿ ರೂ ವೆಚ್ಚದ ಪುರಸಭೆ ಕಟ್ಟಡ, 1.5 ಕೋಟಿ ರೂ ವೆಚ್ಚದಲ್ಲಿ ಸರಕಾರಿ ಆಸ್ಪತ್ರೆ ಅಭಿವೃದ್ಧಿ, 5 ಕೋಟಿ ರೂ ವೆಚ್ಚದಲ್ಲಿ ಸ್ಮಶಾನ, 5 ಕೆರೆ ಮತ್ತು ಪಾರ್ಕುಗಳ ಅಭಿವೃದ್ಧಿ, 2.5 ಕೋಟಿ ರೂ ವೆಚ್ಚದಲ್ಲಿ ಕಾಪು ಬೀಚ್ ಅಭಿವೃದ್ಧಿ, 64 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರು, ಒಳಚರಂಡಿ ಯೋಜನೆ, ತ್ಯಾಜ್ಯ ವಿಲೇವಾರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ನೀಲನಕಾಶೆ ಸಿದ್ದಪಡಿಸಿಕೊಂಡು ಅನುದಾನಗಳನ್ನು ಜೋಡಿಸಲಾಗಿದೆ. ಈಗಾಗಲೇ ಮೂಲ್ಕಿಯಲ್ಲಿ ಉಪ ನೋಂದಣಿ ಕಚೇರಿ ಇರುವುದರಿಂದ ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಪುವಿನಲ್ಲೇ ತೆರೆಯ ಲಾಗುವುದು. ಅಲ್ಲದೇ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿಯನ್ನು ತೆರಯಲು, ವಾಹನ ತಪಾಸಣೆ ಕೇಂದ್ರ ಸಹಿತ ನಾನಾ ಸವಲತ್ತುಗಳನ್ನು ಆರಂಭಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಚುನಾವಣೆಗೆ ಮೊದಲೇ ಇಷ್ಟೆಲ್ಲಾ ಯೋಜನೆಗಳನ್ನು ಹಾಕಿಕೊಂಡಿದ್ದು, ಇದೆಲ್ಲವುದನ್ನು ಯೋಜನಾಬದ್ದವಾಗಿ ಅನುಷ್ಠಾನಗೊಳಿಸಲು ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತದ ಅಗತ್ಯವಿದ್ದು ಕಾರ್ಯಕರ್ತರು ಇಲ್ಲಿನ ಪ್ರಜ್ಞಾವಂತ ಮತದಾರರಿಗೆ ಇದನ್ನು ಮನವರಿಕೆ ಮಾಡಿಕೊಟ್ಟು ಚುನಾವಣೆ ಗೆಲ್ಲಲು ಶ್ರಮವಹಿಸಬೇಕು ಎಂದರು.
ಪುರಸಭೆ ಯಾಗಿ ಮೇಲ್ದರ್ಜೇಗೇರಿದ್ದರಿಂದ ಮೂಲಸೌಕರ್ಯಕ್ಕಾಗಿ ರೂ. 120ಕೋಟಿ ಬಿಡುಗಡೆಯಾಗಿದೆ. ಆದರೆ, ಪುರರಸಭೆಯನ್ನಾಗಿ ಮಾಡುವುದರಿಂದ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಬಿಜೆಪಿ ಅಪಪ್ರಚಾರ ಮಾಡಿದೆ. ಇದೀಗ ತೆರಿಗೆಯ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿದೆ. ಆದರೆ, ತೆರಿಗೆ ಬಗ್ಗೆ ಜನರಿಗೆ ಯಾವುದೇ ಗೊಂದಲ ಬೇಡ ಎಂದು ಅವರು ಹೇಳಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ಕಾಪು ಪುರಸಭೆಯು ರಾಜ್ಯದಲ್ಲಿಯೇ ಆದರ್ಶ ಹಾಗೂ ಮಾದರಿ ಪುರಸಭೆಯಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಯುಪಿಎ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ಪಕ್ಷದ ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ 23 ಸೀಟುಗಳನ್ನು ಪಡೆಯಲು ಸಾಧ್ಯ ಎಂದರು.
ಇತ್ತೀಚೆಗೆ ನಡೆದ ತಾಲ್ಲೂಕು ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಜೆಡಿಎಸ್ನಿಂದ ಸ್ಪರ್ಧಿಸಿದ್ದ ಜೇಬಾ ಸೆಲ್ವನ್ ಭಾನುವಾರ ನಡೆದ ಕಾರ್ಯ ಕ್ರಮದಲ್ಲಿ ಮರಳಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆಸ್ಕರ್ ಅವರು ಜೇಬಾ ಸೆಲ್ವನ್ರಿಗೆ ಧ್ವಜ ನೀಡಿ ಸ್ವಾಗತಿಸಿದರು. ಇವರೊಂದು ಹಲವು ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಪು ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಗೋಪಾಲ ಭಂಡಾರಿ, ಎಂ.ಎ.ಗಫೂರ್, ಸರಸು ಡಿ.ಬಂಗೇರಾ, ಎಂ.ಪಿ.ಮೊಯಿದಿನಬ್ಬ, ದೇವಿಪ್ರಸಾದ್ ಶೆಟ್ಟಿ, ವಿನಯಬಳ್ಳಾಳ್, ಅಬ್ದುಲ್ ಅಝೀಝ್ ಹೆಜ್ಮಾಡಿ, ದಿವಾಕರ ಶೆಟ್ಟಿ ಕಾಪು, ಅಶೋಕ್ ಕುಮಾರ್ ಕೊಡವೂರು, ಇಗ್ನೇಶಿಯಸ್ ಡಿಸೋಜ, ಗೋಪಾಲ ಪೂಜಾರಿ ಫಲಿಮಾರು, ದಿನೇಶ್ ಕೋಟ್ಯಾನ್, ಕೇಶವ ಸಾಲ್ಯಾನ್, ಎರ್ಮಾಳು ದೀಪಕ್, ಎಚ್.ಅಬ್ದುಲ್ಲಾ, ವಿಶ್ವನಾಥ್ ಅಮೀನ್, ಗುಲ್ಶನ್, ಮನ್ಹರ್ ಇಬ್ರಾಹಿಂ ಉಪಸ್ಥಿತರಿದ್ದರು.


Spread the love