ಕೊಲ್ಲೂರು ಅಭಿವೃದ್ದಿಗೆ ಸಮಗ್ರ ಮಾಸ್ಟರ್ ಪ್ಲ್ಯಾನ್ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಕೊಲ್ಲೂರು ಅಭಿವೃದ್ದಿಗೆ ಸಮಗ್ರ ಮಾಸ್ಟರ್ ಪ್ಲ್ಯಾನ್ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿಟ್ಟು ಭಕ್ತರ ಮತ್ತು ಅನುಭವಿಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಗತ್ಪ್ರಸಿದ್ದ ಕ್ಷೇತ್ರವಾದ ಕೊಲ್ಲೂರಿನ ಅಭಿವೃದ್ದಿಗೆ ಏನೆಲ್ಲಾ ಪೂರ್ವಸಿದ್ದತೆಗಳು ಬೇಕು ಎನ್ನುವುದರ ಕುರಿತು ಸಮಗ್ರ ಯೋಜನೆಗಳನ್ನು ರೂಪಿಸಿ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಶುಕ್ರವಾರ ಕೊಲ್ಲೂರು ದೇವಳದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಜರುಗಿದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೊಲ್ಲೂರು ದೇವಳ ಸೇರಿದಂತೆ ಕೊಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ 33 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆಯನ್ನು ಹದಿನೈದು ದಿನಗಳೊಳಗೆ ಪೂರ್ಣಗೊಳಿಸಿ ಕಾಮಗಾರಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ನೀರು ಸಿಗುವಂತೆ ಕಾರ್ಯಪ್ರವೃತ್ತರಾಗಬೇಕು. ಒಳಚರಂಡಿ ಕಾಮಗಾರಿ ಬಹುತೇಕ ಮುಗಿದಿದ್ದು, ಕೆಲ ಕಡೆಗಳಲ್ಲಿ ಪೈಪ್ ಒಡೆದಿದೆ. ಇವೆರಡು ಯೋಜನೆಗಳನ್ನು ಹಸ್ತಾಂತರ ಮಾಡುವಾಗ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಯಾವುದೇ ನ್ಯೂನ್ಯತೆಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಪಡೆಯಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೋಟ ಖಡಕ್ ಸೂಚನೆ ನೀಡಿದ್ದಾರೆ.

ಅರೆಶಿರೂರು ಹ್ಯಾಲಿಪ್ಯಾಡ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೆಲಿಪ್ಯಾಡ್ ವ್ಯವಸ್ಥೆಯನ್ನು ಸರಿಪಡಿಸಲು ಅದಕ್ಕೆ ಬೇಕಾಗಿರುವ ಕಾಮಗಾರಿ, ನಕ್ಷೆಗಳು, ಯೋಜನಾ ವರದಿಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕೊಲ್ಲೂರು ದೇವಸ್ಥಾನದ ವತಿಯಿಂದ ಸುಮಾರು 10 ಎಕರೆ ಜಾಗದ ಗೋಮಾಳದಲ್ಲಿ ಗೋಶಾಲೆಯನ್ನು ತೆರೆಯಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಪೊಲೀಸ್ ಠಾಣೆಗಳಲ್ಲಿ ಅಕ್ರಮ ಗೋಸಾಗಾಟಗಾರರಿಂದ ರಕ್ಷಿಸಿದ ಗೋವುಗಳನ್ನು ಸ್ವೀಕರಿಸಲು ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡಬೇಕು. ಪೊಲೀಸರಿಗೂ ಇದರಿಂದ ಸಹಾಯವಾಗಲಿದೆ ಎಂದು ಕೋಟ ಹೇಳಿದರು.

ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಇಡೀ ರಾಜ್ಯದಲ್ಲಿರುವ 34 ಸಾವಿರಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ದೇವಳದ ಮೂಲ ಆಸ್ತಿಗಳು ಖಾಸಗಿಯವರು ಅತಿಕ್ರಮಣ ಮಾಡಿರುವ ಬಗ್ಗೆ ಸಮೀಕ್ಷೆಗಳನ್ನು ನಡೆಸಲು ಈಗಾಗಲೇ ಸೂಚನೆ ನೀಡಿದ್ದೇನೆ. ದೇವಸ್ಥಾನದ ಆಸ್ತಿಪಾಸ್ತಿಗಳ ಸಂರಕ್ಷಣೆಗೋಸ್ಕರ ಈಗಾಗಲೇ ದಾಖಲೀಕರಣ ವ್ಯವಸ್ಥೆಗಳು ನಡೆಯುತ್ತಿವೆ. ಸಮೀಕ್ಷೆ ಕಾರ್ಯ ಎರಡು ತಿಂಗಳು ಮುಗಿದಿದ್ದು ಇನ್ನೊಂದು ತಿಂಗಳುಗಳಲ್ಲಿ ಇವೆಲ್ಲಾ ಪ್ರಕ್ರಿಯೆಗಳು ಮುಗಿಯಲಿವೆ. ಯಾರು ದೇವಸ್ಥಾನದ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೊ ಅಂತವರಿಂದ ನಿರ್ದಾಕ್ಷಿಣ್ಯವಾಗಿ ಜಾಗವನ್ನು ಮರಳಿ ಪಡೆಯುತ್ತೇವೆ. ದೇವಳದ ಆಸ್ತಿ ಕಾಪಾಡುವ ಶಕ್ತಿ ನಮಗಿದೆ ಎಂದರು

ದೇವಳದ ವ್ಯವಸ್ಥಾಪನಾ ಸಮಿತಿ ರಚನೆಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಒಟ್ಟು 225 ಕ್ಕೂ ಹೆಚ್ಚು ಎ ದರ್ಜೆಯ ದೇವಸ್ಥಾನಗಳಲ್ಲಿ 84 ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚಿಸಲು ಅನುಮೋದನೆ ಕೊಡಲಾಗಿದೆ. ಅವುಗಳ ಪೈಕಿ ಅರ್ಜಿದಾರರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಕೊಲ್ಲೂರು ದೇವಳದಲ್ಲೂ ಸಾಕಷ್ಟು ಅರ್ಜಿಗಳು ಬಂದಿವೆ. ಕೊಲ್ಲೂರು ವ್ಯವಸ್ಥಾಪನಾ ಸಮಿತಿಗೆ ಕೇರಳದಲ್ಲಿರುವವರು ಅರ್ಜಿ ಹಾಕಿದ್ದಾರೆ. ಹೀಗಾಗಿ ಸ್ವಲ್ಪ ವಿಳಂಬವಾಗುತ್ತಿದೆ. ಇನ್ನೆರಡು ದಿನಗದಲ್ಲಿ ಪೊಲೀಸ್ ವರದಿ ಬಂದ ಬಳಿಕ ದೂರಗಾಮಿ ಯೋಚನೆಗಳನ್ನು ಮುಂದಿಟ್ಟುಕೊಂಡು ದೇವಸ್ಥಾನವನ್ನು ಪಾರದರ್ಶಕವಾಗಿ ಅಭಿವೃದ್ದಿಪಡಿಸಬಲ್ಲ ತಂಡವನ್ನು ರಚನೆ ಮಾಡಬೇಕು ಎಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿ ಕೆಲಸ ನಡೆಯಲಿದೆ ಎಂದರು.

ಕೊಡಚಾದ್ರಿ ರೋಪ್ ವೇ ಕುರಿತ ವಿರೋಧಗಳಿಗೆ ಪ್ರತಿಕ್ರಿಯಿಸಿರುವ ಅವರು, ಒಂದೆಡೆ ರೋಪ್ ವೇ ಆಗಬೇಕು ಇನ್ನೊಂದೆಡೆ ಮರದ ಗೆಲ್ಲನ್ನು ಕಡಿಯಬಾರದು ಎಂದಾದರೆ ಬಹಳ ಸುಭದಲ್ಲಿ ಅದರ ನಿರ್ವಹಣೆ ಮಾಡುವುದು ಕಷ್ಟ. ಇದರ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡಿ ನಿಸರ್ಗಕ್ಕೆ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಬೇಕು ಎಂಬ ಕಾರ್ಯಸೂಚಿಯಡಿಯಲ್ಲಿ ಯೋಜನೆ ಕೈಗೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆಯ ಮೇರೆಗೆ ಸಂಸದ ರಾಘವೇಂದ್ರ ಅವರು ಕೊಡಚಾದ್ರಿಗೆ ರೋಪ್ ವೇ ಮಾಡಬೇಕು ಎಂಬ ಬಹುದೊಡ್ಡ ಯೋಜನೆಯನ್ನು ರೂಪಿಸುತ್ತಿದ್ದಾರೆ. ಆ ಯೋಜನೆ ನಮ್ಮಲ್ಲಿ ಆದರೆ ಇಡೀ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೊಲ್ಲೂರು ಮದರಿಯಾಗಬೇಕು ಎಂಬ ಕಲ್ಪನೆಯೊಳಗೆ ನಾವೆಲ್ಲರೂ ಅದಕ್ಕೆ ಸಹಕಾರ ಕೊಡುತ್ತಿದ್ದೇವೆ. ನಮ್ಮ ಇಲಾಖೆಯಿಂದ ಏನೇನು ಸಹಕಾರ ಬೇಕು ಅವೆಲ್ಲವನ್ನೂ ಕೊಡಲು ಬದ್ದರಾಗಿದ್ದೇವೆ ಎಂದು ಕೋಟ ಸ್ಪಷ್ಟನೆ ನೀಡಿದರು.

ಕುಂದಾಪುರದ ಉಪ ವಿಭಾಗಾಧಿಕಾರಿ ಕೆ.ರಾಜು, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ, ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಇದ್ದರು.


Spread the love