ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 20 ಕೋಟಿ ವೆಚ್ಚ- ಪ್ರಮೋದ್ ಮಧ್ವರಾಜ್

Spread the love

ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 20 ಕೋಟಿ ವೆಚ್ಚ- ಪ್ರಮೋದ್ ಮಧ್ವರಾಜ್

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಿಂಟಿ ಅಣೆಕಟ್ಟುಗಳ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ 20 ಕೋಟಿ ರೂ ಗಳಿಗೆ ಅಧಿಕ ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ , ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಬುಧವಾರ, ಚಾಂತಾರು ಅಂಗಡಿನೆಟ್ಟು ನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಉದ್ಘಾಟನೆ ಮತ್ತು ನೀಲಾವರ- ಕೆಳ ಕುಂಜಾಲು ಉಳ್ಳೂರು ಮನೆ ಬಳಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕೃಷಿಗೆ ಅಗತ್ಯ ನೀರು ಒದಗಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಠಿಯಿಂದ ಕ್ಷೇತ್ರದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲಗಳಾಗಿದ್ದು, ನೀರಿನ ಅಂರ್ತಜಲ ಮಟ್ಟ ಏರಿಕೆಯಾಗಿದೆ ಅಲ್ಲದೆ ಕುಡಿಯುವ ಹಾಗೂ ಕೃಷಿಗೆ ಬಳಸುವ ನೀರಿಗೆ , ಉಪ್ಪು ನೀರು ಬೆರೆಯುವ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು.

ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಬಗ್ಗೆ , ಹಲಗೆಗಳ ಗುಣಮಟ್ಟ ಹಾಗೂ ನೀರು ಸೋರಿ ಹೋಗುವ ಬಗ್ಗೆ ಕೆಲವು ಕಡೆ ಸಾರ್ವಜನಿಕರಿಂದ ದೂರುಗಳನ್ನು ಬಂದಿದ್ದು, ಅಂತಹ ಕಿಂಡಿ ಅಣೆಕಟ್ಟುಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಸಚಿವರು, ಯಾವುದೇ ಕಾರಣಕ್ಕೂ ಕಾಮಗಾರಿಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುವಂತೆ ಪ್ರಮೋದ್ ಎಚ್ಚರಿಕೆ ನೀಡಿದರು.

ಇಂದು ಒಟ್ಟು 4.25 ಕೋಟಿ ವೆಚ್ಚದ 15 ವಿವಿಧ ಕಿಂಡಿ ಅಣೆಕಟ್ಟು ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಸಚಿವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ನಾಯಕ್, ನೀಲಾವರ ಗ್ರಾಮ ಪಂಚಾಯತ್ ಅದ್ಯಕ್ಷೆ ಆಶಾ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪಾಲಣ್ಣ ಮತ್ತಿತರರು ಉಪಸ್ಥಿತರಿದ್ದರು.


Spread the love