ಕುಂದಾಪುರ ಶಾಸ್ತ್ರೀ ಸರ್ಕಲ್ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ – ಶೋಭಾ ಕರಂದ್ಲಾಜೆ

ಕುಂದಾಪುರ ಶಾಸ್ತ್ರೀ ಸರ್ಕಲ್ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ – ಶೋಭಾ ಕರಂದ್ಲಾಜೆ

ಕುಂದಾಪುರ: ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಬೆಳಿಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು.

ಹಲವು ಪ್ರತಿಭಟನೆಗಳ ಬಳಿಕ ಕಳೆದ ಕೆಲ ದಿನಗಳಿಂದ ವೇಗವಾಗಿ ಸಾಗುತ್ತಿರುವ ಇಲ್ಲಿನ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕಾಮಗಾರಿಯನ್ನು ಶುಕ್ರವಾರ ಬೆಳಿಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ವೀಕ್ಷಿಸಿ ಮಾಹಿತಿ ಪಡೆದುಕೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಈ ವೇಳೆಯಲ್ಲಿ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕಾಮಗಾರಿ ಏಪ್ರಿಲ್ ಮೊದಲಿಗೆ ಹಾಗೂ ಬಸ್ರೂರು ಅಂಡರ್ಪಾಸ್ ಕಾಮಗಾರಿಯನ್ನು ಜೂನ್ ಮೊದಲಿಗೆ ಪೂರ್ಣಗೊಳಿಸುವುದಾಗಿ ನವಯುಗ ಇಂಜಿನಿಯರ್ ರಾಘವೇಂದ್ರ ಹೇಳಿದರು.

ಹರೀಶ್ ಬಂಗೇರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ, ಹರೀಶ್ ಬಂಗೇರ ಅವರ ಮೇಲಿರುವ ಪ್ರಕರಣ ಬಲವಾಗಿದೆ. ಅವರ ಹೆಸರಲ್ಲಿ ಖಾತೆ ಸೃಷ್ಠಿಸಿ ಯಾರು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆನ್ನುವುದು ಪೊಲೀಸ್ ಇಲಾಖೆ ಪತ್ತೆ ಮಾಡುತ್ತಿದೆ. ಈ ಬಗ್ಗೆ ತನಿಖೆಯೂ ಪ್ರಗತಿಯಲ್ಲಿದೆ. ಆದಷ್ಟು ಬೇಗ ಇದನ್ನು ಪತ್ತೆ ಹಚ್ಚಬೇಕು. ಹರೀಶ್ ಬಂಗೇರ ಅವರನ್ನು ಆರೋಪಿಯಾಗಿ ಮಾಡಿದರೆ ಸಮಸ್ಯೆಯಾಗುತ್ತೆ ಎಂದು ಎಸ್ಪಿಯವರಿಗೆ ಹೇಳಿದ್ದೇನೆ. ಬೇರೆಯವರು ಪೋಸ್ಟ್ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದೇವೆ. ತನಿಖೆ ಮುಗಿದ ಬಳಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುತ್ತೇವೆ ಎಸ್ಪಿಯವರು ತಿಳಿಸಿದ್ದಾರೆ ಎಂದು ಸಂಸದೆ ಹೇಳಿದರು.

ಬೆಂಗಳೂರು-ಕುಂದಾಪುರ-ವಾಸ್ಕೊ ನಡುವೆ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಹೊಸ ರೈಲು ಘೋಷಿಸಿದ್ದು, ಅದರ ಉದ್ಘಾಟನೆ ಕೆಲವು ತೊಡಕುಗಳಾಗಿವೆ. ಆದಷ್ಟು ಬೇಗ ಉದ್ಘಾಟನೆ ಮಾಡಬೇಕು ಎಂದು ರೈಲ್ವೆ ಸಚಿವರಲ್ಲಿ ಈ ಹಿಂದೆ ಮಾತನಾಡಿದ್ದೇನೆ. ಈ ಬಗ್ಗೆ ಇನ್ನೊಮ್ಮೆ ರೈಲ್ವೆ ಸಚಿವರ ಬಳಿ ಮಾತನಾಡಿ ಶೀಘ್ರವೇ ಬೆಂಗಳೂರು-ವಾಸ್ಕೊ ರೈಲಿನ ಉದ್ಘಾಟನೆಯ ದಿನಾಂಕ ತಿಳಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.