ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಯುವರಾಜ; ರಾಹುಲ್ ಅಪ್ಪಿಕೊಂಡು ಭಾವುಕರಾದ ಜನಾರ್ದನ ಪೂಜಾರಿ

Spread the love

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಯುವರಾಜ; ರಾಹುಲ್ ಅಪ್ಪಿಕೊಂಡು ಭಾವುಕರಾದ ಜನಾರ್ದನ ಪೂಜಾರಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ರಾತ್ರಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಸ್ಥಾನಕ್ಕೆ ಆಗಮಿಸಿದ ರಾಹುಲ್ ಗಾಂಧಿಯನ್ನು ದೇವಳದ ಹೆಬ್ಬಾಗಿಲಿನಲ್ಲಿ ನಿಂತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗಾಂಧಿ ಕುಟುಂಬದ ನಿಕಟವರ್ತಿ ಬಿ. ಜನಾರ್ದನ ಪೂಜಾರಿ ಅವರು ಸ್ವಾಗತಿಸಿ ಒಳ ಕರೆದೊಯ್ದರು.

ಈ ವೇಳೆ ಜನಾರ್ದನ ಪೂಜಾರಿ ಅವರು ದಿ.ರಾಜೀವ್, ಸೋನಿಯಾ ಅವರ ನಾಮಫಲಕವನ್ನು ರಾಹುಲ್ ಗಾಂಧಿಗೆ ತೋರಿಸುತ್ತಾ ಈ ಹಿಂದೆ ಅವರ ಹೆತ್ತವರು ಭೇಟಿ ನೀಡಿದ ಅಪೂರ್ವ ಕ್ಷಣವನ್ನು ನೆನಪಿಸಿದರು. ಅಲ್ಲಿಂದ ನೇರವಾಗಿ ಪೂಜಾರಿಯವರ ಕೈಯನ್ನು ಹಿಡಿದು ಕೊಂಡೇ ಸಾಗಿದ ರಾಹುಲ್ ಗಾಂಧಿ ಹನುಮಾನ್ ಮಂದಿರ, ಶಿರ್ಡಿ ಸಾಯಿಬಾಬಾ ಮಂದಿರ ಸೇರಿದಂತೆ ಗೋಕರ್ಣನಾಥೇಶ್ವರ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇಡೀ ದೇವಳದಲ್ಲಿ ರಾಹುಲ್ ಗಾಂಧಿ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಜನಾರ್ದನ ಪೂಜಾರಿಯವನ್ನು ಕೈಹಿಡಿದು  ಮುಂದೆ ಸಾಗುತ್ತಿದ್ದು ಕಂಡಾಗ ಜನಾರ್ದನ ಪೂಜಾರಿಯವರ ಬಗ್ಗೆ ಗಾಂಧಿ ಕುಟುಂಬಕ್ಕೆ ಇರುವ ಗೌರವ ಎದ್ದು ಕಾಣುತ್ತಿತ್ತು.

ದೇವಳದಿಂದ ಕೈ ಹಿಡಿದುಕೊಂಡು  ರಾಹುಲ್ ಹೊರಗಡೆ ಬಂದಾಗ ಪೂಜಾರಿ ಅವರು ಭಾವುಕರಾಗಿ ರಾಹುಲ್ ಅವರ ಕೈಯನ್ನು ಕಣ್ಣಿಗೆ ಒತ್ತಿಕೊಂಡು ಇಂದಿರಾ, ರಾಜೀವ್, ಸೋನಿಯಾ ನೆನಪಿನ ಮೂಲಕ ರಾಜಕೀಯ ರಂಗದಲ್ಲಿ ತಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಹರಿಸಿದರು. ಈ ವೇಳೆ ರಾಹುಲ್ ಕೂಡ ಪೂಜಾರಿಯವರನ್ನು ಬಿಗಿದಪ್ಪಿಕೊಂಡು ತಮ್ಮ ಪ್ರೀತಿಯನ್ನು ತೋರ್ಪಡಿಸಿ ತನ್ನ ಕಾರಿನ ತನಕ ಪೂಜಾರಿಯವರನ್ನು ಕರೆದುಕೊಂಡು ಹೋಗಿ ವಾಪಾಸು ತೆರಳುವಾಗ ಮತ್ತೋಮ್ಮೆ ಪೂಜಾರಿಯವರ ಆರೋಗ್ಯ ವಿಚಾರಿಸಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದ ರಾಹುಲ್ ಅವರು ದಿಲ್ಲಿಯಲ್ಲಿರುವ ಕಾಂಗ್ರೆಸ್ ಕಚೇರಿಗೂ ಬರುವಂತೆ ಆಹ್ವಾನ ನೀಡಿದರು. ಈ ವೇಳೆ ಮತ್ತೊಮ್ಮೆ ಭಾವುಕರಾದ ಪೂಜಾರಿ ಅವರ ಕಣ್ಣಲ್ಲಿ ನೀರು ಜಿನುಗಿತು.


Spread the love