ಕೋಟ ಶ್ರೀನಿವಾಸ ಪೂಜಾರಿ ಭಾಷಣಕಷ್ಟೇ ಸೀಮಿತ ಅಭಿವೃದ್ಧಿ ಶೂನ್ಯ – ನವೀನ್ ಸಾಲಿಯಾನ್

Spread the love

ಕೋಟ ಶ್ರೀನಿವಾಸ ಪೂಜಾರಿ ಭಾಷಣಕಷ್ಟೇ ಸೀಮಿತ ಅಭಿವೃದ್ಧಿ ಶೂನ್ಯ – ನವೀನ್ ಸಾಲಿಯಾನ್

ಉಡುಪಿ: ಉಡುಪಿ- ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಸೊಗಸಾದ ಮಾತುಗಾರಿಕೆಯಿಂದ ಜನರನ್ನು ಇಲ್ಲಿಯ ತನಕ ಮರಳು ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಜನಪರ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಅವರು ಕೇವಲ ಭಾಷಣಕ್ಕೆ ಸೀಮಿತ ಹೊರತು ಅಭಿವೃದ್ಧಿ ಕೆಲಸ ಶೂನ್ಯ ಎಂದು ಉಡುಪಿ ಜಿಲ್ಲಾ ಮೀನುಗಾರಿಕಾ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಸಾಲಿಯಾನ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆಯವರು ಕೋಟ ಅವರ ಭಾಷಾ ಜ್ಞಾನದ ಬಗ್ಗೆ ಯಾವುದೇ ರೀತಿಯ ಅಸಂಬದ್ಧ ಹೇಳಿಕೆ ನೀಡಿಲ್ಲ ಎಂದರೂ ಕೂಡ ಮತ್ತು ಅದಕ್ಕೆ ಸೂಕ್ತ ದಾಖಲೆಯನ್ನು ನೀಡಿದರೂ ಕೂಡ ತಮ್ಮ ಪ್ರಚಾರದ ತೆವಲಿಗೆ ಹೆಗ್ಡೆಯವರ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವುದು ಕೋಟ ಅವರ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದ್ದಲ್ಲ. ಒರ್ವ ರಾಜಕೀಯ ವ್ಯಕ್ತಿ ಇಂತಹ ಸುಳ್ಳು ಆರೋಪವನ್ನು ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಶೋಭೆ ತರುವಂತಹ ವಿಚಾರವಲ್ಲ.

ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರಾಗಿದ್ದ ವೇಳೆ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ಪಡಿತರದಲ್ಲಿ ನೀಡುವ ಭರವಸೆ ನೀಡಿದ್ದರು. ಪರಿಶಿಷ್ಟ ಪಂಗಡದ ಜನರಿಗೆ ಮನೆ ನಿರ್ಮಾಣಕ್ಕೆ ರೂ 5ಲಕ್ಷದಂತೆ ಅನುದಾನ ಒದಗಿಸುವುದಾಗಿ ಹೇಳಿದ್ದರು ಆದರೆ ಇಲ್ಲಿಯ ವರೆಗೆ ಅವರು ಅದನ್ನು ಜಾರಿ ಮಾಡಿಸುವಲ್ಲಿ ಸೋತಿದ್ದಾರೆ. ಕೇವಲ ಬಾಯಿಚಪಲಕ್ಕೆ ಭಾಷಣಗಳ ಮೂಲಕ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಅವರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಕೇಂದ್ರ ಸರಕಾರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬಿಲ್ಲವರ ಆರಾಧ್ಯ ದೈವ ಎನಿಸಿಕೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ನಿಷೇಧ ಮಾಡಿದಾಗಲೂ ಕೂಡ ಅದೇ ಬಿಲ್ಲವ ಸಮುದಾಯದ ನಾಯಕ ಎನಿಸಿಕೊಂಡ ಕೋಟರ ಬಾಯಿಗೆ ಬೀಗ ಹಾಕಿತ್ತು.

ಕೆ ಜಯಪ್ರಕಾಶ್ ಹೆಗ್ಡೆಯವರು ಅಧಿಕಾರ ಇಲ್ಲದೆ ಹೋದರೂ ಕೂಡ ಅವರಲ್ಲಿ ಬರುವ ಜನರ ಕಷ್ಟಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಿಕೊಂಡು ಬಂದಿದ್ದಾರೆ. ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದ ವೇಳೆ ಮೀನುಗಾರ ಸಮುದಾಯಕ್ಕೆ ಕ್ರಾಂತಿಕಾರಕ ಯೋಜನೆಗಳ ಮೂಲಕ ಸಮುದಾಯದ ಏಳಿಗೆಗೆ ಹೆಗ್ಡೆ ಕಾರಣೀಕರ್ತರಾಗಿದ್ದಾರೆ. ಸಂಸದರಾಗಿದ್ದ ವೇಳೆ ಎರಡೂ ಜಿಲ್ಲೆಗಳ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ದನಿಯಾಗಿದ್ದು ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಿದ್ದಾರೆ. ಇಂತಹ ಒರ್ವ ಸಜ್ಜನ ರಾಜಕಾರಿಣಿಯ ಮಾನ ಕಳೆಯುವಂತ ಕೆಲಸ ಮಾಡುತ್ತಿರುವ ಕೋಟ ಮತ್ತು ಅವರ ಬಿಜೆಪಿ ಪರಿವಾರಕ್ಕೆ ಈ ಬಾರಿಯ ಮತದಾರ ಸೂಕ್ತ ಉತ್ತರ ನೀಡಲಿದ್ದಾರೆ. ಸುಳ್ಳು ಭರವಸೆಗಳ ಸರದಾರರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಈ ಕೂಡಲೇ ಜಯಪ್ರಕಾಶ್ ಹೆಗ್ಡೆಯವರ ಕುರಿತು ಮಾಡಿರುವ ಸುಳ್ಳು ಆರೋಪಗಳಿಗೆ ಕ್ಷಮೆಯಾಚಿಸುವಂತೆ ನವೀನ್ ಸಾಲಿಯಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love