ಕ್ರೈಸ್ತರ ಅಭ್ಯುದಯಕ್ಕೆ 125 ಕೋಟಿ: ಜೆ.ಆರ್. ಲೋಬೋ

Spread the love

ಮಡಿಕೇರಿ: ರಾಜ್ಯ -ಸರ್ಕಾರವು ಕ್ರೈಸ್ತ ಸಮಾಜದ ಅಭ್ಯುದಯಕ್ಕೆ ಒಟ್ಟಾರೆ 125 ಕೋಟಿ ಹಣವನ್ನು ಮೀಸಲಿರಿಸಿದ್ದು, ಸಮಾಜದವರು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಜೆ.ಆರ್. ಲೋಬೋ ಮನವಿ ಮಾಡಿದರು.

ನಗರದ ಸೇಂಟ್‌ ಮೈಕಲರ ಶಾಲೆಯಲ್ಲಿ ಕೊಡಗು ಜಿಲ್ಲೆಯ ಕ್ರೈಸ್ತ ಸಮಾಜದ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 3.6ರಷ್ಟು ಕ್ರಿಶ್ಚಿಯನರಿದ್ದಾರೆ. ಸರ್ಕಾರ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಆದರೆ, ಕ್ರೈಸ್ತ ಸಮುದಾಯವು ಸೌಲಭ್ಯಗಳನ್ನು ಪಡೆಯಲು ಹಿಂದೆ ಬಿದ್ದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಸಲಹೆ ನೀಡಿದರು.

ಸರ್ಕಾರದ ಅನುದಾನವನ್ನು ಉತ್ತಮ ಕಾರ್ಯಗಳಿಗೆ ಬಳಕೆ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ₹ 1 ಕೋಟಿವರೆಗೆ, ಪುರಸಭೆ, ನಗರಸಭೆ, ಪಟ್ಟಣ ವ್ಯಾಪ್ತಿಯಲ್ಲಿ ₹ 50 ಲಕ್ಷದವರೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತದೆ. ವೃದ್ಧಾಶ್ರಮದ ನಿರ್ವಹಣೆಗೂ ಸಹ ಅನುದಾನ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮಾಜದ ಪ್ರತಿನಿಧಿ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಚರ್ಚ್‌ಗಳ ದುರಸ್ತಿ ಹಾಗೂ ನವೀಕರಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತಾಗಬೇಕು. ಬಡ ಕ್ರಿಶ್ಚಿಯನ್ನರಿಗೆ ಸಹಾಯಧನ ಕಲ್ಪಿಸಬೇಕು. ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ಸಮಿತಿ ಇರುವಂತೆ ಜಿಲ್ಲಾಮಟ್ಟದಲ್ಲಿಯೂ ಸಹ ಸಮಿತಿ ರಚನೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಕಾಲದಲ್ಲಿ ಸಾಲ ಸೌಲಭ್ಯ ದೊರೆಯಬೇಕು. ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಒದಗಿಸಿ ಎಂದು ಜೋಕಿಂಗ್ ರೋಡ್ರಿಗಸ್‌ ಮನವಿ ಮಾಡಿದರು.

ಸಮಿತಿಯ ಉಪ ಕಾರ್ಯದರ್ಶಿ ಅಂಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್, ವಿರಾಜಪೇಟೆ ಸೇಂಟ್‌ ಅನ್ನಮ್ಮ ಶಾಲೆಯ ಫಾದರ್ ಮುತ್ತುಸ್ವಾಮಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಾಗೇಂದ್ರ ಪ್ರಸಾದ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್‌ ಹಾಜರಿದ್ದರು.


Spread the love