ಕೋಟ ಅವಳಿ ಕೊಲೆಯಲ್ಲಿ ಭಾಗಿಯಾದ ಜಿಪಂ ಸದಸ್ಯನ ರಕ್ಷಣೆಗೆ ಬಿಜೆಪಿ ಪ್ರಯತ್ನ – ವಿನಯ್ ಕುಮಾರ್ ಸೊರಕೆ

ಕೋಟ ಅವಳಿ ಕೊಲೆಯಲ್ಲಿ ಭಾಗಿಯಾದ ಜಿಪಂ ಸದಸ್ಯನ ರಕ್ಷಣೆಗೆ ಬಿಜೆಪಿ ಪ್ರಯತ್ನ – ವಿನಯ್ ಕುಮಾರ್ ಸೊರಕೆ

ಕುಂದಾಪುರ: ಯಾವೊಬ್ಬ ವ್ಯಕ್ತಿ ಸತ್ತರೂ ಸ್ಥಳಕ್ಕೆ ಧಾವಿಸಿ ಆತ ಯಾವ ಜಾತಿ, ಧರ್ಮ ಎಂದು ವಿಚಾರಿಸಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡಿದವರೇ ಇಂದು ಕೋಟ ಜೋಡಿ ಕೊಲೆ ಕೃತ್ಯವನ್ನು ಮುಚ್ಚಿಡುವ ಕೆಲಸಕ್ಕೆ ಮುಂದಾಗಿರುವುದು ದುರಂತ. ಬಿಜೆಪಿಯ ನಿಜವಾದ ಬಣ್ಣ ಇದೀಗ ಬಯಲಾಗಿದೆ. ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ಕೋಟದಲ್ಲಿ ನಡೆದ ಅಮಾಯಕ ಯುವಕರ ಜೋಡಿ ಕೊಲೆ ವಿರುದ್ಧ ಹಾಗೂ ಈ ಕೊಲೆಯಲ್ಲಿ ಭಾಗಿಯಾದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರಾಜೀನಾಮೆಗೆ ಆಗ್ರಹಿಸಿ ಕೋಟ ಪೇಟೆಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು

ಭರತ್ ಹಾಗೂ ಯತೀಶ್ ಯಾವುದೇ ರೀತಿಯ ದುಷ್ಕøತ್ಯದಲ್ಲಿ ಭಾಗಿಯಾದ ಯುವಕರಲ್ಲ. ಎಲ್ಲಾ ಸಂದರ್ಭಗಳಲ್ಲೂ ಜನರಿಗೆ ಸಹಾಯಾಸ್ತ ಚಾಚುವ ಸ್ನೇಹಮಯಿ ಯುವಕರಾಗಿದ್ದರು. ಇಂತಹ ಯುವಕರನ್ನು ಅಮಾನುಷವಾಗಿ ಕೊಲೆಗೈದಿರುವುದು ಖಂಡನೀಯ. ಪ್ರಕರಣವನ್ನು ಮುಚ್ಚಿ ಹಾಕುವ ರೀತಿಯಲ್ಲಿ ಒತ್ತಡ ತರುವ ಕೆಲಸವನ್ನು ಬಿಜೆಪಿಗರು ಮಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಮಾನುಶವಾಗಿ ಕೊಲೆ ಮಾಡುವ ವ್ಯಕ್ತಿಗಳು ಯಾರು ಮತ್ತು ಯಾವ ಪಕ್ಷಕ್ಕೆ ಸೇರಿದವರು, ಯಾರು ಕೊಲೆಗಡುಕರಿಗೆ ರಕ್ಷಣೆ ಕೊಡುವವರು ಎಂಬುವುದು ಬೇರೆ ಉದಾಹರಣೆ ಬೇಕಿಲ್ಲ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಗಲಭೆ ಎಬ್ಬಿಸಿದವರು ಇಂದು ಸಿಬಿಐ ತನಿಖೆ ಎತ್ತ ಸಾಗಿದೆ ಎಂಬುವುದರ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರವೀಣ್ ಪೂಜಾರಿ, ವಿನಾಯಕ ಬಾಳಿಗ, ಬಂಟ್ವಾಳದ ಹರೀಶ್ ಪೂಜಾರಿಯವರನ್ನು ಕೊಂದವರೇ ಬಿಜೆಪಿಗರು. ಈ ಪ್ರತಿಭಟನೆ ಕೇವಲ ಕೋಟಕ್ಕೆ ಮಾತ್ರ ಸೀಮಿತವಲ್ಲ. ಇಡೀ ಉಡುಪಿ ಜಿಲ್ಲೆಗೆ ಈ ಪ್ರತಿಭಟನೆಯನ್ನು ವಿಸ್ತರಿಸುವ ಮೂಲಕ ಯತೀಶ್ ಹಗೂ ಭರತ್ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ಹೋರಾಟ ಮಾಡಲು ನಾವೆಲ್ಲರೂ ಬದ್ದರಾಗಿದ್ದೇವೆ. ಕೋಟ ವ್ಯಾಪ್ತಿಯಲ್ಲಿ ನಡೆದಂತಹ ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲೂ ಜನಪ್ರತಿನಿಧಿಯಾದ ಓರ್ವ ವ್ಯಕ್ತಿ ಸಕ್ರಿಯವಾಗಿ ಭಾಗವಹಿಸಿದ ದಾಖಲೆಗಳಿವೆ ಎಂದು ಸೊರಕೆ ಆರೋಪಿಸಿದರು.

ಕಳೆದ ಬಾರಿ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯ ಸಚಿವರಾಗಿ ಈ ಭಾಗಕ್ಕೆ ಆಗಮಿಸಿದ ವೇಳೆಯಲ್ಲಿ ಅವರ ಕಾರಿಗೆ ಕಲ್ಲು ತೂರಿ ಪ್ರತಿಭಟಿಸಿದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ಪಕ್ಷದ  ಜನಪ್ರತಿನಿಧಿಯಾದವನು ಕೊಲೆ ಪ್ರಕರಣದಲ್ಲಿ ಭಾಗಿಯಾದ ಸಂದರ್ಭದಲ್ಲಿ ತಕ್ಷಣ ಅವರನ್ನು ಪಕ್ಷದಿಂದ ತೆಗೆದು ಹಾಕುವುದು ಆ ಪಕ್ಷದ ನೈತಿಕ ಗುಣವನ್ನು ಎತ್ತಿ ತೋರಿಸುತ್ತದೆ. ಆದರೆ ಇಂದು ಭಾರತೀಯ ಜನತಾ ಪಕ್ಷ ಪರೋಕ್ಷವಾಗಿ ಕೊಲೆಗಡುಕರಿಗೆ ಬೆಂಬಲ ಕೊಡುವುದರ ಮೂಲಕ ಯಾರು ಕೃತ್ಯ ನಡೆಸಿದ್ದಾರೊ ಅವರನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ. ಯತೀಶ್, ಭರತ್ ಕುಟುಂಬಕ್ಕೆ ಸರ್ಕಾರ ಹಂತದಲ್ಲಿ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದರು.

ಪ್ರತಿಭಟನೆಯನ್ನುದ್ದಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಯಾರಾದರೂ ಸತ್ತರೆ ಅವ ನಮ್ಮವ ಎಂದು ಹೇಳಿ ಗಲಭೆ ಎಬ್ಬಿಸುವ ಸಂಸದೆ ಶೋಭಾ ಕರಂದ್ಲಾಜೆಗೆ ಕೊಲೆಗೀಡಾದ ಅಮಾಯಕ ಯುವಕರಾದ ಭರತ್ ಹಾಗೂ ಯತೀಶ್ ನಮ್ಮವರೆನಿಸಲಿಲ್ಲ. ರಕ್ತಚರಿತ್ರೆಯನ್ನು ಬರೆಯಲು ಹೊರಟ ಶೋಭಾ ಕರಂದ್ಲಾಜೆಯವರೇ ನೀವು ಕೋಟ ಜೋಡಿ ಕೊಲೆಯನ್ನು ಯಾವ ರೀತಿ ಸಮರ್ಥಿಸಿಕೊಳ್ಳುವಿರಿ, ನಿಮ್ಮ ಪಕ್ಷದ ಚುನಾಯಿತ ಸದಸ್ಯ ಮಾಡಿಸಿದ ಈ ಕೊಲೆಗೆ ಯಾವ ರೀತಿ ಉತ್ತರ ಹೇಳುವಿರಿ ಎಂದು ಸಂಸದೆ ಕರಂದ್ಲಾಜೆಯನ್ನು ಪ್ರಶ್ನಿಸಿದರು.

ಹಿಂದೂಗಳೆಂದರೆ ಬಿಜೆಪಿಯಲ್ಲಿದ್ದವರು ಮಾತ್ರ ಹಿಂದೂಗಳೇ. ಬೇರೆಯವರು ಹಿಂದೂಗಳಲ್ಲವೇ. ಹಿಂದೂಗಳೆನಿಸಿಕೊಳ್ಳಲು ಬಿಜೆಪಿಯ ಲೇಬಲ್ ಅವಶ್ಯಕತೆ ಇಲ್ಲ. ಇಂತಹ ಹಲವು ಕೊಲೆಗಳನ್ನು ಮಾಡಿದವರು, ಮಾಡಿಸಿದವರು ಬಿಜೆಪಿಗರು ಕೊಲೆಗಡುಕರು ಎಂದು ಕಿಶನ್ ಹೆಗ್ಡೆ ಕೊಳ್ಕೆಬೈಲ್ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೋಟ ಜೋಡಿ ಕೊಲೆಗೆ ನೇರ ಜವಾಬ್ದಾರಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ಮಾತ್ರವಲ್ಲ. ಈತನನ್ನು ಬೆಂಬಲಿಸಿದ ಬಿಜೆಪಿ ನಾಯಕರು ಕೂಡ ನೇರ ಜವಾಬ್ದಾರರು. ಇಡೀ ಜಿಲ್ಲಾ ಕಾಂಗ್ರೆಸ್ ಅಮಾಯಕ ಹುಡುಗರ ಕೊಲೆಗೆ ಬಿಜೆಪಿ ನಾಯಕರಿಂದ ಉತ್ತರವನ್ನು ಬಯಸುತ್ತಿದೆ. ಊರೆಲ್ಲಾ ಹೋಗಿ ಕೂಗಬೇಡಿ. ಅಮಾಯಕ ಯುವಕರ ಕೊಲೆ ನಡೆದು ಹದಿನಾರು ದಿನಗಳು ಕಳೆಯುತ್ತಾ ಬಂತು. ಆದರೂ ಈ ಕ್ಷೇತ್ರವನ್ನು ಪ್ರತಿನಿಧಿಸುವವರು ಎಲ್ಲಿದ್ದಾರೆ. ಭರತ್, ಯತೀಶ್ ಯುವಕರಿಬ್ಬರ ರಕ್ತ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ಕನಿಷ್ಠ ಆ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸವನ್ನಾದರು ಮಾಡಿ ಎಂದು ಕೊಳ್ಕೆಬೈಲ್ ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಕಾಂಗ್ರೆಸ್ ನಾಯಕರಾದ ರಾಕೇಶ್ ಮಲ್ಲಿ, ಎಐಸಿಸಿ ಸದಸ್ಯ ಅಮೃತ್ ಶೆಣೈ, ಮಾಜಿ ಶಾಸಕ ಗೋಪಾಲ ಭಂಡಾರಿ, ತಿಮ್ಮ ಪೂಜಾರಿ, ವಿಕಾಸ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಕುಂದಾಪುರ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಚಾಲಕಿ ರೋಶನಿ ಒಲಿವೇರಾ, ವೈಬಿ ರಾಘು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಡೆರಿಕ್ ಡಿಸೋಜಾ, ಮಾಜಿ ತಾಫಂ ಉಪಾಧ್ಯಕ್ಷ ರಾಜಾರಾಂ ಹಾಗೂ ಇತರರು ಉಪಸ್ಥಿತರಿದ್ದರು.