ಕೊರೋನಾ ಸಂಬಂಧ ಸೆಕ್ಷನ್ 144 ಪಾಲಿಸದಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು- ಡಿಸಿ ಸಿಂಧೂ ಬಿ ರೂಪೇಶ್

ಕೊರೋನಾ ಸಂಬಂಧ ಸೆಕ್ಷನ್ 144 ಪಾಲಿಸದಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು- ಡಿಸಿ ಸಿಂಧೂ ಬಿ ರೂಪೇಶ್

ಮಂಗಳೂರು: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 144 ಹಾಗೂ ಈ ಸಂಬಂಧ ಹೊರಡಿಸಿರುವ ಇತರೆ ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ದಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ರಾಜ್ಯ/ಜಿಲ್ಲೆಗಳಲ್ಲಿ ಕೋವಿಡ್ 19 ಯ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದನ್ನು ಗಮನಿಸಿ ನೆರೆಯ ರಾಜ್ಯ/ ಜಿಲ್ಲೆಗಳಿಂದ ದಕ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇರುವುದರಿಂದ ದಕ ಜಿಲ್ಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಅನಿವಾರ್ಯವಾಗಿ ತಡೆಯಬೇಕಾದ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುತ್ತದೆ.

ಈಗಾಗಲೇ ಜಿಲ್ಲೆಯಿಂದ ನೆರೆಯ ಕೇರಳ ರಾಜ್ಯದ ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಮಾರ್ಚ್ 31 ರ ತನಕ ಸೇಕ್ಷನ್ 144 ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ, ಆದರೆ ಜಿಲ್ಲೆಯ ಸಾರ್ವಜನಿಕರು ಈ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ನಿಯಂತ್ರಿಸುವ ಅವಶ್ಯಕ್ತೆ ಇದ್ದು ಸಾರ್ವಜನಿಕ ಹಿತದೃಷ್ಠಿಯಿಂದ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಕಂಡುಬರುತ್ತದೆ.

ಈ ಹಿನ್ನಲೆಯಲ್ಲಿ ಹಾಗೂ ಜಿಲ್ಲೆಯ ಪ್ರಸ್ತುತ ವಿದ್ಯಮಾನ್ಯಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಢಾಧಿಕಾರಿಗಳು ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಇತರೆ ಎಲ್ಲಾ ಆದೇಶ/ನಿರ್ದೇಶನಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿದವರ ವಿರುದ್ದ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ಜಿಲ್ಲೆಯ ಸಹಾಯ ಆಯುಕ್ತರುಗಳು ಮತ್ತು ಎಲ್ಲಾ ತಹಶೀಲ್ದಾರರುಗಳಿಗೆ ನೀಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

Leave a Reply

  Subscribe  
Notify of