ಕಾರ್ಕಳ: ಸಿಡಿಲು, ಗಾಳಿ ಮಳೆಯ ಆರ್ಭಟ ಮೂರು ಜಾನುವಾರು ಬಲಿ ಅಪಾರ ನಷ್ಟ

Spread the love

ಕಾರ್ಕಳ: ತಾಲೂಕಿನಾದ್ಯಂತ ಗುರುವಾರ ಸಿಡಿಲು ಗಾಳಿ ಮಳೆ ಆರ್ಭಟದಿಂದಾಗಿ ಮೂರು ದನಗಳು ಸಾವಿಗೀಡಾಗಿರುವುದೂ ಸೇರಿದಂತೆ ಕೆಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಗುರುವಾರ ಮಧ್ಯಾಹ್ನದವರೆಗೆ ಬಾರಿ ಬಿಸಿಲಿದ್ದು, ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಲೇ ಧಾರಕಾರದ ಮಳೆ ಸುರಿದಿದೆ. ನಗರ ಸರಕಾರಿ ಆಸ್ಪತ್ರೆಯ ಮೇಲೆ ಮರ ಬಿದ್ದಿದ್ದು, ಮಹಡಿಗೆ ಹಾನಿಯಾಗಿದೆ.

ಬಜಗೋಳಿ ದರ್ಖಾಸು ಮನೆಗೆ ಸಿಡಿಲು ಬಡಿದು, ಹಾನಿಯಾಗಿದ್ದರೆ ಮನೆಯ ಯಜಮಾನ ಪೂವಪ್ಪ (60) ಸಿಡಿಲಿಗೆ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಾಗಿದೆ. ಬಜಗೋಳಿ ವಿಲ್‌ಫ್ರಡ್ ಟೆಲ್ಲಿಸ್ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಆರ್‌ಸಿಸಿ ಕಟ್ಟಡಕ್ಕೂ ಹಾನಿಯಾಗಿದೆ. ಮುಡಾರು ಗ್ರಾಮದ ಕರ್ಮರ್‌ಕಟ್ಟೆ ಬಳಿಯ ಮೂರು ಮನೆಗಳಿಗೆ ಗಾಳಿ ಮಳೆಯಿಂದಾಗಿ ಹಾನಿ ಸಂಭವಿಸಿದೆ. ಶಿರ್ಲಾಲು ಗ್ರಾಮದ ಜಯರಾಮ ಕಾಮತ್, ಜಾರ್ಕಳ ಗ್ರಾಮದ ವೀರ ಸೇನ ಇಂದ್ರ ಮರ್ಣೆ ಗ್ರಾಮದ ಶಿಶಿಲ ಪೂಜಾರಿ ಎಂಬವರಿಗೆ ಸೇರಿದ ಮೂರು ದನಗಳು ಸಿಡಿಲು ಬಡಿದು ಸಾವಿಗೀಡಾಗಿವೆ.


Spread the love