ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ರೂ. 2 ಲಕ್ಷ ಕೊಡುಗೆ

Spread the love

 ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ರೂ. 2 ಲಕ್ಷ ಕೊಡುಗೆ

ಮಂಗಳೂರು: ಕೊಡಗಿನ ಜನತೆಯ ಬದುಕು ಇಂದು ಪ್ರವಾಹ, ಭೂಕುಸಿತದಿಂದ ಜರ್ಝರಿತವಾಗಿದೆ. ಪ್ರವಾಹದ ಅಬ್ಬರಕ್ಕೆ ಊರಿಗೆ ಊರೇ ನಾಮಾವಶೇಷವಾಗಿರುವುದನ್ನು ಮನಗಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ತುರ್ತು ಕೋರ್ ಕಮಿಟಿ ಸಭೆಯನ್ನು ಕರೆದು ಮಾನವೀಯತೆಯ ನೆಲೆಯಲ್ಲಿ ಟ್ರಸ್ಟ್ ವತಿಯಿಂದ ರೂಪಾಯಿ 2 ಲಕ್ಷ ಧನಸಹಾಯವನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ನೀಡುವುದೆಂದು ನಿರ್ಧರಿಸಿದರು.

ಅದರಂತೆ ಸನ್ಮಾನ್ಯ ನಗರಾಡಳಿತ ಮತ್ತು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಸಮ್ಮುಖದಲ್ಲಿ ದ.ಕ ಜಿಲ್ಲಾಧಿಕಾರಿಯವರಾದ ಸಸಿಕಾಂತ್ ಸೆಂಥಿಲ್ ರವರಿಗೆ ಪಟ್ಲ ಸತೀಶ್ ಶೆಟ್ಟಿಯವರು ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ಮತ್ತು ಟ್ರಸ್ಟಿ ರವಿ ಶೆಟ್ಟಿ ಅಶೋಕನಗರ ಜತೆಗಿದ್ದರು.


Spread the love