ಕುವೈತ್-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಆರಂಭಿಸಲು ಪ್ರಯಾಣಿಕರಿಂದ ನಳಿನ್ ಅವರಿಗೆ ಪತ್ರ

Spread the love

ಕುವೈತ್-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಆರಂಭಿಸಲು ಪ್ರಯಾಣಿಕರಿಂದ ನಳಿನ್ ಅವರಿಗೆ ಪತ್ರ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು, ಕಣ್ಣೂರು ಜಿಲ್ಲೆಗಳು ಸೇರಿದಂತೆ ಸರಿ ಸುಮಾರು 8ರಿಂದ 10 ಜಿಲ್ಲೆಗಳ ಲಕ್ಷಾಂತರ ಉದ್ಯೋಗಿಗಳು ಕುವೈತ್ ನಲ್ಲಿ ದುಡಿಯುತ್ತಿದ್ದು, ತಮ್ಮ ಪ್ರಯಾಣಕ್ಕಾಗಿ ‘ಎರ್ ಇಂಡಿಯಾ ಎಕ್ಸ್ಪ್ರೆಸ್’ ವಿಮಾನ ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಚ್ಚಿಕೊಂಡಿರುತ್ತಾರೆ. ಆದ್ದರಿಂದ ಏರ್ ಇಂಡಿಯಾ ಸೇವೆಯನ್ನು ಆರಂಭಿಸುವಂತೆ ಪ್ರಯಾಣಿಕರು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

ಕುವೈತ್-ಮಂಗಳೂರುನಡುವೆ ಸಂಚರಿಸುವ ಪ್ರಯಾಣಿಕರ ಪೈಕಿ ಸಿಂಹಪಾಲು ಮಂಗಳೂರು ಜಿಲ್ಲೆಯವರದ್ದು. ಹೀಗಿರುವಾಗ ಈ ಹಿಂದೆ, ಕೆಲವು ಖಾಸಗಿ ವಿಮಾನ ಸೇವೆಯವರ ಏಕಸ್ವಾಮ್ಯತೆಯಿಂದ ನಮ್ಮ ‘ಎರ್ ಇಂಡಿಯಾ ಎಕ್ಸ್ಪ್ರೆಸ್’ ಸೇವೆಯೇ ರದ್ದಾಗಿದ್ದು, ನಮ್ಮ ನಿರಂತರ ಮನವಿ, ಪ್ರತಿಭಟನೆ ಹಾಗೂ ಹೋರಾಟದ ಮೂಲಕ, ಹಲವು ತಿಂಗಳುಗಳ ನಂತರ ಪುನರಾರಂಭಿಸಲಾಯಿತು. ಈ ವಿಷಯ ತಮಗೆ ತಿಳಿಸಲಾಗಿದೆ. ತಮ್ಮನ್ನು ಕುವೈತ್ಗೂ ಆಹ್ವಾನಿಸಲಾಗಿ, ತಾವು ಭೇಟಿ ನೀಡಿದ್ದಾಗ ನಮ್ಮ ತೊಂದರೆಗಳನ್ನು ನಿಮಗೆ ಮನವರಿಕೆ ಮಾಡಿಕೊಡಲಾಗಿತ್ತು.

ನಂತರ, ಕೆಲವು ವರ್ಷಗಳ ಹಿಂದೆ, ಪ್ರಯಾಣಿಕರ ಹಿತಾಸಕ್ತಿಯನ್ನು ಬಲಿಗೊಟ್ಟು, ಯಾವುದೇ ಪೂರ್ವ ಸೂಚನೆ ಇಲ್ಲದೆ, ವಿಮಾನ ಹಾರಾಟದ ಸಮಯ ಬದಲಾವಣೆ ಮಾಡಲಾಯಿತು. ಈ ಹಿಂದೆ, ವಾರಕ್ಕೆ ಮೂರು ಬಾರಿ ಮಂಗಳೂರಿನಿಂದ ರಾತ್ರಿ 8:45ಕ್ಕೆ ಹೊರಟು ರಾತ್ರಿ 11:45ಕ್ಕೆ ಕುವೈತ್ಗೆ ಹಾಗೂ ತಡರಾತ್ರಿ 12:30ಕ್ಕೆ ಕುವೈತ್ ನಿಂದ ಹೊರಟು ಬೆಳಿಗ್ಯೆ 7:30ಕ್ಕೆ ಮಂಗಳೂರಿಗೆ ವಿಮಾನ ಆಗಮಿಸುತ್ತಿತ್ತು. ಆದರೆ, ಇದೀಗ ವಿಮಾನ ಹಾರಾಟದ ಸಮಯ ಬದಲಾವಣೆ ಮಾಡಲಾಗಿದ್ದು, ಬೆಳಿಗ್ಗೆ 7ಕ್ಕೆ ಮಂಗಳೂರಿನಿಂದ ಹೊರಟು ಬೆಳಿಗ್ಯೆ 11:15ಕ್ಕೆ ಕುವೈತ್ಗೆ ಹಾಗೂ ಮಧ್ಯಾಹ್ನ 12:15ಕ್ಕೆ ಕುವೈತ್ ನಿಂದ ಹೊರಟು ರಾತ್ರಿ 7:15ಕ್ಕೆ ಮಂಗಳೂರಿಗೆ ತಲುಪುತ್ತದೆ. ಗುರುವಾರ ರಾತ್ರಿ ಬದಲಿಗೆ ಶುಕ್ರವಾರ ಮಧ್ಯಾಹ್ನ ಹೊರಡುವುದರಿಂದ ಸಮಯ ಹಾಗೂ ವಾರದಲ್ಲಿ ಹಾರಾಟದ ದಿನಗಳು ಹೆಚ್ಚಿನ ಪ್ರಯಾಣಿಕರ ಉಪಯೋಗಕ್ಕೆ ಬಾರದೆ ನಿಷ್ಪ್ರಯೋಜಕವಾಗಿದೆ.

ಪ್ರಯಾಣಿಕರು ಬೇರೆ ವಿಮಾನ ಸೇವೆಯ ಮೊರೆ ಹೋಗುವುದರಿಂದ ಪ್ರಯಾಣಿಕರ ಕೊರತೆ ಎಂಬ ಸಿದ್ಧ ಉತ್ತರದಿಂದ, ವಿಮಾನ ಸೇವೆಯನ್ನು ಮತ್ತೊಮ್ಮೆ ರದ್ದು ಮಾಡುವ ವ್ಯವಸ್ಥಿತ ಹುನ್ನಾರದ ಸಂಶಯವಿದೆ. ಏರ್ ಪೋರ್ಟ್ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ವಿಮಾನ ಯಾನದ ಆರಂಭಕ್ಕೆ 3 ಘಂಟೆಯ ಮೊದಲೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಬೇಕಿದ್ದು, ಬೆಳಿಗ್ಗೆ 7ಕ್ಕೆ ಹೊರಡುವ ವಿಮಾನಕ್ಕಾಗಿ ಮೊದಲದಿನದ ಸಂಜೆ ಮನೆಯಿಂದ ಹೊರಟು ಬರಬೇಕಾಗುತ್ತದೆ. ಇದರಿಂದ ದೂರದಿಂದ ಬರುವ ವೃದ್ಧರು, ಮಕ್ಕಳು ಹಾಗೂ ಮಹಿಳಾ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಅಲ್ಲದೇ ಈ ವಿಮಾನ ಬಹ್ರೈನ್ ಮುಖಾಂತರವೂ ಪ್ರಯಾಣಿಸುವುದರಿಂದ ಬಹ್ರೈನ್ ನಲ್ಲಿ ನೆಲೆಸಿರುವ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಮಯ ಮರುನಿಗದಿಗೆ ಹಾಗೂ ಪ್ರತಿದಿನ ಹಾರಾಟದ ಸೇವೆಗಾಗಿ ನಿಮ್ಮಲ್ಲಿ ವಿನಂತಿಸಿಕೊಂಡು, ನವೆಂಬರ್ 2017ರಲ್ಲೆ, ತುಳುಕೂಟ ಕುವೈತ್, ಬಂಟರ ಸಂಘ ಕುವೈತ್, ಕುವೈತ್ ಕರ್ನಾಟಕ-ಕೇರಳ ಮುಸ್ಲಿಂ ಅಸೋಸಿಯೇಷನ್ ಹಾಗೂ ಹಲವಾರು ದ.ಕ. ಜಿಲ್ಲಾ ಮೂಲದ ಸಂಘ-ಸಂಸ್ಥೆಗಳ ಪರವಾಗಿ ತಮಗೆ ಮನವಿ ಸಲ್ಲಿಸಲಾಗಿದ್ದು, ತಾವು ವಾಯುಯಾನ ಸಚಿವರಲ್ಲಿ ಚರ್ಚೆ ನೆಡೆಸಿ, ಸಮಸ್ಯೆಯನ್ನು ಮನವರಿಕೆ ಮಾಡಿಸಿ, ಕೆಲವೇ ದಿನಗಳಲ್ಲಿ ಸಮಯ ಮರುನಿಗದಿ ಹಾಗೂ ಪ್ರತಿದಿನ ಹಾರಾಟದ ಬಗ್ಗೆ ವ್ಯವಸ್ಥೆ ಮಾಡಲಾಗುವುದೆಂಬ ಭರವಸೆ ನೀಡಿದ್ದೀರಿ.

ವರ್ಷಗಳೆ ಕಳೆಯುತ್ತಾ ಬಂದರೂ, ನಂತರ ನಾವು ಮಾಡಿದ ಹಲವಾರು ಜ್ಞಾಪನೆ-ವಿಜ್ಞಾಪನೆಗಳಿಗೂ ನಿಮ್ಮಿಂದ ಯಾವುದೇ ಸಮರ್ಪಕ ಉತ್ತರವಾಗಲಿ, ಸಹಾಯವಾಗಲಿ ಕಾಣುತ್ತಿಲ್ಲ. ನಮ್ಮ ಕಷ್ಟ, ಬವಣೆಗಳು ತಪ್ಪಿಲ್ಲ.
ಸದ್ಯದಲ್ಲೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದ್ದು, ಅಲ್ಲಿಗೆ ಅವರ ಅನುಕೂಲಕ್ಕೆ ತಕ್ಕಂತೆ ವಿಮಾನ ಯಾನ ಸೇವೆ, ಹಾರಾಟ ಸಮಯ, ವೇಳಾಪಟ್ಟಿ ದೊರಕುತ್ತದೆಯಾದರೆ, ಇಷ್ಟು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಮಂಗಳೂರು ಹಾಗೂ ಅದರ ಪ್ರಯಾಣಿಕರು ಯಾಕೆ ಸೌಲಭ್ಯದಿಂದ ವಂಚಿತರಾಗಬೇಕು? ಯಾಕೆ ಈ ಮಲತಾಯಿ ಧೋರಣೆ? ನಂತರದ ದಿನಗಳಲ್ಲಿ, ಎಲ್ಲರೂ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಬೇಕಾದರೆ, ಮಂಗಳೂರು ವಿಮಾನ ನಿಲ್ದಾಣ ಮುಚ್ಚಬೇಕಾದಿತು. ಅದರ ಹೊಣೆ ನಾವೆಲ್ಲರೂ ಹೊರಬೇಕಾದೀತು.


Spread the love