ಕುಂದಾಪುರ: ಅಕ್ರಮ ಚಿನ್ನ ಸಾಗಾಟ – ಭಟ್ಕಳ ಮೂಲದ ಹನ್ನೊಂದು ಮಂದಿ ಬಂಧನ

ಕುಂದಾಪುರ: ಅಕ್ರಮ ಚಿನ್ನ ಸಾಗಾಟ – ಭಟ್ಕಳ ಮೂಲದ ಹನ್ನೊಂದು ಮಂದಿ ಬಂಧನ

ಕುಂದಾಪುರ: ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಟ್ಕಳ ಮೂಲದ ಹನ್ನೊಂದು ಮಂದಿಯನ್ನು ಬುಧವಾರ ಪೊಲೀಸರು ಕುಂದಾಪುರದ ವಡೇರಹೋಬಳಿ ಬಳಿಯ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ನವೀದ್(23), ಮಹಮ್ಮದ್ ಖಲೀಲ್(62), ಮಹಮ್ಮದ್ ಆಸಿಮ್(23), ಫೈಜ್ ಅಹಮ್ಮದ್ ಮವಾನ್(29), ಮಹಮ್ಮದ್ ಅದ್ನಾನ್ (25), ಮುಸ್ಜಬಾ ಕಾಸಿಮ್(25), ಉಮೈರ್ ಅಹಮ್ಮದ್(32), ವಾಸಿಫ್ ಅಹಮ್ಮದ್(27), ಮುಜಮ್ಮಿಲ್(38), ಜಮೀಲ್(42) ಮತ್ತು ಮೀರ್ ಸಮೀರ್(34) ಎಂದು ಗುರುತಿಸಲಾಗಿದೆ.

ಬುಧವಾರ ದುಬಾಯಿ ಯಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದ ಭಟ್ಕಳದ ಮೂಲದ ವ್ಯಕ್ತಿಗಳು ಕ್ಯಾಲಿಕಟ್ ನಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ಭಟ್ಕಳಕ್ಕೆ ಟವೇರಾ ವಾಹನದಲ್ಲಿ ಅಕ್ರಮ ಚಿನ್ನವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಅವರ ನಿರ್ದೇಶನದಂತೆ, ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಜೈ ಶಂಕರ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಗೋಪಿಕೃಷ್ಣ ಕೆ ಆರ್ ಅವರು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ವಡೇರ ಹೋಬಳಿ ಪ್ರಭು ಪೆಟ್ರೋಲ್ ಬಂಕ್ ಬಳಿ KA05AD7524, KA05AD4970 ಟವೇರಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ತಪಾಸಣೆ ಮಾಡಿ KA05AD7524 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವೀದ್, ಮಹಮ್ಮದ್ ಖಲೀಲ್, ಮಹಮ್ಮದ್ ಆಸಿಮ್, ಫೈಜ್ ಅಹಮ್ಮದ್ ಮವಾನ್, ಮಹಮ್ಮದ್ ಅದ್ನಾನ್ ಅವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಲ್ಲಿದ್ದ ಒಟ್ಟು 1152.47 ಗ್ರಾಂ ತೂಕದ ಚಿನ್ನದ ಕಾಯಿನ್ ಗಳನ್ನು ವಶಪಡಿಸಿಕೊಂಡಿದ್ದು, KA05AD4970 ಪ್ರಯಾಣಿಸುತ್ತಿದ್ದ ಮುಸ್ಜಬಾ ಕಾಸಿಮ್, ಉಮೈರ್ ಅಹಮ್ಮದ್, ವಾಸಿಫ್ ಅಹಮ್ಮದ್, ಮುಜಮ್ಮಿಲ್, ಜಮೀಲ್, ಮೀರ್ ಸಮೀರ್ ಅವರುಗಳನ್ನು ವಿಚಾರಣೆ ಮಾಡಿ ಬಳಿಕ ಹೆಚ್ಚಿನ ವಿಚಾರಣೆ ಬಗ್ಗೆ ಕಮೀಷನರ್ ಆಫ್ ಕಸ್ಟಮ್ ಮಂಗಳೂರು ಅವರಿಗೆ ಹಸ್ತಾಂತರಿಸಲಾಗಿದೆ.

ಬಂಧಿತರಿಂದ ಒಟ್ಟು ರೂ 46 ಲಕ್ಷ ಮೌಲ್ಯದ ಚಿನ್ಹ ಹಾಗೂ ರೂ 10 ಲಕ್ಷ ಮೌಲ್ಯದ ವಾಹನ ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ ರೂ 56 ಲಕ್ಷ ಆಗಿರುತ್ತದೆ.

ಅಲ್ಲದೆ ಬೈಂದೂರು ವೃತ್ತ ನಿರೀಕ್ಷಕರಾದ ಸುರೇಶ್ ನಾಯಕ್ ಅವರು ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿನಿಂದ ಭಟ್ಕಳಕ್ಕೆ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಅವರಲ್ಲಿದ್ದ ಅಕ್ರಮ ಚಿನ್ನ ಒಟ್ಟು 231 ಗ್ರಾಂ ವಶಕ್ಕೆ ಪಡೆದುಕೊಂಡಿದ್ದು ಇದರ ಒಟ್ಟು ಮೌಲ್ಯ ರೂ 9 ಲಕ್ಷ ಆಗಿರುತ್ತದೆ.