ಕುಡಿವ ನೀರು ಪೂರೈಕೆಗೆ ಕ್ರಮ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಕುಡಿವ ನೀರು ಪೂರೈಕೆಗೆ ಕ್ರಮ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಮಂಗಳೂರು: ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜೂನ್ 6ರವರೆಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಹೇಳಿದರು.

ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಅವರಿಗೆ ಜಿಲ್ಲೆಯಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಸೋಮವಾರ ಸಮಗ್ರವಾದ ಮಾಹಿತಿ ನೀಡಿದರು.

ನಗರಕ್ಕೆ ನೀರು ಪೂರೈಕೆ ಸಂಬಂಧ, ಬೇಸಿಗೆಯಲ್ಲಿ ಮಳೆ ಬಾರದೆ ಇರುವುದರಿಂದ ತುಂಬೆಯಲ್ಲಿ ನೀರಿನ ಪ್ರಮಾಣ ಕುಸಿತಗೊಳ್ಳುತ್ತಿರುವುದನ್ನು ಮೊದಲೇ ಗಮನಿಸಲಾಗಿತ್ತು. ಇದೇ ಮಾದರಿಯಲ್ಲಿ ಜಿಲ್ಲೆಯಾದ್ಯಂತ ನೀರು ವಿತರಣೆ ಮತ್ತು ಪೂರೈಕೆ ಸಂಬಂಧ ಉಪವಿಭಾಗಾಧಿಕಾರಿ ಹಾಗೂ ಎಂಜಿನಿಯರುಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದೆ. ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಮುಂಚೆಯೇ ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಅವರು ಉಸ್ತುವಾರಿ ವಹಿಸಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿ ಜೊತೆ ನಿರ್ವಹಣೆ ಯೋಜನೆಗಳನ್ನು ಅವಲೋಕಿಸಿದ್ದಾರೆ ಎಂದು ಅವರು ಹೇಳಿದರು.

ಮಳೆ ಬಂದರೆ ನೀರಿನ ರೇಷನಿಂಗ್‍ ವ್ಯವಸ್ಥೆ ಸ್ಥಗಿತಗೊಳಿಸಲಾಗುವುದು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ತೆರೆದ ಬಾವಿ ಹಾಗೂ ಬೋರ್‍ವೆಲ್‍ಗಳನ್ನು ಗುರುತಿಸಲಾಗಿದೆ. ಹೊಸದಾಗಿ 11 ಬೋರ್‍ವೆಲ್‍ಗಳು ಸೇರಿದಂತೆ ಒಟ್ಟು 135 ಬೋರ್‍ವೆಲ್‍ಗಳಿವೆ. 48 ತೆರೆದ ಬಾವಿಗಳಿದ್ದು, 26 ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನುಳಿದ ಬಾವಿಗಳನ್ನು 2 ದಿನಗಳೊಳಗಾಗಿ ಸ್ವಚ್ಛಗೊಳಿಸಲಾಗುವುದು. ನೀರಿನ ಶುದ್ಧತೆ ಪರಿಶೀಲಿಸಲಾಗಿದೆ. ನೀರಿನ ಸಮಸ್ಯೆ ಇರುವವರು ಕರೆ ಮಾಡಲು ನಿರಂತರ ಸಹಾಯವಾಣಿ ಕಾರ್ಯಾಚರಣೆಯಲ್ಲಿದೆ. ನೀರು ಒದಗಿಸಲು ಯಾವುದೇ ಅನುದಾನದ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಉಳ್ಳಾಲ, ಮೂಲ್ಕಿ, ಮೂಡುಬಿದರೆಯಲ್ಲಿ ನೀರು ನಿರ್ವಹಣೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಬೋರ್‍ವೆಲ್ ಕೊರೆಸಲು ಅನುಮತಿ ನೀಡಲಾಗಿದೆ. ಉಳ್ಳಾಲ, ಮೂಲ್ಕಿಯ ಮುಖ್ಯಾಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ನೀರು ನಿರ್ವಹಣೆಗೆ ಸಹಕಾರ ನೀಡದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮೂಡುಬಿದಿರೆ ಮತ್ತು ಬಂಟ್ವಾಳದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಬಂಟ್ವಾಳದಲ್ಲಿ ನೀರು ಪೂರೈಕೆ ಸಂಬಂಧ ಇದ್ದ ಸಮಸ್ಯೆ ಸರಿಪಡಿಸಲಾಗಿದೆ ಎಂದು ಉಪವಿಭಾಗ ಅಧಿಕಾರಿ ರವಿಚಂದ್ರ ನಾಯಕ್ ಹೇಳಿದರು.

ಪುತ್ತೂರಿನಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ ಎಂದು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಅವರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಅವರು, ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಪ್ರತೀ ತಾಲ್ಲೂಕಿಗೆ ಬರ ನಿರ್ವಹಣೆಗೆ ₹ 25 ಲಕ್ಷ ನೀಡಲಾಗಿದೆ. ಪ್ರತೀ ವರ್ಷವೂ ಎದುರಾಗುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರದ ಅಗತ್ಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದರು.

ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ನೀರಿದ್ದರೂ, ಲೋ ವೋಲ್ಟೇಜ್ ಸಮಸ್ಯೆಯಿದೆ. ಇನ್ನು ಮಳೆಗಾಲವನ್ನು ಎದುರಿಸಲು ಎಲ್ಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಮಹಾ ನಗರಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಹಾಗೂ ಪಂಚಾಯಿತಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಇಒ ಅವರು ಮಾಹಿತಿ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.