ಕೆಸರುಗದ್ದೆ ಆಟ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಿ ; ಪ್ರಮೋದ್ ಮಧ್ವರಾಜ್

Spread the love

ಕೆಸರುಗದ್ದೆ ಆಟ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಿ ; ಪ್ರಮೋದ್ ಮಧ್ವರಾಜ್

ಉಡುಪಿ: ಕೆಸರುಗದ್ದೆ ಆಟ ಕೇವಲ ಕ್ರೀಡೆಗೆ ಮಾತ್ರ ಹೊಂದಿಕೊಳ್ಳದೆ ಕೃಷಿ ಚಟುವಟಿಕೆಗಳಿಗೂ ಪ್ರೇರಣೆ ನೀಡುವಂತಾಗಬೇಕು ಎಂದು ರಾಜ್ಯ ಮೀನುಗಾರಿಕಾ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಭಾನುವಾರ ತೆಂಕನಿಡಿಯೂರು ವಿಷ್ಣುಮೂರ್ತಿನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಪ್ರಾಯೋಜಕತ್ವದಲ್ಲಿ ಶ್ರೀ ಅಂಜನಾ ಮಾತೃ ಮಂಡಳಿ ಹಾಗೂ ತೆಂಕನಿಡಿಯೂರು ಊರ ಗ್ರಾಮಸ್ಥರ ಸಹಯೋಗದೊಂದಿಗೆ ಕೆಸರ್ ಡೊಂಜಿ ಗಮ್ಮತ್ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಜನತೆ ಕೃಷಿಯ ಬಗ್ಗೆ ನಿರಾಸಕ್ತಿಯಿಂದಾಗಿ ಕೃಷಿ ಇಂದು ಅವನತಿಯ ಅಂಚಿಗೆ ತಲುಪಿದೆ. ಕೆಸರಿನ ಬಗ್ಗೆ ಆಸಕ್ತಿ ಬೆಳೆಸುವ ಮೂಲಕ ನಮ್ಮ ಹಿರಿಯರು ಮಾಡಿಟ್ಟ ಕೃಷಿ ಭೂಮಿಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಸದಸ್ಯ ಧನಂಜಯ ಕುಮಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಯಂತಿ, ಅಂಜನಾ ಮಾತೃ ಮಂಡಳಿ ಇದರ ಅಧ್ಯಕ್ಷೆ ಶಾಂತ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಉಮಾ, ಉದ್ಯಮಿಗಳಾದ ಗೋಪಾಲಕೃಷ್ಣ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ಗ್ರಾ.ಪಂ. ಸದಸ್ಯೆ ಕಲ್ಪನಾ ಸುರೇಶ್, ಅಣ್ಣಯ್ಯ ಪಾಲನ್, ಸತೀಶ್ ನಾಯ್ಕ್, ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಕೊಜಕೊಳಿ, ಅರ್ಚಕ ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು.

ವ್ಯಾಯಾಮ ಶಾಲೆಯ ಅಧ್ಯಕ್ಷ  ಪ್ರಖ್ಯಾತ್ ಶೆಟ್ಟಿ ಬೆಳ್ಕಲೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್ ವಂದಿಸಿದರು. ಸುಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 


Spread the love