ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿ ತಪ್ಪಿಸಿಕೊಂಡು  ಹೋಗುತ್ತಿದ್ದ ಜೋಡಿಯನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು

Spread the love

ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿ ತಪ್ಪಿಸಿಕೊಂಡು  ಹೋಗುತ್ತಿದ್ದ ಜೋಡಿಯನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು

ಮಂಗಳೂರು: ಪೋಲಿಸರು ನಿಲ್ಲಿಸಲು ಸೂಚನೆ ನೀಡಿದರೂ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿಕೊಂಡು ಹೋಗುತ್ತಿದ್ದ ಜೋಡಿಯನ್ನು ಕದ್ರಿ ಪೋಲಿಸರು ಪಂಪ್ ವೆಲ್ ಬಳಿ ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಪೋಲಿಸ್ ಮೂಲಗಳ ಪ್ರಕಾರ ಶನಿವಾರ ಮಧ್ಯಾಹ್ನ ಟ್ರಾಫಿಕ್ ಪೋಲಿಸರು ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಟಿಂಟ್ ಗ್ಲಾಸ್ ಹಾಕಿಕೊಂಡು ಬರುತ್ತಿದ್ದ ಕೇರಳ ನೋಂದಣಿಯ ಕಾರನ್ನು ಪೋಲಿಸರು ಪಂಪ್ ವೆಲ್ ಬಳಿ ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ತಪ್ಪಿಸಿಕೊಂಡು ಹೊಗಿದ್ದು ಪೋಲಿಸರು ಅವರನ್ನು ಬೆನ್ನಟ್ಟಿದ್ದು ಎಲ್ಲಾ ಟ್ರಾಫಿಕ್ ಕಂಟ್ರೋಲ್ ಕೇಂದ್ರಗಳಿಗೆ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಪೋಲಿಸರು ಬಲ್ಮಠ ಬಳಿ ಮತ್ತೆ ಕಾರನ್ನು ತಡೆಯಲು ಯತ್ನಿಸಿದ್ದಾಗ ಅಲ್ಲಿಂದಲೂ ತಪ್ಪಿಸಿಕೊಂಡು ಹೋಗಿದ್ದು, ಕದ್ರಿ ಕಂಬಳ ಕಡೆಗೆ ಹೋಗಿದೆ. ಮಾಹಿತಿ ಕದ್ರಿ ಪೋಲಿಸರಿಗೆ ಸಿಕ್ಕಿದ್ದು ಕೂಡಲೇ ಕೆಪಿಟಿ ಜಂಕ್ಷನ್ ಬಳಿ ರಸ್ತೆಯನ್ನು ಬಂದ್ ಮಾಡಿ ಕಾರಿನ ಚಾಲಕನ್ನನ್ನು ಹಿಡಿಯುವಲ್ಲಿ ಕದ್ರಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಳಿಕ ಪೋಲಿಸರು ವಿಚಾರಣೆ ನಡೆಸಿದಾಗ ಕಾರಿನ ಚಾಲಕ ತಾನು ತನ್ನ ಗೆಳೆಯನ ಕಾರನ್ನು ಕೊಂಡು ಬಂದಿದ್ದು, ತನ್ನಲ್ಲಿ ಯಾವುದೇ ಚಾಲನಾ ಪರವಾನಿಗೆ ಇಲ್ಲದಿದ್ದರಿಂದ ಹೆದರಿ ಕಾರನ್ನು ನಿಲ್ಲಿಸದೆ ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಯುವಕನ ಜೊತೆ ಇದ್ದ ಆತನ ಗೆಳತಿ ಕೂಡ ಪೋಲಿಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾಳೆ.

ಕದ್ರಿ ಪೋಲಿಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love