ಕುಂದಾಪುರ: ಶಾಸಕ ಹಾಲಾಡಿಯವರಿಗೆ ಮತ್ತೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ

Spread the love

ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸತತ ಎರಡನೇ ದಿನ ಮಂಗಳವಾರ ಕೂಡ ಭೂಗತ ಜಗತ್ತಿನಿಂದ ರವಿ ಪೂಜಾರಿ ಹೆಸರಿನಲ್ಲಿ ಕರೆಗಳು ಬಂದಿದ್ದು, ಶಾಸಕರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಸೋಮವಾರ ಮಧ್ಯಾಹ್ನ 12 ಗಂಟೆಯಿಂದ 12.30ರ ನಡುವೆ ಹಣಕ್ಕಾಗಿ ಬೇಡಿಕೆ ಮುಂದಿಟ್ಟು ಕರೆ ಮಾಡಿದ್ದ ಭೂಗತ ಪಾತಕಿ ರವಿ ಪೂಜಾರಿ, ಹಣ ನೀಡದಿದ್ದಲ್ಲಿ ಫಿನಿಶ್ ಮಾಡುವುದಾಗಿ ಬೆದರಿಸಿದ್ದ. ಶಾಸಕರು ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಪೊಲೀಸ್ ಕಾವಲು ಅಲ್ಲದೆ ಗನ್‌ಮೆನ್ ನೀಡಲಾಗಿತ್ತು. ಮಂಗಳವಾರ 2 ಗಂಟೆಗೆ ಮೊಬೈಲ್‌ಗೆ ಕರೆ ಬಂದಿದ್ದು ಶಾಸಕರ ಆಪ್ತ ಸಹಾಯಕರು ಕರೆ ಸ್ವೀಕರಿಸಿದ್ದರು. ತಾನು ರವಿ ಪೂಜಾರಿ ಮಾತನಾಡುವುದು ಎಂದಾಗ ಶಾಸಕರು ಬಾತ್‌ರೂಮ್‌ನಲ್ಲಿದ್ದಾರೆ ಎಂದು ತಿಳಿಸಿದಾಗ ಕರೆ ಕಡಿತಗೊಂಡಿದೆ. ಬಳಿಕ 4 ಗಂಟೆಗೆ ಮತ್ತೆ ಕರೆ ಬಂದಿದ್ದು ಎಸ್ಪಿ ಆದೇಶದಂತೆ ಕರೆ ಸ್ವೀಕರಿಸಿಲ್ಲ.

ಭೂಗತ ಪಾತಕಿ ರವಿ ಪೂಜಾರಿಯ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿವಾಸಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಶಾಸಕರಿಗೆ ಕರೆ ಮಾಡಿದ ವ್ಯಕ್ತಿ ರವಿ ಪೂಜಾರಿಯೇ ಅಥವಾ ಅನ್ಯರೆ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಕರೆ ಮಾಡಿದ ನಂಬರ್‌ನ ಲೋಕೇಶನ್ ತೆಗೆದಾಗ ಬ್ಯಾಂಕಾಕ್ ತೋರಿಸಿದೆ. ಈ ಹಿಂದೆ ಈತ ಅನ್ಯರಿಗೆ ಮಾಡಿರುವ ಕರೆಯ ಧ್ವನಿಮುದ್ರಣ ಶಾಸಕರಿಗೆ ತೋರಿಸಿದ್ದು ಇದೆ ಧ್ವನಿ ಕರೆ ನನಗೆ ಬಂದಿರುವುದು ಎಂದು ಖಚಿತಪಡಿಸಿದ್ದಾರೆ. ಈ ನೆಲೆಯಲ್ಲಿ ಇಲಾಖೆ ತೀವ್ರಗತಿಯಲ್ಲಿ ತನಿಖೆ ಆರಂಭಿಸಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.


Spread the love