ಕೋಟ : ಐರೋಡಿ ರಾಮಮಂದಿರದ ಬಳಿ ಜುಗಾರಿ ಆಡುತ್ತಿದ್ದ 10 ಮಂದಿಯ ಬಂಧನ

ಕೋಟ : ಐರೋಡಿ ರಾಮಮಂದಿರದ ಬಳಿ ಜುಗಾರಿ ಆಡುತ್ತಿದ್ದ 10 ಮಂದಿಯ ಬಂಧನ

ಬ್ರಹ್ಮಾವರ: ಐರೋಡಿ ಗ್ರಾಮದ ರಾಮಮಂದಿರದ ಹಿಂದೆ  ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಕೋಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತರನ್ನು ಗುಂಡ್ಮಿ ನಿವಾಸಿ ಚಂದ್ರ ಪೂಜಾರಿ , ಮೂಡಹಡು ಯಡಬೆಟ್ಟು ನಿವಾಸಿ ಕಾಳ, ಗುಂಡ್ಮಿ ನಿವಾಸಿ ರವೀಂದ್ರ, ಭೋಜ, ಮೂಡಹಡು ನಿವಾಸಿ ಚಂದ್ರ, ಗುಂಡ್ಮಿ ನಿವಾಸಿ ಸುಬ್ರಹ್ಮಣ್ಯ, ಪ್ರಜ್ವಲ್, ಅವಿನಾಶ, ಗಣೇಶ, ಪಾಂಡೇಶ್ವರ ನಿವಾಸಿಗಳಾದ ಮೋಹನ ಮತ್ತು ಸುಧಾಕರ ಎಂದು ಗುರುತಿಸಲಾಗಿದೆ.

ಸೋಮವಾರ ಕೋಟ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನಿತ್ಯಾನಂದ ಗೌಡ ಪಿ.ಡಿ ಇವರಿಗೆ  ಐರೋಡಿ ಗ್ರಾಮದ ರಾಮಮಂದಿರದ ಹಿಂದೆ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ  ಮೇರೆಗೆ  ದಾಳಿ ನಡೆಸಿದಾಗ  ಜುಗಾರಿ ಆಟದಲ್ಲಿ ನಿರತರಾದವರು ಓಡಲು ಯತ್ನಿಸಿದ್ದು ಅವರೆಲ್ಲರನ್ನು ಬಂಧಿಸಿದ್ದು ಬಂಧಿತರಿಂದ  ಜುಗಾರಿ ಆಟಕ್ಕೆ ಬಳಸಿದ ವಸ್ತುಗಳನ್ನು ಹಾಗೂ ನಗದು ರೂ  82,040/- ವಶಪಡಿಸಿಕೊಂಡಿದ್ದಾರೆ.

ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.