ಕಾಪು ಕ್ಷೇತ್ರವನ್ನು ಯುವಕರ ಉದ್ಯೋಗ ಸೃಷ್ಠಿಯ ಕೇಂದ್ರ ಮಾಡುವುದು ನಮ್ಮ ಮುಂದಿನ ಗುರಿ ; ವಿನಯ್ ಕುಮಾರ್ ಸೊರಕೆ

Spread the love

ಕಾಪು ಕ್ಷೇತ್ರವನ್ನು ಯುವಕರ ಉದ್ಯೋಗ ಸೃಷ್ಠಿಯ ಕೇಂದ್ರ ಮಾಡುವುದು ನಮ್ಮ ಮುಂದಿನ ಗುರಿ ; ವಿನಯ್ ಕುಮಾರ್ ಸೊರಕೆ

ಉಡುಪಿ: ಮೂಲತಃ ಪುತ್ತೂರಿನವರದಾದ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರಲ್ಲಿ ಒರ್ವರಾಗಿರುವ ವಿನಯ್ ಕುಮಾರ್ ಸೊರಕೆಯವರು ಸಮಾಜ ಸೇವಾ ಕಾರ್ಯ ಹಾಗೂ ಕಾನೂನು ಪದವೀಧರರು. ಕಾಂಗ್ರೆಸ್ ಪಕ್ಷದೊಂದಿಗೆ ಕಳೆದ ಸುಮಾಉ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಸೊರಕೆಯವರು ವಿದ್ಯಾರ್ಥಿ ಜೀವನದಿಂದಲೇ ನಾಯಕರಾಗಿ ಬೆಳೆದವರು 1982-87 ರವರೆಗೆ ರಾಜ್ಯ ಎನ್ ಎಸ್ ಯು ಐ ಅಧ್ಯಕ್ಷರಾರಿಗೆ ರಾಷ್ಟ್ರೀಯ ಯವ ಕಾಂಗ್ರೆಸ್ ಸಹಕಾರ್ಯದರ್ಶಿಯಾಗಿ ಸೇವೆ ನೀಡದವರು. 1985 ರಿಂದ 1995 ರ ತನಕ ಎರಡು ಬಾರಿ ಪುತ್ತೂರಿನ ಶಾಸಕರಾಗಿ ಆಯ್ಕೆಯಾದ ವಿನಯ್ ಕುಮಾರ್ ಸೊರಕೆಯವರನ್ನು ಕಾಂಗ್ರೆಸ್ ಪಕ್ಷ 1999 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ನೀಡುವುದರ ಮೂಲಕ ಸಂಸತ್ ಸದಸ್ಯರಾದರು. ಎರಡನೇ ಅವಧಿಯಲ್ಲಿ ಮತ್ತೊಮ್ಮೆ ಸಂಸತ್ ಕ್ಷೇತ್ರದ ಅಭ್ಯರ್ಥಿಯಾಗಿ ಸೋಲನ್ನು ಅನುಭವಿಸಿದರೂ ಕೂಡ ಯಾವುದೇ ರೀತಿಯ ತನ್ನ ಜನಸೇವೆಯನ್ನು ಮಾಡುವ ಕೆಲಸವನ್ನು ನಿಲ್ಲಿಸಲಿಲ್ಲ. 2013 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಮಯದಲ್ಲಿ ಚುನಾವಣೆಗೆ ಕೇವಲ 13 ದಿನಗಳು ಬಾಕಿ ಇರುವಾಗ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಘೋಷಿಸಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಪಕ್ಷದ ಪ್ರಚಾರದೊಂದಿಗೆ 1855 ಮತಗಳ ಅಂತರದಲ್ಲಿ ಗೆದ್ದ ಸೊರಕೆ ನಂತರ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದರು. ಕಾಪು ಕ್ಷೇತ್ರ ಇಂದು ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ವಿನಯ್ ಕುಮಾರ್ ಸೊರಕೆಯವರು ಕಾಪು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಹಾಗೂ ಇತರ ವಿಚಾರಗಳ ಕುರಿತು ಮ್ಯಾಂಗಲೋರಿಯನ್ ಡಾಟ್ ಕಾಮ್ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕಾಪು ಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ ತಾವು ಮಾಡಿದ ಸಾಧನೆ ಏನು? ಕ್ಷೇತ್ರಕ್ಕೆ ವಿನಿಯೋಗಿಸಿದ ಅನುದಾನ ಎಷ್ಟು?

ಸೊರಕೆ: ಕಾಪು ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದ ಕ್ಷೇತ್ರವಾಗಿತ್ತು ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಬಹುದು ಎನ್ನುವ ನಿಟ್ಟಿನಲ್ಲಿ ನನಗೆ ಈ ಕ್ಷೇತ್ರದಲ್ಲಿ ಟಿಕೇಟ್ ನೀಡಿದ್ದರು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಂಪರ್ಕ ರಸ್ತೆಯ ಕೊರತೆ, ವಸತಿ ಹಾಗೂ ವಿದ್ಯುತ್ ಸಮಸ್ಯೆಯ ಕೊರತೆಯನ್ನು ಕಾಪು ಕ್ಷೇತ್ರವನ್ನು ಕಾಡುತ್ತಿದ್ದವು. ಈ ಸಂದರ್ಭದಲ್ಲಿ ಕಾಪುವಿನ ಜನತೆ ನನ್ನನ್ನು ಶಾಸಕನಾಗಿ ಆಯ್ಕೆಮಾಡಿದರು. ಆಡಳಿತ ವ್ಯವಸ್ಥೆಯನ್ನು ಜನರಿಗೆ ಹತ್ತಿರದಲ್ಲಿ ಸಿಗಬೇಕು ಎನ್ನುವ ಅಪೇಕ್ಷೆಯಿಂದ ಪ್ರತಿಯೊಂದು ಗ್ರಾಮಪಂಚಾಯತಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡೆ. ಪ್ರತಿಯೊಂದು ಪಂಚಾಯತುಗಳಿಗೆ ಕಳೆದ 4.5 ವರ್ಷದ ಅವಧಿಯಲ್ಲಿ ಸತತ ಎರಡು ಬಾರಿ ಭೇಟಿ ನೀಡಿದ್ದೇನೆ. ನನ್ನ ಜೊತೆಯಲ್ಲಿ ಅಭಿವೃದ್ದಿ ಕಾರ್ಯದಲ್ಲಿ ಜಿಲ್ಲಾ ಪಂಚಾಯತು, ತಾಲೂಕು ಪಂಚಾಯತು ಸದಸ್ಯರನ್ನು ಸೇರಿಸಿಕೊಂಡು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸವನ್ನು ಹಮ್ಮಿಕೊಂಡಿದ್ದೇನೆ. ತಾನು ಪಂಚಾಯತುಗಳಿಗೆ ಭೇಟಿಕೊಂಡುವ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದರೊಂದಿಗೆ ಅಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಮಾಡಿದ್ದೇನೆ. ಇದರೊಂದಿಗೆ ಕಾಪು ಕ್ಷೇತ್ರಕ್ಕೆ ಸಾಧರಣ 1200 ಕೋಟಿಗೂ ಹೆಚ್ಚಿನ ಅನುದಾವನ್ನು ಕಾಪು ಕ್ಷೇತ್ರಕ್ಕೆ ತಂದು ಅಭಿವೃದ್ದಿ ಮಾಡುವ ಪ್ರಯತ್ನ ಮಾಡಿದ್ದೇನೆ.

ಕಾಪುವಿಗೆ ಪುರಸಭೆ ಆಗುವ ಅರ್ಹತೆ ಇಲ್ಲದೇ ಹೋದರೂ ನಿಮ್ಮ ಸಚಿವ ಸ್ಥಾನದ ಪ್ರಭಾವ ಬಳಸಿದ್ದೀರಿ ಎಂಬ ಆರೋಪ ಇದೆಯಲ್ಲಾ?

ಸೊರಕೆ: ಒಂದು ಕ್ಷೇತ್ರದಲ್ಲಿ 29 ಗ್ರಾಮ ಪಂಚಾಯತುಗಳನ್ನು ಹೊಂದಿದೆ ಒಂದು ಪುರಸಭೆ ರಚನೆಯಾಗಬೇಕಾದರೆ ಒಂದು ಕಿಮಿ ವ್ಯಾಪ್ತಿಯಲ್ಲಿ 1000 ಕ್ಕಿಂತಲೂ ಮಿಕ್ಕಿ ಜನಸಂಖ್ಯೆಯನ್ನು ಹೊಂದಿರಬೇಕು. ಆದರೆ ಇಲ್ಲಿ 2000 ಕ್ಕಿಂತಲೂ ಮಿಕ್ಕ ಜನಸಂಖ್ಯೆ ಹೊಂದಿದೆ. ಇಲ್ಲಿ ಎಲ್ಲಾ ತೆರಿಗೆಗಳು ನಗರ ಪ್ರದೇಶಕ್ಕೆ ಹೊಂದಿಕೊಂಡು ವಸೂಲಿ ಮಾಡಲಾಗುತ್ತಿತ್ತು. ಅಲ್ಲದೆ ಇಲ್ಲಿ ಹಲವಾರು ಸಮಸ್ಯೆಗಳಾದ ಕಸ ವಿಲೆವಾರಿ, ಕೊಳಚೆ ನೀರಿನ ಸಮಸ್ಯೆ, ಸಂಪರ್ಕ ರಸ್ತೆಯ ಕೊರತೆ ಕಾಡುತ್ತಿತ್ತು ಇವೆಲ್ಲವೂ ಕೂಡ ಪರಿಹಾರ ಕಾಣಬೇಕಾದರೆ ನಮಗೆ ಕಾಪು ಪುರಸಭೆಯಾಗುವುದು ಅನಿವಾರ್ಯವಾಗಿತ್ತು. ಕಾಪು ಪಟ್ಟಣ ಪಂಚಾಯತ್ ಆಗುವ ಹಂತದಲ್ಲಿತ್ತು ಆದರೆ ನಾವು ಮೂರು ಗ್ರಾಮಗಳನ್ನು ಸೇರಿಸಿಕೊಂಡು ಕಾಪುವನ್ನು ಪುರಸಭೆಯನ್ನಾಗಿ ಮಾಡಿದ್ದೇವೆ.

ವಿನಯ್ ಕುಮಾರ್ ಸೊರಕೆ ಎಂದರೆ ಕೇವಲ ಶಿಲನ್ಯಾಸ, ಉದ್ಘಾಟನೆಗೆ ಸೀಮಿತ ಎಂದು ವಿರೋಧ ಪಕ್ಷದವರ ಆರೋಪ ಇದೇಯಲ್ಲಾ?

ಸೊರಕೆ: ಶಿಲನ್ಯಾಸ ಉದ್ಘಾಟನೆಗಳನ್ನು ಮಾಡುತ್ತಿರುವುದು ನಾವು ಮಾಡುತ್ತಿರುವ ಕಾಮಗಾರಿಗಳು ಪಾರದರ್ಶಕವಾಗಿರಬೇಕು ಅಲ್ಲದೆ ನಾವು ಮಾಡುತ್ತಿರುವ ಕಾಮಗಾರಿಗಳನ್ನು ಕದ್ದು ಮುಚ್ಚಿ ಮಾಡುವುದು ಸರಿ ಅಲ್ಲ. ಕಾಮಗಾರಿಗೆ ಎಷ್ಟು ಅನುದಾನ ನೀಡಲಾಗಿದೆ, ಕಾಮಗಾರಿಯ ಪಾರದರ್ಶಕತೆಯ ಬಗ್ಗೆ ಜನರು ತಿಳಿಯಬೇಕು. ಕಾಮಗಾರಿಗೆ ವ್ಯಯವಾಗುವುದು ಜನರ ತೆರಿಗೆಯ ಹಣ ಈ ನಿಟ್ಟಿನಲ್ಲಿ ಎಲ್ಲಾ ಕಡೆಯಲ್ಲಿ ಫಲಕಗಳನ್ನು ಹಾಕಿ ಜನರ ಗಮನಕ್ಕೆ ತಂದು ಉದ್ಘಾಟನೆ ಶಿಲನ್ಯಾಸಗಳನ್ನು ಮಾಡಿದ್ದೇವೆ. ಶಿಲನ್ಯಾಸ, ಉದ್ಘಾಟನೆ ಮಾಡುವುದು ಇದೇನು ನಾನು ಆರಂಭಿಸಿದ ಪ್ರಥಮ ಪ್ರಕ್ರಿಯೆ ಅಲ್ಲ ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಅದೇ ರೀತಿಯಲ್ಲಿ ಮುಂದುವರೆದಿದೆ ಅಷ್ಟೆ.

ಹೆಜಮಾಡಿ ಬಂದರು ಕಾಪು ಜನತೆಗೆ ಕೇವಲ ಕನಸೇ ಆಗಿದೆಯಲ್ಲಾ?

ಸೊರಕೆ: ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿಗಳು ತಮ್ಮ ಮೊದಲ ಬಜೆಟಿನಲ್ಲಿ ಹೆಜಮಾಡಿ ಬಂದರನ್ನು ಘೋಷಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕೇಂದ್ರ ಸರಕಾರ 75 ಶೇ ಹಾಗೂ ರಾಜ್ಯ ಸರಕಾರ 25 ಶೇಕಡಾ ಅನುದಾನ ನೀಡುತ್ತಿತ್ತು. ಆ ಪ್ರಸ್ತಾಪವನ್ನು ಕೇಂದ್ರದಲ್ಲಿ ಕಳುಹಿಸಿಕೊಡುವಾಗ ಅಲ್ಲಿ ಯುಪಿಎ ಸರಕಾರ ಹೋಗಿ ಎನ್ ಡಿ ಎ ಸರಕಾರ ಆಡಳಿತಕ್ಕೆ ಬಂತು. ಕೇಂದ್ರ ಸರಕಾರ ಕೇವಲ 25 ಕೋಟಿ ರೂ ನೀಡುವುದಾಗಿ ಹೇಳಿದರು. ಬಳಿಕ ಸ್ಥಳೀಯ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಮೀನುಗಾರರ ನಿಯೋಗ ಕೇಂದ್ರ ಬಂದರು ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾದಾಗ ಅವರು 50 ಶೇಕಡಾ ಹಣವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು. ಅವರ ಆಶ್ವಾಸನೆ ಬಳಿಕ ನಮ್ಮ ಸರಕಾರ ಮತ್ತೊಮ್ಮೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಆದರೆ ಇದುವರೆಗೆ ಇದಕ್ಕೆ ಕೆಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಒಂದು ವೇಳೆ ಕೇಂದ್ರ ಸರಕಾರ ಅನುದಾನ ನೀಡಿದರೆ ಕೂಡಲೇ ಕೆಲಸ ಆರಂಭವಾಗಲಿದೆ.

ಕಾಪುವಿನಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸದಲ್ಲಿ ಅತೀ ಹೆಚ್ಚು ತೃಪ್ತಿ ತಂದ ಕೆಲಸ ಯಾವುದು?

ಸೊರಕೆ: ಕಾಪುವನ್ನು ತಾಲೂಕು ಆಗಿ ಘೋಷಣೆ ಮಾಡಿದ ಕೆಲಸ ನನಗೆ ಅತಿ ಹೆಚ್ಚು ತೃಪ್ತಿ ತಂದ ಕೆಲಸವಾಗಿದೆ. ನಮ್ಮಲ್ಲಿ ಎಲ್ಲಾ ಅವಕಾಶ ಇದ್ದರೂ ಕೂಡ ತಾಲೂಕು ಕೇಂದ್ರ ಆಗದೆ ಇರುವುದು ಹಿನ್ನಡೆಯಾಗಿತ್ತು. ಕಾಪು ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಒಂದು ಸರಿಯಾದ ರೂಪ ನೀಡಬೇಕಾದರೆ ಅದಕ್ಕೆ ಕಾಪು ತಾಲೂಕಾಗಿ ನಿರ್ಮಾಣಗೊಳ್ಳುವುದು ಅಗತ್ಯವಾಗಿತ್ತು. ಕಾಪು ತಾಲೂಕು ಆಗಬೇಕು ಎನ್ನುವ ಶಿಫಾರಸು ಹುಂಡೇಕರ್ ಅಥವಾ ಗದ್ದಿಗೌಡರ್ ಸಮಿತಿಯಲ್ಲಿ ಕೂಡ ಇರಲಿಲ್ಲ. ಆದರೂ ಕೂಡ ಕಾಪುವನ್ನು ತಾಲೂಕಾಗಿ ಘೋಷಣೆ ಮಾಡಿದ್ದೇವೆ. ಕಾಪು ತಾಲೂಕು ಆಗಿರುವುದರಿಂದ ಜನರಿಗೆ ಇನ್ನಷ್ಟು ಸೇವೆಗಳು ಹತ್ತಿರವಾಗಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿತ್ತು. ತಾಲೂಕು ಆಗಿರುವುದರಿಂದ 33 ಕಚೇರಿಗಳು ಬರುತ್ತವೆ ಇದರಿಂದ ಆ ಪ್ರದೇಶ ಅಭಿವೃದ್ಧಿಗೊಳ್ಳುತ್ತವೆ. ತಾಲೂಕು ಘೋಷಣೆಯಾಗುವ ಮೊದಲು ಪಂಚಾಯತ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಟ್ಟರೆ ಬೇರ್ಯಾವ ತಾಲೂಕು ಮಟ್ಟದ ಕಚೇರಿಗಳು ಇರಲಿಲ್ಲ. ಆದರೆ ಈಗ ಪುರಸಭೆಗೆ ಸುಸಜ್ಜಿತ ಕಟ್ಟಡವಾಗಿದೆ, ಮಿನಿ ವಿಧಾನಸೌಧಕ್ಕೆ ಮಂಜೂರಾತಿ ದೊರಕಿದೆ. ಕಾಪುವಿಗೆ ಪ್ರತ್ಯೇಕ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಕೂಡ ಪ್ರಸ್ತಾವನೆ ನೀಡಲಾಗಿದೆ ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳು ಅತ್ಯುತ್ತಮವಾಗಿ ನಡೆಯಲು ತಾಲೂಕು ಸಹಕಾರಿಯಾಗಲಿದೆ.

ಕಾಪುವಿಗೆ ತಂದಿರುವ ಹೊಸ ಯೋಜನೆಗಳು ಯಾವುದು?

ಸೊರಕೆ: ಕಾಪುವಿಗೆ ಹೊಸ ತಾಲೂಕು ಪುರಸಭಾ ಕಟ್ಟಡಾ ತರಲಾಗಿದೆ. ಪುರಸಭೆಗೆ 100 ಕೋಟಿ ಅನುದಾನದ ಭರವಸೆ ನೀಡಿದ್ದೇವು ಆದರೆ ರೂ 130 ಕೋಟಿ ಅನುದಾವನ್ನು ತರಲಾಗಿದೆ. 57 ಕೋಟಿ ರೂ ವೆಚ್ಚದಲ್ಲಿ ನದಿಯ ನೀರನ್ನು ಕುಡಿಯವ ನೀರು ಯೋಜನೆ ಅನುಷ್ಠಾನ, ಪಶ್ಚಿಮ ವಾಹಿನಿ, ನದಿ ತಡೆಗೋಡೆ, ದ್ವಿಪಥ ರಸ್ತೆಗಳ ನಿರ್ಮಾಣ ಹೀಗೆ ಹಲವರು ಹೊಸ ಯೋಜನೆಗಳನ್ನು ಕಾಪುವಿಗೆ ಪರಿಚಯಿಸಲಾಗಿದೆ. ಕಳೆದ 4.5 ವರ್ಷಗಳಲ್ಲಿ 20 ಹೊಸ ಸೇತುವೆಗಳನ್ನು, 23 ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಬರಡು ಹೊಂದಿದ್ದ ಕಾಪುವನ್ನು ಸಮೃದ್ದ ಕ್ಷೇತ್ರವಾಗಿ ಬದಲಾಯಿಸುವ ಕೆಲಸ ಮಾಡಲಾಗಿದೆ. ಕಾಪು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿಯನ್ನು ರಾಜ್ಯದ ಪೌರಾಡಳಿತ ಸಚಿವರೇ ಹೊಗಳಿ ತನ್ನ ಕ್ಷೇತ್ರವನ್ನು ಕಾಪುವಿನಂತೆ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರದ ಸಿಆರ್ ಎಫ್ ಅನುದಾನದ ರಸ್ತೆಯನ್ನು ಸಂಸದರ ಗಮನಕ್ಕೆ ತಾರದೆ ಉದ್ಘಾಟಿಸಿದ್ದೀರಿ ಅನ್ನೋ ಆರೋಪ ಇದೆಯಲ್ಲಾ?

ಸೊರಕೆ: ಲಾಲಾಜಿ ಮೆಂಡನ್ ಶಾಸಕರಾಗಿದ್ದಾಗ ಸಿಆರ್ ಎಫ್ ಅನುದಾನ ಬಂದರೆ ಅದನ್ನು ಮೆಂಡನ್ ಮಾಡಬಹುದು. ಕಾರ್ಕಳದಲ್ಲಿ ಸುನಿಲ್ ಕುಮಾರ್ ಸಿಆರ್ ಎಫ್ ರಸ್ತೆಗಳಿಗೆ ಅನುದಾನ ಬಂದರೆ ಅದನ್ನು ಸುನಿಲ್ ಕುಮಾರ್ ಉದ್ಘಾಟನೆ ಶಿಲನ್ಯಾಸ ಮಾಡಬಹುದು. ಕೇಂದ್ರವೇನು ಅವರ ಹಣವನ್ನು ನಮಗೆ ಕೊಡುವುದಲ್ಲ ಅಲ್ಲದೆ ಆ ಹಣ ಕೇಂದ್ರ ಸರಕಾರಕ್ಕೆ ಆಕಾಶದಿಂದ ಬೀಳುವುದಿಲ್ಲ ಬದಲಾಗಿ ನಮ್ಮ ರಾಜ್ಯದ ತೆರಿಗೆಯಿಂದ ಬಂದ ಹಣವನ್ನೇ ನಮಗೆ ವಾಪಾಸು ಕೊಡುವುದು. ನಾವು ಇಲ್ಲಿಂದ ಪ್ರಸ್ತಾಪ ಕಳಿಸಬೇಕು ಬಳಿಕ ಅದಕ್ಕೆ ಮಂಜೂರಾತಿ ಸಿಗುತ್ತದೆ. ಮಂಜೂರಾತಿ ಕಳುಹಿಸುವಾಗ, ಮಂಜೂರಾತಿ ಆಗುವಾಗ ನಮ್ಮ ಲೋಕಸಭಾ ಸದಸ್ಯರಿಗೆ ಗೊತ್ತಿಲ್ಲ ಈಗ ಮಂಜೂರಾತಿ ಆಗಿ ಕಾಮಾಗಾರಿ ಮುಗಿದ ಬಳಿಕ ನಾವು ಮಾಡಿದ್ದು ಎಂದು ಪ್ರಚಾರ ಮಾಡುತ್ತಾರೆ. ಕಾಮಗಾರಿಯನ್ನು ನಿರ್ವಹಿಸುವುದು ರಾಜ್ಯದ ಅಧಿಕಾರಿಗಳು ಅದ್ದರಿಂದ ನಮ್ಮ ಹಕ್ಕಿನ ಹಣದ ಕಾಮಗಾರಿಯನ್ನು ನಾವೇ ಉದ್ಘಾಟಿಸಿದರೆ ತಪ್ಪೇನು ಇಲ್ಲಾ.

ಮುಂದಿನ ಚುನಾವಣೆಗೆ ಕಾಂಗ್ರೆಸಿನಿಂದ ಟಿಕೇಟ್ ಸಿಗುವ ಭರವಸೆ ಇದೆಯಾ?

ಸೊರಕೆ: ಮುಂದಿನ ಚುನಾವಣೆಗೆ ಸ್ಪರ್ಧಿಸಲು ಪಕ್ಷಕ್ಕೆ ಅರ್ಜಿ ನೀಡಿದ್ದೇನೆ. ನಾನು ಕಳೆದ 42 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿದ್ದೇನೆ. ನಾನು ಶಾಸಕ, ಸಂಸದ ಮಂತ್ರಿ ಆಗುತ್ತೇನೆ ಎಂಬ ಕನಸನ್ನು ಎಂದಿಗೂ ಕಂಡವನಲ್ಲ. ನನಗೆ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ ಆದ್ದರಿಂದ ಅತ್ಯಂತ ಜಾಗ್ರತೆಯಿಂದ ನಡೆದುಕೊಂಡಿದ್ದೇನೆ. ಎಲ್ಲಿಯೂ ತಿಳಿದು ತಪ್ಪು ಮಾಡಲು ಹೋಗಿಲ್ಲ ಅಲ್ಲದೆ ಆಯ್ಕೆಯಾದ ಬಳಿಕ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಜನರ ವಿಶ್ವಾಸವನ್ನು ಗಳಿಸುವ ಕೆಲಸವನ್ನು ಮಾಡಿದ್ದೇನೆ ಅದ್ದರಿಂದ ಪಕ್ಷಕ್ಕೆ ನಾನು ಅರ್ಜಿ ನೀಡಿದ್ದೇನೆ ಪಕ್ಷ ಅದರ ತೀರ್ಮಾನ ಮಾಡಲಿದೆ.

ಕಳೆದ ಬಾರಿ ನಿಮ್ಮ ಗೆಲುವಿನ ಅಂತರ 1855 ಈ ಬಾರಿ ಅದು ಹೆಚ್ಚುತ್ತಾ?

ಸೊರಕೆ: ಕಳೆದ ಬಾರಿ ನನಗೆ ಟಿಕೇಟ್ ನೀಡಿದ ಬಳಿಕ ನನಗೆ ಸಿಕ್ಕಿದ್ದು ಕೇವಲ 12 ದಿನಗಳು ಮಾತ್ರ. ಆ ವೇಳೆ ನಮ್ಮಲ್ಲಿ ಪಕ್ಷದ ಯಾವುದೇ ಸಂಘಟನೆ ಆಗ ಇರಲಿಲ್ಲ. ಅದೇ ವೇಳೆ ಮಾಜಿ ಶಾಸಕರು ಸಚಿವರಾದ ವಸಂತ್ ಸಾಲ್ಯಾನ್ ಪಕ್ಷಾಂತರ ಮಾಡಿದ್ದರು. ಆ ವೇಳೆ ಕೇವಲ ಗ್ರಾಮೀಣ ಕಾಂಗ್ರೆಸಿನ ಪದಾದೀಕಾರಿಗಳು ಮಾತ್ರ ಇದ್ದರು. ಆದರೆ ಈ ಬಾರಿ ಹಾಗಿಲ್ಲ ನಾವು ಈಗಾಗಲೇ ಎರಡು ಬೂತ್ ಮಟ್ಟದಲ್ಲಿ ತೆರಳಿದ್ದೇವೆ, ಪಕ್ಷದಲ್ಲಿ ಸಂಘಟನೆಯ ಶಕ್ತಿಯಿದೆ ಅಲ್ಲದೆ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಇದು ನನ್ನೊಬ್ಬನ ಸಾಧನೆಯಲ್ಲ. ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದೇವೆ. ದೇವಸ್ಥಾನ, ಮಸೀದಿ, ಚರ್ಚಿನ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಸಾಧನೆ ಮಾಡಲು ಪ್ರಯತ್ನಿಸಿದ್ದೇವೆ. ಅಲ್ಲದೆ ಕಾಪು ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸಿನ ಭದ್ರಕೋಟೆಯಾಗಿತ್ತು ನಮ್ಮಲ್ಲಿ ಬಲಿಷ್ಠ ಕಾಂಗ್ರೆಸ್ ಕಾರ್ಯಕರ್ತರ ಪಡೆಯಿದ್ದು, ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ ಜನಪರ ಕಾರ್ಯಕ್ರಮಗಳಿದ್ದು, ಕಾಪುವಿನಲ್ಲಿ ಮತ್ತೆ ಕಾಂಗ್ರೆಸಿಗೆ ಜಯವಾಗಲಿದೆ.

ಕಾಪು ಕಾಂಗ್ರೆಸಿನಲ್ಲಿ ಒಗ್ಗಟ್ಟು ಇಲ್ಲ ಅನ್ನುವ ಮಾತು ಇದೆ ನಿಜನಾ? ಬೇರೊಬ್ಬರಿಗೆ ಟಿಕೇಟ್ ನೀಡಬೇಕು ಎನ್ನುವ ಲಾಬಿ ನಡೆದಿದೆ ಅಂತೆ?

ಸೊರಕೆ: ಕಾಪುವಿನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಒಗ್ಗಟ್ಟು ಬಲಿಷ್ಠವಾಗಿದೆ. ಇಡೀ ಜಿಲ್ಲೆಯಲ್ಲಿ ಕಾಪು ಬ್ಲಾಕ್ ಪಕ್ಷ ಸಂಘಟನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನನ್ನ ಬದಲಾಗಿ ಬೇರೋಬ್ಬರಿಗೆ ಟಿಕೇಟ್ ನೀಡಬೇಕು ಎಂಬ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ.

ರಾಜ್ಯದ ನಗರಾಭಿವೃದ್ದಿ ಸಚಿವರಾಗಿದ್ದಾಗ ನಿಮ್ಮ ಸಾಧನೆ ಏನು? ಉಡುಪಿಗೆ ಏನು ಕೊಡುಗೆ ನೀಡಿದ್ದೀರಿ?

ಸೊರಕೆ: ನಗರಾಭಿವೃದ್ದಿ ಸಚಿವನಾಗಿ ಪಾರದರ್ಶಕವಾದ ಆಡಳಿತ ನೀಡುವುದರೊಂದಿಗೆ ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ ನೀಡುವ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ಕೂಡ ಅತೀ ಹೆಚ್ಚು ಅನುದಾನವನ್ನು ಪಡೆಯುವ ಪ್ರಯತ್ನವನ್ನು ಕೂಡ ಮಾಡಲಾಗಿದೆ.ಇಲಾಖೆಗೆ ನೇಮಕಾತಿ ಆಗದ ಜಾಗದಲ್ಲಿ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು. ಹೊಸ ಪುರಸಭೆ, ಪಟ್ಟಣಪಂಚಾಯತ್, ನಗರಸಭೆ ರಚನೆ ಮೂರು ಮಹಾನಗರ ಪಾಲಿಕೆಗಳ ರಚನೆ ನನ್ನ ಅವಧಿಯಲ್ಲಿ ನಡೆಯಿತು. ಪ್ರಥಮ ಹಂತದಲ್ಲಿ 6 ಸ್ಮಾರ್ಟ್ ಸಿಟಿ ಮಂಜೂರಾಯಿತು. ಸ್ವಚ್ಚತೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ, ಅಮೃತ್ ಯೋಜನೆಯ ಅನುಷ್ಠಾನ ನಮ್ಮ ಅವಧಿಯಲ್ಲಿ ನಡೆಯಿತು. ಉಡುಪಿಗೆ 568 ಕೋಟಿಯ ಎಡಿಬಿ ಎರಡನೇ ಹಂತದ ಯೋಜನೆ, 198 ಕೋಟಿಯ, ಅಮೃತ್ ಯೋಜನೆ, ಒಳಚರಂಡಿ ವ್ಯವಸ್ಥೆ ನಮ್ಮ ಅವಧಿಯಲ್ಲಿ ನೀಡಿದ್ದು ನಮ್ಮ ಇಲಾಖೆ. ಪುತ್ತೂರಿಗೆ ಎಡಿಬಿ, ಪುತ್ತೂರು, ಕೋಟೆಕಾರನ್ನು ನಗರಸಭೆಯಾಗಿ ಮಾಡುವ ಕೆಲಸ ನಮ್ಮ ಅವಧಿಯಲ್ಲಿ ನಡೆದಿದೆ.

ನಿಮ್ಮ ಮಂತ್ರಿ ಪದವಿ ತಪ್ಪಿ ಹೋದದ್ದಕ್ಕೆ ಬೇಸರ ಮಾಡಿಕೊಂಡಿದ್ದಿರಂತೆ ಹೌದಾ?

ಸೊರಕೆ: ಯಾವುದೋ ಒಂದು ಕಾರಣಕ್ಕಾಗಿ ನನಗೆ ಮಂತ್ರಿಗಿರಿ ತಪ್ಪಿಲ್ಲ ಬದಲಾಗಿ ನಮ್ಮಲ್ಲಿ ಹಿರಿಯ ಶಾಸಕರಲ್ಲಿ ಓರ್ವರಾದ ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ನೀಡಬೇಕಾಗಿತ್ತು ಆದ್ದರಿಂದ ನನ್ನ ಮಂತ್ರಿ ಪದವಿ ಬಿಟ್ಟುಕೊಡಬೇಕಾಗಿ ಬಂತು ಅಷ್ಟೇ. ಇದರಲ್ಲಿ ಬೇಸರವಾಗುವ ವಿಷಯವೇನೂ ಇಲ್ಲ ಆದರೆ ಮಂತ್ರಿ ಪದವಿ ಹೋದ ಮೇಲೆ ನನ್ನ ಕ್ಷೇತ್ರಕ್ಕೆ ಸೀಮಿತಿವಾಗಿ ಅಭಿವೃದ್ದಿ ಕೆಲಸದಲ್ಲಿ ಒರ್ವ ಶಾಸಕನಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೇನೆ.

ಸಚಿವ ಪ್ರಮೋದ್ ಮಧ್ವರಾಜ್ ಮತ್ತು ನಿಮಗೆ ಅಷ್ಟಕಷ್ಟೇ ಅಂತೆ ನಿಜನಾ?

ಸೊರಕೆ: ಪ್ರಮೋದ್ ಮಧ್ವರಾಜರಿಗೂ ನನ್ನ ದ್ವೇಷಕ್ಕೂ ಯಾವುದೇ ದ್ವೇಷವಿಲ್ಲ. ಅವರಿಗೆ ಮಂತ್ರಿ ಪದವಿ ಬಂದಿರುವುದು ಅವರದೇ ಸಮಾಜದ ಬಾಬುರಾವ್ ಚಿಂಚನಸೂರು ಅವರನ್ನು ಕೈಬಿಟ್ಟ ಕಾರಣ ಬಿಟ್ಟರೆ ಬೇರ್ಯಾವುದೆ ಅರ್ಥ ಕಲ್ಪಿಸಬೇಕಾಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ನನ್ನ ಕೆಲಸಗಳನ್ನು ಮಾಡಿಕೊಂಡಿದ್ದೇನೆ ಇದರಲ್ಲಿ ಪ್ರಮೋದ್ ಮಧ್ವರಾಜ್ ಕೂಡ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ.

ರಾಹುಲ್ ಗಾಂಧಿ ಉಡುಪಿ ಬಿಟ್ಟು ನೇರ ಕಾಪುವಿಗೆ ಬರಲು ಕಾರಣ?

ಸೊರಕೆ: ರಾಹುಲ್ ಗಾಂಧಿಯವರಿಗೆ ಮಂಗಳೂರಿನ ಕಾರ್ಯಕ್ರಮ ಅತ್ಯಂತ ಪ್ರಾಮುಖ್ಯತೆಯದ್ದಾಗಿತ್ತು. ಮೊದಲು ಬೈಂದೂರಿನಿಂದ ರಾಹುಲ್ ಗಾಂಧಿಯವರ ಯಾತ್ರೆ ನಡೆಯುವುದಾಗಿ ನಿರ್ಧಾರವಾಗಿತ್ತು ಆದರೆ ಹಾಗೆ ಮಾಡಿದ್ದಲ್ಲಿ ಮಂಗಳೂರು ತಲುಪುವಾಗ ರಾತ್ರಿಯಾಗಬಹುದು ಎಂಬ ಉದ್ದೇಶದಿಂದ ಕೇವಲ ಕಾಪುವಿಗೆ ಮಾತ್ರ ಸೀಮಿತಮಾಡಲಾಯಿತು ಅಷ್ಟೇ. ರಾಹುಲ್ ಗಾಂಧಿಯವರು ಹೆಚ್ಚಿನ ಸಮಯವನ್ನು ನಮ್ಮ ಕ್ಷೇತ್ರದಲ್ಲಿ ಕಳೆಯುವದರ ಮೂಲಕ ನಾಲ್ಕು ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಿದ್ದಾರೆ,

ರಾಹುಲ್ ಗಾಂಧಿ ಕಾಪು ಭೇಟಿ ಯಶಸ್ವಿಯಾಗಿದೆಯಾ?

ಸೊರಕೆ: ರಾಹುಲ್ ಗಾಂಧಿಯವರು ಪಕ್ಷದಲ್ಲಿ ಒರ್ವ ಉತ್ತಮ ನಾಯಕರಾಗಿದ್ದು ಪಕ್ಷದಲ್ಲಿ ಹಲವು ವರ್ಷಗಳ ಅನುಭವವನ್ನು ಪಡೆದಿದ್ದಾರೆ. ರಾಹುಲ್ ಗಾಂಧಿಯವರ ವ್ಯಕ್ತಿತ್ವವನ್ನು ಕುಂಠಿತಗೊಳಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡಿದ್ದರು. ಆದರೆ ರಾಹುಲ್ ಗಾಂಧಿಯವರು ರಾಜಕೀಯದಲ್ಲಿ ಬೆಳೆಯುತ್ತಿರುವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಗುಜರಾತ್, ರಾಜಸ್ಥಾನ, ಉತ್ತರಪ್ರದೇಶದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕಂಡಾಗ ರಾಹುಲ್ ಶಕ್ತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರು ನಮ್ಮ ಭವಿಷ್ಯದ ಪ್ರಧಾನಿಗಳು ಎಂಬ ಸೂಚನೆ ಎಲ್ಲಾ ಕಡೆಯಿಂದ ಕಾಣುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಸಾಧನೆಗಳು ನಿಮ್ಮ ಗೆಲುವಿಗೆ ಪೂರಕ ವಾಗುತ್ತಾ?

ಸೊರಕೆ: ನೂರಕ್ಕೆ ನೂರು ಪಾಲು ಆಗಲಿದೆ. ನಾನು 85 ರಿಂದ ಶಾಸಕನಾಗಿ ಕೆಲಸ ಮಾಡಿದ ಅನುಭವ ಇದ್ದು, ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಆಡಳಿತ ನೀಡಿದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಅವರು. ಇದುವರೆಗೆ 13 ಬಜೆಟ್ ಮಂಡನೆ ಮಾಡಿದ್ದು ಎಲ್ಲಾ ವರ್ಗದವರಿಗೆ ಸಮಾನ ಅವಕಾಶವನ್ನು ನೀಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುದರೊಂದಿಗೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಅನುದಾನ ನೀಡುವುದರೊಂದಿಗೆ, ನೀರಾವರಿ ಯೋಜನೆಗೆ ಅನುದಾನ, ನೆನೆಗುದಿಗೆ ಬಿದ್ದ ವಾರಾಹಿ ಯೋಜನೆಗೆ ಮರುಜೀವ ನೀಡುವುದು, ಸಕ್ಕರೆ ಕಾರ್ಖಾನೆಯ ಸಮಸ್ಯೆ ಬಗೆಹರಿಸುವತ್ತ ಪ್ರಯತ್ನ, ಹೀಗೆ ಹಲವಾರು ರೀತಿಯಲ್ಲಿ ಜಿಲ್ಲೆ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನಾವು ಕೇಳಿದಷ್ಟು ಅನುದಾನವನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಗೆದ್ದರೆ ಕಾಪು ಕ್ಷೇತ್ರ ಅಭಿವೃದ್ಧಿಯಲ್ಲಿ ನಿಮ್ಮ ಪ್ರಮುಖ ಕನಸು ಏನು?

ಸೊರಕೆ: ಕಾಪುವನ್ನು ಈಗಾಗಲೇ ಹೊಸ ತಾಲೂಕಾಗಿ ಘೋಷಣೆ ಮಾಡಿದ್ದೇವೆ ಅದರ ಜೊತೆಯಲ್ಲಿ ಉದ್ಯೋಗ ಸೃಷ್ಠಿ ಮಾಡಬೇಕು ಎನ್ನುವ ಆಸೆ ನಮಗಿದೆ. ಸಾಕಷ್ಟು ಬಡ ಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದು ಅವರಿಗೆ ಸಮರ್ಪಕವಾದ ಉದ್ಯೋಗ ಲಭಿಸಿಲ್ಲ ಎಂಬ ಕೊರಗು ಇದೆ ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಠಿಯ ಯೋಜನೆಗಳನ್ನು ಹಮ್ಮಿಕೊಳ್ಳಲು ಯೋಚಿಸಿದ್ದೇವೆ. ಕೃಷಿ ಮತ್ತು ಮೀನುಗಾರಿಕೆಯ ಜೊತೆ ಪ್ರವಾಸೊದ್ಯಮಕ್ಕೆ ಒತ್ತು ಕೊಡುವುದರೊಂದಿಗೆ ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗಲಿದೆ. ಶಿಕ್ಷಣಕ್ಕಾಗಿ ಮೂಲ್ಕಿ ಅಥವಾ ಉಡುಪಿಯನ್ನು ಅವಲಂಬಿತವಾಗಿರುವ ನಾವು ಮುಂದಿನ ದಿನಗಳಲ್ಲಿ ಕಾಪುವನ್ನು ಶೈಕ್ಷಣಿಕವಾಗಿ ಬೆಳೆಸುವ ಕನಸು ಕೂಡ ಇದೆ.

ಕಾಪು ಕ್ಷೇತ್ರದ ಜನತೆಯಿಂದ ನೀವು ಏನನ್ನು ಅಪೇಕ್ಷೆ ಪಡುತ್ತೀರಿ?

ಸೊರಕೆ: ಕಾಪುವಿನಲ್ಲಿ ಕಳೆದ 5 ವರ್ಷಗಳಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದು ಕಾಪುವಿನ ಜನತೆಯ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ಕಾಪು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಶರವೇಗದಲ್ಲಿ ಮಾಡುವ ಕೆಲಸವನ್ನು ಮಾಡಿದ್ದೇವೆ. ಕಾಪುವನ್ನು ಇನ್ನಷ್ಠು ಅಭಿವೃದ್ಧಿ ಪತದತ್ತ ಕೊಂಡೊಯ್ಯುವ ಕೆಲಸ ಇನ್ನಷ್ಟು ಮಾಡಬೇಕಾಗಿದೆ ಇದಕ್ಕೆ ಎಲ್ಲಾ ಜನರ ಸಹಕಾರ, ಆಶೀರ್ವದ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲರ ಸಹಕಾರ ಮತ್ತು ಆಶೀರ್ವಾದವನ್ನು ಬೇಡುತ್ತಾ ಕಾಪುವನ್ನು ಮಾದರಿ ತಾಲೂಕು ಮಾಡುವತ್ತಾ ಪಣ ತೊಡೋಣ.

ಚಿತ್ರಗಳು ಮತ್ತು ವೀಡಿಯೋ ಸಹಕಾರ; ಪ್ರಸನ್ನ ಕೊಡವೂರು


Spread the love