ಕ್ಷೇತ್ರಕ್ಕೆ ವೈಯುಕ್ತಿಕ ಸಾಧನೆ ಮಾಡದೆ ಮೋದಿ ಹೆಸರಿನಲ್ಲಿ ಮತ ಕೇಳುವ ದುರ್ಗತಿ ಸಂಸದರದ್ದು – ಪ್ರಮೋದ್

Spread the love

ಕ್ಷೇತ್ರಕ್ಕೆ ವೈಯುಕ್ತಿಕ ಸಾಧನೆ ಮಾಡದೆ ಮೋದಿ ಹೆಸರಿನಲ್ಲಿ ಮತ ಕೇಳುವ ದುರ್ಗತಿ ಸಂಸದರದ್ದು – ಪ್ರಮೋದ್

ಆಲ್ದೂರು: ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಆಲ್ದೂರು ಪಟ್ಟಣದಲ್ಲಿ ಮತಯಾಚನೆ ಮಾಡಿದರು.

ಮಧ್ಯಾಹ್ನದ ವೇಳೆಗೆ ಚುನಾವಣಾ ಪ್ರಚಾರಕ್ಕೆ ಬಂದ ಅವರು ಆಲ್ದೂರಿನ ಗಣಪತಿ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ‘ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

‘ಈ ಬಾರಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರುವ ನನಗೆ ಮತ ನೀಡಿದಲ್ಲಿ ಈ ಭಾಗಕ್ಕೆ ಇನ್ನೂ ಉತ್ತಮ ಸೇವೆಯನ್ನು ಮಾಡಲು ಸಹಕಾರಿಯಾಗುತ್ತದೆ. ನಿಮ್ಮ ಮನವಿಗೆ ಯಾವಾಗಲೂ ಸ್ಪಂದನೆ ಮಾಡುತ್ತೇನೆ’ ಎಂದು ಪ್ರಮೋದ್ ಹೇಳಿದರು.

‘ನನ್ನ ಕಾರ್ಯದ ಕ್ಷಮತೆ ಏನೆಂಬುವುದನ್ನು ಉಡುಪಿ ಕ್ಷೇತ್ರಕ್ಕೆ ಬಂದು ವಿಚಾರಣೆ ಮಾಡಿ, ಯಾವಾಗಲೂ ಸಾರ್ವಜನಿಕರ ಬಳಿಯಲ್ಲಿ ಕೆಲಸ ಮಾಡುವ ನನಗೆ ಜನಸಾಮಾನ್ಯರ ಕಷ್ಟ ಏನೆಂಬುವುದರ ಅರಿವು ಇದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಸಾಮಾನ್ಯರ ಬಗ್ಗೆ ಕಾಳಜಿ ಇದೆ. ಆದರೆ, ಬಿಜೆಪಿಯ ನಾಯಕರು ಅವರನ್ನು ವ್ಯಂಗ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶದ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಜನಪರ ಯೋಜನೆಗಳನ್ನು ಜಾರಿಗೆ ತರಬಹುದಾಗಿತ್ತು. ತಾವು ಮಾಡಿರುವ ಕೆಲಸವನ್ನು ಮುಂದಿಟ್ಟುಕೊಂಡು ಮತ ಕೇಳುವ ಬದಲು ಮೋದಿಯವರನ್ನು ಮುಂದಿಟ್ಟುಕೊಂಡು ಜನರ ಬಳಿ ಬಂದಿದ್ದಾರೆ’ ಎಂದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರು ಮಾತನಾಡಿ, ‘ಬಿಜೆಪಿ ಸರ್ಕಾರದಿಂದ ಯಾವುದೇ ಭರವಸೆಯ ಈಡೇರಿಕೆ ಆಗಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಹೆಚ್ಚಿಸುವಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಅದರಲ್ಲೂ ಮಲೆನಾಡು ಭಾಗದ ಜನರಿಗೆ ಯಾವುದೇ ಯೋಜನೆ ನೀಡಲಾಗಿಲ್ಲ. ನೋಟ್ ಬ್ಯಾನ್ ನಂತಹ ಕೆಲಸಗಳನ್ನು ಮಾಡಿ ಜನಸಾಮಾನ್ಯರನ್ನು ಕಡೆಗಣಿಸಲಾಯಿತು. ಜಿಎಸ್ಟಿ ಜಾರಿಗೆ ತರುವುದರ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಜನಸಾಮಾನ್ಯರ ಆಸೆ ಈಡೇರಬೇಕು ಎಂದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.

ಪ್ರಚಾರ ಕಾರ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ರಘು ಸೇರಿದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.


Spread the love