ಕಾಮನಬಿಲ್ಲು  – ಕುವೈತ್ ಕನ್ನಡ ಕೂಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

 ಕಾಮನಬಿಲ್ಲು  – ಕುವೈತ್ ಕನ್ನಡ ಕೂಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

ಕುವೈತ್: ಕುವೈತಿನಲ್ಲಿ ನೆಲೆನಿಂತ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕುವೈತ್ ಕನ್ನಡ ಕೂಟ ಕಾತರದಿಂದ ಕಾಯುವ ನುಡಿ-ನಾಡ ಹಬ್ಬವೇ ಕರ್ನಾಟಕ ರಾಜ್ಯೋತ್ಸವ. ಈ ವರ್ಷದ ಕಾರ್ಯಕ್ರಮ ಶುವೈಕ್‍ನ ಕುವೈತ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇದೇ ಶುಕ್ರವಾರ, ನವೆಂಬರ್ 1 ರಂದು ಸಂಭ್ರಮೋಲ್ಲಾಸಗಳಿಂದ ಆಯೋಜಿತಗೊಂಡಿತ್ತು.

ಕಳೆದ ಮೂರ್ನಾಲ್ಕು ತಿಂಗಳ ಸದಸ್ಯರ, ಮಕ್ಕಳ ಅವಿರತ ಕಲಿಕೆ ಪರಿಶ್ರಮಗಳು ಫಲನೀಡುವ ದಿನ ಬಂದೇಬಿಟ್ಟಿತು. ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ, ರಾಜ್ಯೋತ್ಸವ ಕಾರ್ಯಕ್ರಮದ ಮಹಾ ಪ್ರಾಯೋಜಕರಾದ ವಿ. ಎಸ್. ಪಿ. ಎಲ್. ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕ್ರಂ ಪ್ರಭಾಕರ್ ರವರ ಜತೆಗೂಡಿ ಕೂಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ| ಶಶಿ ಕಿರಣ್ ಪ್ರಭು, ಉಪಾಧ್ಯಕ್ಷರಾದ ಶ್ರೀ ಪ್ರಭು ಆಚಾರ್, ಕಾರ್ಯದರ್ಶಿಗಳಾದ ಶ್ರೀ ರವಿಕಿರಣ್ ಪ್ರಭಾಕರ್ ಹಾಗೂ ಖಜಾಂಚಿ ಗಳಾದ ಶ್ರೀ ರಮೇಶ್ ನಾಯಕ್ ರವರು ಮಂಗಳ ದೀಪವನ್ನು ಪ್ರಜ್ವಲಿಸಿದರು.

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಮತ್ತು ರಂಗಕರ್ಮಿಯಾದ ಹಾಗೂ ಕಿರುತೆರೆ ಅಭಿನಯ ಮತ್ತು ನಿರ್ದೇಶನದಿಂದ ಮನೆಮಾತಾಗಿರುವ ಶ್ರೀ ಟಿ. ಎಸ್. ನಾಗಾಭರಣರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಕುವೈತ್ ಕನ್ನಡ ಕೂಟದ ಕಾರ್ಯಕ್ರಮಗಳನ್ನು ಮತ್ತು ಕೂಟದ ಸಾಂಸ್ಕೃತಿಕ ನೆಲೆಗಟ್ಟಿನ ನಿರೂಪಣೆಗಳನ್ನು ಪ್ರಶಂಸಿಸಿ ಪ್ರೋತ್ಸಾಹಿಸಲು ಭಾರತೀಯ ದೂತಾವಾಸದ ರಾಯಭಾರಿ ಮಹಾಮಹಿಮ ಶ್ರೀ ಕೆ. ಜೀವ ಸಾಗರ್ ಆಹ್ವಾನಿತ ಗಣ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮ “ಕಾಮನಬಿಲ್ಲು” ಎಂಬ ವಿಷಯ ಕೇಂದ್ರಿತ ನಿರೂಪಣೆಯಾಗಿತ್ತು. ಕೂಟದ ಮಕ್ಕಳು ಹಿರಿಯ ಸದಸ್ಯರು ಮಹಿಳೆಯರು ಬಹಳ ಉತ್ಸಾಹದಿಂದ ಪ್ರತಿಭಾ ಪ್ರದರ್ಶನ ನೀಡಿ ಪ್ರೇಕ್ಷಕರ ಮತ್ತು ಮುಖ್ಯಅತಿಥಿಗಳ ಪ್ರಶಂಸೆಗೆ ಪಾತ್ರರಾದರು. ಬದುಕಿನ ಬಗೆಬಗೆ ಬಣ್ಣಗಳ ಚಿತ್ತಾರದಂತೆ ಕಾರ್ಯಕ್ರಮದಲ್ಲಿ ಉಲ್ಲಾಸ, ಉತ್ಸಾಹ, ದೇಶಭಕ್ತಿ, ತುಂಟಾಟ ಮುಂತಾದವುಗಳನ್ನು ಬಿಂಬಿಸುವ ಕಾರ್ಯಕ್ರಮ ವೈವಿಧ್ಯಮಯವಾಗಿದ್ದು ಪ್ರೇಕ್ಷಕರ ಮನೋರಂಜನೆ ಮತ್ತು ಸಂದೇಶಗಳನ್ನು ನೀಡುವ ಕಾರ್ಯಕ್ರಮ ಅತಿಥಿಗಳಿಗೂ ಬಹಳ ಮೆಚ್ಚುಗೆಯಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪದವಿಯ ಹೊಣೆ ಹೊತ್ತ ಮುಖ್ಯ ಅತಿಥಿಗಳಾದ ಶ್ರೀ ಟಿ. ಎಸ್. ನಾಗಾಭರಣರವರು ಮಾತನಾಡುತ್ತಾ “ಹೊರದೇಶಗಳಲ್ಲಿ ಕನ್ನಡದ ಕಂಪು ಮತ್ತು ಸಂಸ್ಕೃತಿಗಳನ್ನು ಹೊರನಾಡಿಗರಿಗೆ ಪರಿಚಯಿಸುವ ಮತ್ತು ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವ ಮೂಲಕ ಕುವೈಟ್ ಕನ್ನಡಕೂಟ ನಿಜವಾದ ಅರ್ಥದ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು. ದೃಶ್ಯಮಾಧ್ಯಮಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಮುಖ್ಯ ಅತಿಥಿಗಳು “ಜವಾಬ್ದಾರಿಯುತ ಮಾಧ್ಯಮಗಳ ಬಳಕೆ ಇಂದಿನ ಅವಶ್ಯಕತೆಯಾಗಿದೆ, ಮಕ್ಕಳಲ್ಲಿ ಚರವಾಣಿ, ಮಾಧ್ಯಮಗಳ ಸದ್ಬಳಕೆಯನ್ನು ದೃಢ ಪಡಿಸುವುದು ಪೋಷಕರ ಹೊಣೆಯಾಗಿದೆ” ಎಂದು ದೃಶ್ಯಮಾಧ್ಯಮಗಳ ಆಗುಹೋಗುಗಳ ಬಗ್ಗೆ ಪ್ರೇಕ್ಷಕರಿಗೆ ವಿಸ್ತಾರವಾಗಿ ತಿಳಿಸಿದರು.

ಆಹ್ವಾನಿತ ಗಣ್ಯ ಅತಿಥಿಗಳಾದ ಮಹಾಮಹಿಮ ಶ್ರೀ ಜೀವ ಸಾಗರ್ ಅವರು ಕುವೈಟ್ ಕನ್ನಡಕೂಟ ಭಾರತೀಯ ರಾಯಭಾರ ಕಚೇರಿಯೊಂದಿಗೆ ಹೊಂದಿರುವ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರಶಂಸಿಸಿ ಕನ್ನಡ ಕೂಟದ ಮುಂಬರುವ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಯಭಾರ ಕಛೇರಿ ವತಿಯಿಂದ ಸಾಧ್ಯವಿರುವ ಸಹಾಯದ ಭರವಸೆಯನ್ನು ನೀಡಿದರು.

ದಿನದ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಸಮಿತಿ ಅಚ್ಚುಕಟ್ಟಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾದರೆ ಇತರ ಸಮಿತಿಗಳಾದ ಸಂಪರ್ಕ ಮತ್ತು ಪ್ರಚಾರ ಸಮಿತಿ, ತಾಂತ್ರಿಕ ಸಮಿತಿ, ಕ್ರೀಡಾ ಸಮಿತಿ, ಮರಳ ಮಲ್ಲಿಗೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಅದೃಷ್ಟ ಚೀಟಿ ಮತ್ತು ನಿಧಿ ಸಂಗ್ರಹ ಸಮಿತಿಗಳ ಸಹಕಾರ ಮತ್ತು ಕಾರ್ಯವನ್ನು ಪ್ರಶಂಸಿಸಿ ಕಾರ್ಯಕ್ರಮದ ಎಲ್ಲಾ ಪ್ರಾಯೋಜಕರನ್ನು ನೆನಪಿನ ಕಾಣಿಕೆ ನೀಡುವ ಮೂಲಕ ಅಭಿವಂದಿಸಲಾಯಿತು. ವಂದನಾರ್ಪಣೆಯೊಂದಿಗೆ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

Photo Album