ಕುಂದಾಪುರ: ಕಾಮಗಾರಿ ಪೂರ್ಣಗೊಳ್ಳದೆ ನೀರು ಹಾಯಿಸಿದ ಪರಿಣಾಮ ವಾರಾಹಿ ಕಾಲುವೆ ಒಡೆದು ಅಪಾರ ಕೃಷಿ ಹಾನಿ

Spread the love

ಕುಂದಾಪುರ: ಸದಾ ಒಂದಿಲ್ಲೊಂದು ನೆಪದಲ್ಲಿ ಸುದ್ಧಿಯಲ್ಲಿರುವ ವಾರಾಹಿ ಯೋಜನೆಯ ಅನುಷ್ಟಾನದಲ್ಲಿ ಅಧಿಕಾರಿಗಳು ನಡೆಸಿದ ನಿರ್ಲಕ್ಷ್ಯಕ್ಕೆ ಕಾಲುವೆ ಒಡೆದು ಹೋಗಿ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ತೋಟಕ್ಕೆ ನುಗ್ಗಿದ ಪರಿಣಾಮ ಸುಮಾರು ಹತ್ತು ಕುಟುಂಬಗಳ ಮೂವತ್ತೈದು ಎಕ್ರೆಗೂ ಮಿಕ್ಕಿ ಕೃಷಿ ಭೂಮಿ ಹಾನಿಯಾದ ಘಟನೆ ವಾರಾಹಿ ಎಡದಂಡೆ ಯೋಜನೆಯ 23ನೇ ಕಿಲೋಮೀಟರ್‍ನಲ್ಲಿ ಭಾನುವಾರ ಸಂಜೆ ಏಳು ಗಂಟೆಗೆ ಮೊಳಹಳ್ಳಿಯ ಬಾಸಬೈಲ್ ಮಠ ಎಂಬಲ್ಲಿ ನಡೆದಿದೆ.

21knd1 21knd2 21knd3 21knd4 21knd5 21knd6

ವಾರಾಹಿ ಎಡದಂಡೆ ನಾಲೆಯ 23ನೇ ಕಿ.ಮಿ.ನಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ ಕಾಲುವೆಯಲ್ಲಿ ನೀರು ಹರಿಸಲಾಗಿದ್ದು, ಭಾನುವಾರ ಸುರಿದ ಭಾರೀ ಮಳೆಗೆ ಉಕ್ಕಿ ಹರಿದ ಕಾಲುವೆಯ ನೀರು ದಂಡೆ ನಿರ್ಮಾಣ ಮಾಡದೇ ಇರುವ ಜಾಗದಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಸುಮಾರು 25 ಎಕ್ರೆ ಭತ್ತದ ಗದ್ದೆ ಹಾಗೂ 15 ಎಕ್ರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಇಷ್ಟಾದರೂ ವಾರಾಹಿ ಅಧಿಕಾರಿಗಳು ಕಾಲುವೆಯಲ್ಲಿ ನೀರು ಹಾಸುವುದನ್ನು ನಿಲ್ಲಿಸದ ಪರಿಣಾಮ ಸೋಮವಾರವೂ ಭತ್ತದ ಗದ್ದೆ ಹಾಗೂ ಅಡಿಕೆ ತೋಟ ಶೇಡಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಅಡಿಕೆ ತೋಟ ಕೃಷಿ ಮಾಡಲು ಅಸಾಧ್ಯವಾದ ಸ್ಥಿತಿಗೆ ಬಂದರೆ ಗದ್ದೆಯಲ್ಲಿ ಹರಿದ ಶೇಡಿಮಣ್ಣಿನ ನೀರು ನೇಜಿಯನ್ನು ಮುಚ್ಚಿ ಹಾಕುವ ಮೂಲಕ ಭತ್ತದ ಗದ್ದೆಯನ್ನೇ ನಾಶ ಮಾಡಿದೆ.

ಬಾಸನಬೈಲ್ ವಿರೂಪಾಕ್ಷಯ್ಯ, ನಾಗೇಶಯ್ಯ, ಪ್ರಭಾಕರಯ್ಯ, ಗಂಗಾಧರಯ್ಯ, ರಾಜಯ್ಯ, ಶಿವಲಿಂಗಯ್ಯ, ದಯಾನಂದ, ವತ್ಸಲಾ, ವಾಣಿಶೆಟ್ಟಿ, ವಿಠ್ಠು ಕುಲಾಲ್, ಚಂದ್ರಮೋಹನ್ ಶೆಟ್ಟಿಯವರಿಗೆ ಸೇರಿದ್ದ ಜಾಗದಲ್ಲಿರುವ ಭತ್ತದ ಹಾಗೂ ಅಡಿಕೆ ತೋಟಕ್ಕೆ ನೀರು ನುಗ್ಗಿದ್ದರಿಂದ ಸುಮಾರು ಅಂದಾಜು 25 ಎಕ್ರೆ ಭತ್ತದ ಗದ್ದೆ ಹಾಗೂ 15 ಎಕ್ರೆಯಷ್ಟು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಸೋಮವಾರವೂ ಕಾಲುವೆಯಲ್ಲಿ ನಿರಂತರವಾಗಿ ಹರಿಯುತ್ತಿರುವ ವಾರಾಹಿ ನದಿ ನೀರು ಕಾಲುವೆಯ ಮೇಲ್ಭಾಗದ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿರುವುದರ ಪರಿಣಾಮ ಕುಸಿತಕ್ಕೊಳಗಾದ ಲೋಡುಗಟ್ಟಲೆ ಶೇಡಿ ಮಣ್ಣು ತೋಟ ಹಾಗೂ ಗದ್ದೆಯನ್ನು ಸೇರುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ವಾರಾಹಿ ನೀರಾವರಿ ಯೋಜನೆಯಲ್ಲಿ ಎರಡು ನಾಲೆಗಳಿದ್ದು, ಸಿದ್ಧಾಪುರದಿಂದ ಆರಂಭಗೊಳ್ಳುವ ಬಲದಂಡೆ ಕಾಳುವೆಯಲ್ಲಿ ಸುಮಾರು 18 ಕಿ,ಮೀ ದೂರ ಕಾಮಗಾರಿಯಾಗಿದ್ದರೂ ಇಲ್ಲಿ ಯಾವುದೇ ಔಟ್‍ಲೆಟ್(ಹೆಚ್ಚಾದ ನೀರು ಹೊರಹೋಗುವ ವ್ಯವಸ್ಥೆ) ಇಲ್ಲ. ಅದೇ ರೀತಿ ಸುಮಾರು ಮೂವತ್ತು ಕಿ.ಮೀ. ದೂರದ ವರೆಗೆ ಎಡದಂಡೆ ನಾಲೆಯನ್ನು ಆರಂಭಿಸಲಾಗಿದ್ದು, ಇಲ್ಲಿಯೂ ಔಟ್‍ಲೆಟ್ ಇಲ್ಲ ಮತ್ತು ಎಲ್ಲಾ ಕಡೆಗಳಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಮುಗಿದಿಲ್ಲ. 23ನೇ ಕಿ.ಮೀ ಪ್ರದೇಶವಾದ ಬಾಸಬೈಲ್ ಮಠ ಎಂಬಲ್ಲಿ ಕಾಮಗಾರಿ ನಡೆಯತ್ತಿದ್ದು, ಕೆಲವು ಪ್ರದೇಶಗಳಲ್ಲಿ ಕಾಮಗಾರಿ ಅನುಷ್ಟಾನ ನಡೆಸಬೇಕಾದ ಡ್ರಾಯಿಂಗ್ ಮಂಜೂರಾಗಿರಲಿಲ್ಲ. ಇದೇ ಸಂದರ್ಭ ಬಿರುಸುಗೊಂಡ ಮಳೆಯ ನೀರು ಹಾಗೂ ವಾರಾಹಿ ಕಾಲುವೆಯಲ್ಲಿ ಹರಿವ ನೀರು ಹಾಗೂ ಈ ಪ್ರದೇಶದಲ್ಲಿ ಗಟ್ಟಿಯಲ್ಲದ ಶೇಡಿ ಮಣ್ಣು ಎಲ್ಲದರ ಪರಿಣಾಮ ಘಟನೆ ಸಂಭವಿಸಿದೆ. ಮಳೆಗಾಲದಲ್ಲಿಯೂ ಔಟ್‍ಲೆಟ್ ಇಲ್ಲದೇ ಅವೈಜ್ಞಾನಿಕವಾಗಿ ನೀರು ಹರಿಯಬಿಟ್ಟಿರುವುದು ಸರಿಯಲ್ಲ ಎನ್ನುವ ಆರೋಪ ಕೇಳಿಬಂದಿದೆ. ಒಟ್ಟಾರೆಯಾಗಿ ಇದುವರೆಗೆ ವಾರಾಹಿ ಯೋಜನೆ ಫಲಾನುಭವಿಗಳೆನ್ನಬಹುದಾದ ಯಾವುದೇ ರೈತರಿಗೂ ಒಂದು ನಯಾ ಪೈಸೆಯ ಪ್ರಯೋಜನವಾಗಿಲ್ಲ. ಇದರ ನೇರ ಲಾಭ ಯೋಜನೆಯ ಇಂಜಿನಿಯರ್ಗಳಿಗೆ, ಗುತ್ತಿಗೆದಾರರಿಗೆ ಹಾಗೂ ಮಂತ್ರಿ ಮಹೋದಯರಿಗೆ ಹೊರತು ಮತ್ಯಾರಿಗೂ ಅಲ್ಲ ಎನ್ನುವ ಸತ್ಯ ಭಾನುವಾರ ಸುರಿದ ಮಳೆಯಿಂದಾಗಿ ಸಾಬೀತಾಗಿದೆ.


Spread the love