ಕುಮಾರಧಾರಾ ನದಿಯಲ್ಲಿ ಜಲವಿದ್ಯುತ್ ಕಾಮಾಗಾರಿಗೆ ಅನುಮತಿ ಬೇಡ; ವೃಕ್ಷಲಕ್ಷ ಆಂದೋಲನ ಸಮಿತಿ

Spread the love

ಮಂಗಳೂರು: ವೃಕ್ಷಲಕ್ಷ ಆಂಧೋಲನ ಹಾಗೂ ಕುಮಾರಧಾರಾ ಪರಿಸರ ಸಮಿತಿಯ ನಿಯೋಗ ಇಬ್ರಾಹಿಂ, ಜಿಲ್ಲಾಧಿಕಾರಿಗಳು, ಮಂಗಳೂರು ಇವರನ್ನು ಮಾರ್ಚ್ 31 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಸಂದರ್ಬದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ರವರು ಕುಮಾರಧಾರಾ ನದಿಗೆ ಉರುಂಬಿಯಲ್ಲಿ ಕುಕ್ಕೆ ಪವರ್ ಸಂಸ್ಥೆ ಅಕ್ರಮವಾಗಿ ಕಾಮಗಾರಿ ನಡೆಸುತ್ತಿದೆ. ಇಲ್ಲಿ ಯಾವುದೇ ಜಲ ವಿದ್ಯುತ್ ಯೋಜನೆ ಕಾಮಗಾರಿ ನಡೆಸಲು ಅನುಮತಿ ನೀಡಬಾರದು ಎಂದು ಜಿಲ್ಲಾಢಳಿತವನ್ನು ಆಗ್ರಹಿಸಿದರು.

ಈ ವೇಳೆ ನಿಯೋಗ ಬೇಡಿಕೆಗಳ ಮನವಿ ಸಲ್ಲಿಸಿತು. ಬೇಡಿಕೆಗಳು ಇಂತಿವೆ
1) ಪುತ್ತೂರು ತಾಲೂಕಿನ ಉರುಂಬಿ ಎಂಬಲ್ಲಿ ಕುಮಾರಧಾರಾ ನದಿಗೆ ಆಣೆಕಟ್ಟೆ ನಿರ್ಮಿಸಿ ಜಲವಿದ್ಯುತ್ ಉತ್ಪಾದಿಸುವ ಯೋಜನೆ ಅವ್ಯವಹಾರಿಕ, ಅರಣ್ಯ ಪರಿಸರ ನಾಶ ಮಾಡಲಿದೆ. ತೋಟಗದ್ದೆ ಕೃಷಿ ಬದುಕು ನಾಶವಾಗಲಿದೆ. ಈ ಯೋಜನೆಗೆ ಅರಣ್ಯ ಇಲಾಖೆ, ಪರಿಸರ ಇಲಾಖೆ, ಪರವಾನಿಗೆ ಇಲ್ಲ. ಅಕ್ರಮವಾದ ಯೋಜನೆ ಇದು. 2012 ರಿಂದ ಕುಮಾರಧಾರಾ ಕಣಿವೆ ಜನ ಈ ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ, ಪಶ್ಚಿಮ ಘಟ್ಟ ಕಾರ್ಯಪಡೆ, ವಿಜ್ಞಾನಿಗಳ ತಂಡ ಸಹ “ಉರುಂಬಿ ಯೋಜನೆ ಅಸಾಧು. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವಿದು” ಎಂದು ಅಭಿಪ್ರಾಯಪಟ್ಟಿದೆ. ಆದಾಗ್ಯೂ ಕುಕ್ಕೆ ಪವರ್ ಸಂಸ್ಥೆ ಕಾಮಗಾರಿಗೆ ಮುಂದಾಗುತ್ತಿದೆ. ಈ ಹಳ್ಳಿಗಳಲ್ಲಿ ಅಶಾಂತಿ ಉಂಟುಮಾಡುತ್ತಿದೆ. ಸರ್ಕಾರ ಅಕ್ರಮವಾದ ಈ ಅರಣ್ಯ ನಾಶೀ ಯೋಜನೆಗೆ ತಡೆ ನೀಡಬೇಕು. ಇಂಧನ ಇಲಾಖೆ, ಕ್ರೆಡಲ್ ಸಂಸ್ಥೆ ಈ ಹಿಂದೆ ನೀಡಿದ್ದ ಪರವಾನಿಗೆ ರದ್ದುಪಡಿಸಬೇಕು.
(ಕುಮಾರಧಾರ ನದಿ ತಟದಲ್ಲಿ ನಿನ್ನೆ ದಿನ ತಾ: 30-3-2016 ರಂದು ರೈತರು, ಜನಪ್ರತಿನಿಧಿಗಳು, ಪರಿಸರ ಕಾರ್ಯಕರ್ತರು ನದೀ ಪೂಜೆ ಮಾಡಿದರು. ಕುಮಾರಧಾರಾ ಉಳಿಸಿ ಎಂದು ಆಗ್ರಹಿಸಿ ಸಮಾವೇಶ ನಡೆಸಿದರು ಎಂಬ ಸಂಗತಿಯನ್ನು ಇಲ್ಲಿ ಗಮನಕ್ಕೆ ತರುತ್ತಿದ್ದೇವೆ.)

2) ಮಂಗಳೂರು ಸಮೀಪ ಉಳ್ಳಾಲದಲ್ಲಿ ಸಮುದ್ರ ಕೊರೆತ ತಡೆಗಟ್ಟುವ ಎ.ಡಿ.ಬಿ. ಬೆಂಬಲಿತ ಬೃಹತ್ ಯೋಜನೆ ಜಾರಿ ಆಗುತ್ತಿದೆ. ಈ ಯೋಜನೆಯಲ್ಲಿ ಹಸಿರು ತಡೆಗೋಡೆ ನಿರ್ಮಿಸುವ ಕುರಿತು ಆದ್ಯತೆ ನೀಡಬೇಕು. ಸ್ಥಾನಿಕ ಮೀನುಗಾರರು ರೈತರ ಸಹಬಾಗಿತ್ವ ಪಡೆಯಬೇಕು. ಬಂದರು ಇಲಾಖೆ, ಅರಣ್ಯ ಪರಿಸರ ಇಲಾಖೆ ಹಾಗೂ ಪರಿಸರ ತಜ್ಞರ ಜಂಟಿ ಸಭೆಯನ್ನು ಜಿಲ್ಲಾಧಿಕಾರಿಗಳು ಏರ್ಪಡಿಸಬೇಕು. ಕರಾವಳಿ ಹಸಿರು ಕವಚ ಎಂಬ ಅರಣ್ಯ ಇಲಾಖೆಯ ಮಾದರಿ ಯೋಜನೆಯ ಅನುಭವ ಪಡೆಯಬೇಕು. “ಕೇವಲ ಕೃತಕ ತಡೆಗೋಡೆ ನಿರ್ಮಿಸುವುದರಿಂದ ಸಮುದ್ರ ಕೊರೆತ ತಡೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ” ಎಂಬ ಪರಿಸರ ತಜ್ಞರ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಬೇಕು. ರಾಜ್ಯ ಮಟ್ಟದಲ್ಲಿಯೂ ಇಂಥ ಜಂಟೀ ಸಭೆಯನ್ನು ಅರಣ್ಯ ಪರಿಸರ, ಬಂದರು ಇಲಾಖೆ ಕಾರ್ಯದರ್ಶಿಗಳು ನಡೆಸಬೇಕು.
3) ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಬೃಹತ್ ಯೋಜನೆಗಳ ಬಗ್ಗೆ ಸರ್ಕಾರ ಪುನರ್ ವಿಮರ್ಶೆ ಮಾಡಬೇಕು. ನದಿಗಳಲ್ಲಿ ನೀರಿಲ್ಲ. ನದಿಗಳೇ ಇಲ್ಲವಾದರೆ ನದಿ ತಿರುಗಿಸುವದು ಹೇಗೆ? ಎತ್ತಿನಹೊಳೆಯಂಥ ಯೋಜನೆಯಲ್ಲಿ ಅಗತ್ಯ ನೀರಿನ ಲಭ್ಯತೆ ಇಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ವರದಿಯಲ್ಲಿ ಎತ್ತಿ ಹೇಳಿದೆ. ಎಂಬ ಸಂಗತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
4) ದ.ಕ. ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದ ಹೊಳೆ – ಹಳ್ಳಗಳ ಉಳಿವಿಗಾಗಿ ನದೀ ಮೂಲ ಸಂರಕ್ಷಣಾ ಯೋಜನೆ ಜಾರಿ ಮಾಡಬೇಕು. ಜಲಸಂವರ್ಧನೆಗೆ ವನಸಂವರ್ಧನೆಗೆ ಸರ್ಕಾರ ರೂ. 10,000 ಕೋಟಿ ಅನುದಾನ ನೀಡಬೇಕು.
5) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇರುವ ಪರಿಸರ ಸಮಿತಿಗೆ ಜೀವ ತುಂಬಬೇಕು. ಸಿ.ಆರ್.ಜಡ್. ಕಾಯಿದೆ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯ.
6) ಡೀಮ್ಡ ಅರಣ್ಯ ವ್ಯಾಪ್ತಿಯನ್ನು ಸರ್ಕಾರ ಇನ್ನಷ್ಟು ಕಡಿತಗೊಳಿಸಬಾರದು. ಸರ್ಕಾರ ಈಗಾಗಲೇ ಅರ್ಧದಷ್ಟು ಡೀಮ್ಡ ಅರಣ್ಯ ಕಡಿತ ಮಾಡಿದೆ.
7) ದ.ಕ., ಉಡುಪಿ, ಜಿಲ್ಲೆಗಳ ಅಳಿವೆಗಳ, ಕಾಂಡ್ಲಾಗಳ ಉಳಿವಿಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಬೇಕು. ಅಳಿವೆಗಳು ವ್ಯಾಪಕವಾಗಿ ಕಣ್ಮರೆ ಆಗುತ್ತಿವೆ ಎಂದು ಕರಾವಳಿ ಪರಿಸರ ವಿಜ್ಞಾನಿಗಳು ಕಳವಳ ವ್ಯಕ್ತಮಾಡಿರುವ ಸಂಗತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಳಿವೆಗಳು ಅತಿಕ್ರಮವಾಗದಂತೆ ಕಟ್ಟುನಿಟ್ಟಿನ ಕ್ರಮ ಅವಶ್ಯ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಉರುಂಬಿ ಯೋಜನೆಗೆ ಸರಕಾರ ಅನುಮತಿ ನೀಡಿಲ್ಲ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡುತ್ತೇನೆ ಜಂಟಿ ಸರ್ವೆಗೆ ಆದೇಶ ನೀಡಿದ್ದೇನೆ ಅರಣ್ಯ ಇಲಾಖೆ ಈ ಯೋಜನೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದರು. ನಿಯೋಗದಲ್ಲಿ ಶ್ರೀ ಕರುಣಾಕರ ಗೋಗಟೆ, ಡಾ. ರಾಮಚಂದ್ರ, ಡಾ. ರಾಜೇಶ, ಮುಂತಾದವರು ಇದ್ದರು.


Spread the love