ಕೊಲಕಾಡಿಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸಿಪಿಐ ಒತ್ತಾಯ

Spread the love

ಕೊಲಕಾಡಿಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸಿಪಿಐ ಒತ್ತಾಯ

ಮಂಗಳೂರು: ಮುಲ್ಕಿ ವ್ಯಾಪ್ತಿಯಲ್ಲಿ ಮುಲ್ಕಿಯಿಂದ ಮಾನಂಪಾಡಿ – ಪಂಜಿನಡ್ಕ – ಕವತ್ತಾರು ಮೂಲಕ ಹಾದು ಹೋಗುವ ರಸ್ತೆಯಿದೆ. ಈ ರಸ್ತೆಯ ಮೂಲಕ ಸಾವಿರಾರು ಖಾಸಗಿ ವಾಹನಗಳು, ಸಾರ್ವಜನಿಕ ಜನ ಸಾರಿಗೆ ವಾಹನಗಳು ದಿನ ನಿತ್ಯ ಚಲಿಸುತ್ತದೆ. ಇದು ಗ್ರಾಮಾಂತರ ಪ್ರದೇಶವಾಗಿದ್ದು ತನ್ನ ದೈನಂದಿನ ಚಟುವಟಿಕೆಗಳಿಗಾಗಿ ನೂರಾರು ಜನರು ನಡೆದುಕೊಂಡು ಹೋಗುವ ರಸ್ತೆ ಇದಾಗಿರುತ್ತದೆ. ಹತ್ತಿರದಲ್ಲಿರುವ ಪ್ರಾಥಮಿಕ ಹಾಗೂ ಪೌಢ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಮಾರ್ಗವನ್ನು ಉಪಯೋಗಿಸುತ್ತಾರೆ.

ಕೊಲಕಾಡಿ ಎಂಬಲ್ಲಿ ಈ ರಸ್ತೆಗೆ ಅಡ್ಡವಾಗಿ ರೈಲ್ವೇ ಹಳಿ ಹಾದು ಹೋಗುತ್ತದೆ. ಅತ್ಯಂತ ವೇಗವಾಗಿ ರೈಲುಗಳು ಸಂಚರಿಸುತ್ತಿವೆ. ರೈಲ್ವೆ ಗೇಟ್ ಹಾಕಿದಾಗ ರಸ್ತೆಯಲ್ಲಿ ವಾಹನಗಳು ಹಾಗೂ ಜನರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇತ್ತೀಚೆಗೆ ಗೇಟ್ ತೆರೆದಿರುವಾಗಲೇ ಮುನ್ಸೂಚನೆಯಿಲ್ಲದೆ ಅತ್ಯಂತ ವೇಗವಾಗಿ ರೈಲೊಂದು ಸಂಚರಿಸಿದಾಗ ಸಂಬಾವ್ಯ ಅನಾಹುತವೊಂದು ತಪ್ಪಿಹೋದ ಘಟನೆ ವರದಿಯಾಗಿದೆ. ಈ ಕಾರಣದಿಂದಾಗಿ ರೈಲ್ವೇ ಹಳಿಯ ಮೇಲೆ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ ಕವತ್ತಾರು ಶಾಖಾ ಸಮ್ಮೇಳನ ರೈಲ್ವೇ ಇಲಾಖೆಯನ್ನು ಒತ್ತಾಯಿಸಿದೆ. ಈ ವಿಚಾರದಲ್ಲಿ ಸಮ್ಮೇಳನ ಗಂಭೀರವಾಗಿ ಚರ್ಚಿಸಿ ಈ ಮೇಲಿನ ತೀರ್ಮಾನಕ್ಕೆ ಬಂದಿದೆ.

ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀಮತಿ ಸುಲೋಚನಾ ಕವತ್ತಾರು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಮಂಗಳೂರು ತಾಲೂಕು ಜೊತೆ ಕಾರ್ಯದರ್ಶಿ ತಿಮ್ಮಪ್ಪ ಕಾವೂರು ಮುಖ್ಯ ಅತಿಥಿಗಳಾಗಿದ್ದರು. ಗ್ರೆಟ್ಟಾ, ನೀತಾ, ಹರೀಶ್ ಕುಮಾರ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಶಾಖಾ ಕಾರ್ಯದರ್ಶಿಯಾಗಿ ಸುಲೋಚನಾ ಹರೀಶ್‍ರನ್ನು ಪುನರಾಯ್ಕೆ ಮಾಡಲಾಯಿತು.


Spread the love