ಕುಂದಾಪುರ ಗ್ರಾಮಾಂತರ ಠಾಣೆಗೆ ಮರಳುಗಳ್ಳರಿಂದ ಕಲ್ಲೆಸೆತ: ನಾಲ್ವರ ಬಂಧನ

ಕುಂದಾಪುರ ಗ್ರಾಮಾಂತರ ಠಾಣೆಗೆ ಮರಳುಗಳ್ಳರಿಂದ ಕಲ್ಲೆಸೆತ: ನಾಲ್ವರ ಬಂಧನ

ಕುಂದಾಪುರ: ಅಕ್ರಮ ಮರಳುಗಾರಿಕೆ ಸಂಬಂಧ ಓಮ್ನಿ ಕಾರನ್ನು ವಶಪಡಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಪೊಲೀಸರ ಕ್ರಮವನ್ನು ವಿರೋಧಿಸಿ ದುಷ್ಕರ್ಮಿಗಳು ಕಂಡ್ಲೂರಿನಲ್ಲಿರುವ ಠಾಣೆಗೆ ಕಲ್ಲೆ ಎಸೆದು, ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಗುರುವಾರ ರಾತ್ರಿ 10:20ರ ಸುಮಾರಿಗೆ ನಡೆದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ನಾಯ್ಕ ಮೇ 16ರಂದು ಸಂಜೆ ವೇಳೆ ಅಕ್ರಮ ಮರಳು ಸಾಗಿಸುತ್ತಿದ್ದ ಆರೋಪದಲ್ಲಿ ಓಮ್ನಿ ಕಾರನ್ನು ವಶಕ್ಕೆ ಪಡೆದು ಠಾಣೆಗೆ ತಂದಿದ್ದರು. ಠಾಣೆ ಸಿಬ್ಬಂದಿಯವರು ವಾಹನವನ್ನು ಠಾಣೆಯ ಆವರಣದಲ್ಲಿ ಇರಿಸಿ ಠಾಣೆಯ ಕಡೆ ಬರುತ್ತಿದ್ದರೆನ್ನಲಾಗಿದೆ.

ಈ ವೇಳೆ ಕಂಡ್ಲೂರಿನ ಶಾಹಿದ್ ಬೆಟ್ಟೆ(30), ಝಾಕಿರ್ ಹುಸೇನ್(32), ಕರಾಣಿ ಶಾಕಿರ್(24), ತಬ್ರೇಝ್ ಸಾಹೇಬ್(26), ನೌಶಾದ್ ಆಲಿಕೋಟೆ, ಕರಾಣಿ ಮುಸೀನ್, ಶಾಹಿದ್, ಕರಾಣಿ ನದೀಮ್, ಕರಾಣಿ ಶಾಹಿದ್, ರಯಾನ್, ಕರಾಣಿ ಬಿಲಾಲ್, ಕರಾಣಿ ಮನ್ಸೂರ್, ಮಹಮ್ಮದ್, ಸದಾಕತ್, ಜಿಮ್ಮಿ ಜೆಫ್ರಿ, ಅಬ್ದುಲ್ಲ, ಫಹಾದ್, ನಹೀಮ್, ಹಮೀದ್ಸೇರಿ ಸೇರಿದಂತೆ ಸುಮಾರು 30 ಮಂದಿ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಠಾಣೆಯ ಎದುರು ಜಮಾಯಿಸಿ, ಸಿಬ್ಬಂದಿಯನ್ನು ಸುತ್ತುವರಿದು ತಡೆದು ನಿಲ್ಲಿಸಿದ ಅವರು, ‘ನಮ್ಮ ಹುಡುಗರು ಹೊಯಿಗೆ ಸಾಗಾಟ ಮಾಡಿದರೆ ಅವರನ್ನೆ ಹಿಡಿಯುತ್ತೀರಿ, ನಮ್ಮ ವಾಹನದ ಮೇಲೆ ಕೇಸು ಮಾಡಬೇಡಿ, ಬಿಟ್ಟುಬಿಡಿ’ ಎಂದು ಗದರಿಸಿ ಸಿಬ್ಬಂದಿಯನ್ನು ಕೈಯಿಂದ ತಳ್ಳಿದ್ದರೆನ್ನಲಾಗಿದೆ. ಇದೇ ವೇಳೆ ಉದ್ರಿಕ್ತ ಗುಂಪು ಠಾಣೆಯ ಮೇಲೆ ಕಲ್ಲನ್ನು ಎಸೆದಿದ್ದಾರೆಂದು ದೂರಲಾಗಿದೆ.

ಅಕ್ರಮ ಕೂಟ ಸೇರಿ ಸಾರ್ವಜನಿಕ ಸೊತ್ತಾಗಿರುವ ಪೊಲೀಸ್ ಠಾಣೆಯ ಕಟ್ಟಡಕ್ಕೆ ಕಲ್ಲುಗಳನ್ನು ಎಸೆದು ಹಾನಿ ಮಾಡಿ, ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ ರುವುದಾಗಿ ಠಾಣಾ ಉಪನಿರೀಕ್ಷಕ ಶ್ರೀಧರ್ ನಾಯ್ಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಾಹಿದ್ ಬೆಟ್ಟೆ(30), ಝಾಕಿರ್ ಹುಸೇನ್(32), ಕರಾಣಿ ಶಾಕಿರ್(24), ತಬ್ರೇಜ್ ಸಾಹೇಬ್(26)ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಒಂದು ಗಂಭೀರ ಪ್ರಕರಣವನ್ನಾಗಿ ಪರಿಗಣಿಸಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ವ್ಯಾಪಕ ಬಂದೋಬಸ್ತ್ ನಡೆಸಲಾಗಿದ್ದು, 4 ಕಡೆ ಚೆಕ್ ಪೋಸ್ಟ್ ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಪಿಕೆಟಿಂಗ್ ಪಾಯಿಂಟ್ ಗಳನ್ನು ಹಾಗೂ ರಾತ್ರಿ ರೌಂಡ್ಸ್ ನ್ನು ಬಿಗುಗೊಳಿಸಲಾಗಿದೆ.

ಉಳಿದ ಆರೋಪಿಗಳ ಪತ್ತೆಗಾಗಿ ನುರಿತ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಪೈಕಿ 9 ಜನರು ರೌಡಿ ಶೀಟರ್ ಹೊಂದಿರುತ್ತಾರೆ. ಇಬ್ಬರು ಎಂಒಬಿ ಶೀಟ್ ಹೊಂದಿದ್ದು, 6 ಜನ ಆರೋಪಿಗಳು 2017ರಲ್ಲಿ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಆರೋಪಿಗಳಾಗಿರುತ್ತಾರೆ.

ಠಾಣೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ. ಠಾಣೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏಪಡಿರ್ಸಲಾಗಿದೆ.