ಕೋವಿಡ್ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾ ಅಧಿಕಾರಿಯನ್ನು ನೇಮಿಸಲು ಒತ್ತಾಯ – ಪಿ.ವಿ.ಮೋಹನ್

Spread the love

ಕೋವಿಡ್ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾ ಅಧಿಕಾರಿಯನ್ನು ನೇಮಿಸಲು ಒತ್ತಾಯ – ಪಿ.ವಿ.ಮೋಹನ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾಧಿಕಾರಿಯನ್ನು ನೇಮಕಗೊಳಿಸುವಂತೆ ಕೆಪಿಸಿಸಿ ವಕ್ತಾರ ಪಿವಿ ಮೋಹನ್ ಆಗ್ರಹಿಸಿದ್ದಾರೆ.

ನಿನ್ನೆ ಕೊರೋನಾ ವೈರಾಣುವಿಗೆ ಮತ್ತೆ ಒಂದು ಮಹಿಳೆ ಬಲಿಯಾಗಿದೆ. ಮತ್ತೊಂದು ಮಹಿಳೆಗೆ ಸೋಂಕು ದೃಡಪಟ್ಟಿದೆ. ಶಕ್ತಿನಗರ ನಂತರ ಇದೀಗ ಬೊಳೂರು ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ. ಬಫರ್ ಝೋನ್ ಎಂದು ಘೋಷಿಸಲ್ಪಟ್ಟ 5 ಕಿ.ಮೀ ವ್ಯಾಪ್ತಿಯ ಈ ಪ್ರದೇಶದಲ್ಲಿ ಸುಮಾರು 80,000 ಬಡ ಜನರು ವಾಸಿಸುತ್ತಿದ್ದಾರೆ. ಶಕ್ತಿನಗರದಲ್ಲಿ ಕೂಡಾ ಬಡ ಜನರೇ ಹೆಚ್ಚಾಗಿರುತ್ತಾರೆ. ಇದೀಗ ಜಿಲ್ಲೆಯು ನಿಜವಾಗಿಯೂ ಆತಂಕದಲ್ಲಿದೆ. ವಿಷೇಶವಾಗಿ ಮಂಗಳೂರು ಜನತೆ ಸ್ಥಿತಿಯೂ ಅಪಾಯದಲ್ಲಿದೆ. ಎಪ್ರಿಲ್ 19 ರ ನಂತರ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಮೇಲೆ ಪ್ರಾಥಮಿಕವಾಗಿ 19 ಸೋಂಕು ತಗಲಿದ ಪ್ರಕರಣಗಳು ಮತ್ತು ನಿನ್ನೆಯ 2 ಪ್ರಕರಣಗಳು ಕೂಡಾ ಪಡೀಲ್‍ನಲ್ಲಿರುವ ಒಂದೇ ಆಸ್ಪತ್ರೆಯ ಸಂಪರ್ಕದಿಂದ ಬಂದಿರುತ್ತದೆ. ಮೇಲ್ನೋಟಕ್ಕೆ ಈ ಸೋಂಕಿಗೆ ಮತ್ತು ಕೋವಿಡ್ ಬಲಿಗೆ ಮೂಲ ಕಸಬಾ ಗ್ರಾಮದ ಮಹಿಳೆಯ ಕುಟುಂಬವೇ ಕಾರಣವೆಂಬುದು ಕಂಡುಬರುತ್ತದೆ.

ಈ ದುರದೃಷ್ಟ ಮಹಿಳೆಯ ಮಗ ದುಬೈ ನಿಂದ ಬಂದಾಗ ಸೋಂಕು ತಂದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ ಆದರೆ ಅದರ ಬಗ್ಗೆ ಯಾವುದೇ ದೃಡೀಕರಿಸುತ್ತಿಲ್ಲ. ಈ ಅಂತೆಕಂತೆಗಳನ್ನೇ ಅಧಿಕಾರಿಗಳು ಹೇಳಿಕೊಂಡು ಬಂದಿರುತ್ತಾರೆ. ಗುಣಮುಖರಾಗಿ ಬಿಡುಗಡೆ ಹೊಂದಿದ ರೋಗಿಗಳನ್ನು ಸರಿಯಾಗಿ ಸಂಪರ್ಕಿಸಿಲ್ಲ ಮತ್ತು ಅವರ ದಾಖಲಾತಿಗಳನ್ನು ಕೇಳುವ ಗೋಜಿಗೂ ಹೋಗಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿನ ತನಿಖೆ ಬಿಟ್ಟರೆ ಬೇರಾವುದೇ ಮುಂದಿನ ತನಿಖೆ ನಡೆದಿಲ್ಲ. ರಾಜಕೀಯ ಒತ್ತಡ ಮತ್ತು ರಾಜಕೀಯ ಹಸ್ತಕ್ಷೇಪದಿಂದಾಗಿ ಇಂತಹಾ ಗಂಭೀರ ವಿಷಯದಲ್ಲಿ ಜಿಲ್ಲಾಡಳಿತ ಕೈಚೆಲ್ಲಿ ಕೂತಂತಿದೆ. ಕಳೆದ 25 ದಿನಗಳಿಂದ ಜಿಲ್ಲಾಡಳಿತವು ಸೋಂಕಿನ ನೈಜ ಮೂಲವನ್ನು ಅರಿಯಲು ಸಂಪೂರ್ಣ ವಿಫಲಗೊಂಡಿದೆ.

ಮಂಗಳೂರಿನ ಪಡೀಲ್ ಆಸ್ಪತ್ರೆಯು ಜಿಲ್ಲೆಯ ಕೋವಿಡ್‍ನ ಮೂಲ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಮೈಸೂರಿನ ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಯಿಂದ ಸುಮಾರು 70 ಪ್ರಕರಣಗಳು ದಾಖಲಾಗಿವೆ. ಮಂಗಳೂರು ದ.ಕ. ಜಿಲ್ಲೆಯ ಮತ್ತೊಂದು ನಂಜನಗೂಡಾಗಬಾರದು. ಸೋಂಕು ವ್ಯಾಪಕವಾಗುತ್ತಿದೆ ಮೂಲ ನಿಗೂಢವಗಿಯೇ ಇದೆ. ಉನ್ನತ ಅಧಿಕಾರಿಯಿಂದ ಸರಕಾರವು ತನಿಖೆ ಮಾಡಿಸಬೇಕು. ಕೋವಿಡ್‍ನ ಪ್ರಸರಣ ಮತ್ತು ಸೋಂಕಿನ ನೈಜ ಮೂಲವನ್ನು ಹುಡುಕಲು ಸರಕಾರವು ಇದೊಂದು ಪತ್ತೇದಾರಿ ಕೆಲಸವಾದುದರಿಂದ ಐ.ಪಿ.ಎಸ್ ಮೂಲದ ಅಧಿಕಾರಿಯನ್ನು ನೇಮಿಸಬೇಕು ಎಂದು ಕಾಂಗ್ರೆಸ್ ಆಗ್ರಹ ಪಡಿಸುತ್ತಿದೆ. ಕಾಂಗ್ರೆಸ್ ಪಕ್ಷವು ಪ್ರತಿಭಟನೆ ಮಾಡುವ ಹಾಗೆ ಸನ್ನಿವೇಶವನ್ನು ಸರಕಾರವು ಈ ಕೋವಿಡ್‍ನ ಸಮಯದಲ್ಲಿ ಸೃಷ್ಟಿಸಬಾರದು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಹಾಗೆಯೇ ಕೋವಿಡ್ ಆಸ್ಪತ್ರೆಯ ಮೇಲ್ವಿಚಾರಣೆಗೆ ಓರ್ವ ಕೆ.ಎ.ಎಸ್ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಶಿಷ್ಠಾಚಾರ ಕೂಡಾ ಕಾಣುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘಣೆಯಾಗುತ್ತಿದೆ . ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಲಕ್ಷಣ ಕಂಡುಬಂದಿದ್ದು ಸರಕಾರವು ಈ ವಿಷಯದ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.


Spread the love