ಗಂಗೊಳ್ಳಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ 70 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

Spread the love

ಗಂಗೊಳ್ಳಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ 70 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಗಂಗೊಳ್ಳಿ: ಉಡುಪಿ ನ್ಯಾಯಾಲಯದಲ್ಲಿ ‘ಡಿ’ದರ್ಜೆಯ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ ದಯಾನಂದ ಎಂಬಾತ ಹಲವು ಜನರಿಗೆ ಒಟ್ಟು 70.25 ಲಕ್ಷ ರೂ. ವಂಚಿಸಿದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಕೋಟೇಶ್ವರ ಗ್ರಾಮದ ದೀಪಕ್ ಎಂಬವರು ದಯಾನಂದ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಉಡುಪಿ ನ್ಯಾಯಾಲಯದಲ್ಲಿ ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ 2022ರ ಜೂ.10ರಂದು ತನ್ನಿಂದ 6.5 ಲಕ್ಷ ರೂ.ಹಣವನ್ನು ನಗದಾಗಿ ಪಡೆದುಕೊಂಡಿದ್ದು, ಜೂ.16ರಂದು ಮತ್ತೆ ಮೂರು ಲಕ್ಷ ರೂ.ಹಣವನ್ನು ದಯಾನಂದ ನೀಡಿದ ಎಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ದಯಾನಂದ ಇದೇ ರೀತಿಯಲ್ಲಿ ಸುಶೀಲಾ ಎಂಬವರಿಂದ 5.5ಲಕ್ಷ ರೂ, ರತ್ನಾಕರರಿಂದ 14 ಲಕ್ಷ, ದಿನೇಶ್ರಿಂದ 16 ಲಕ್ಷ, ಪದ್ಮನಾಭರಿಂದ 7.25 ಲಕ್ಷ, ವಿಘ್ನೇಶರಿಂದ 2 ಲಕ್ಷ, ಸುದೀಪ್ರಿಂದ 7 ಲಕ್ಷ, ಮಂಜುನಾಥ್ರಿಂದ 3 ಲಕ್ಷ, ಅಭಿಷೇಕ್ರಿಂದ 2 ಲಕ್ಷ, ಸೌರಭ್ ಹಾಗೂ ಸ್ವಸ್ತಿಕ್ರಿಂದ ತಲಾ 2 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ.

ಹಣ ಪಡೆದ ಬಳಿಕ ಆರೋಪಿ ಕೆಲಸಕ್ಕೆ ನೇಮಕಾತಿ ನೋಟಿಫಿಕೇಶನ್ ಹಾಗೂ ಲಿಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟೆಡ್ ಎಂಬ ಜೆರಾಕ್ಸ್ ಪ್ರತಿಗಳನ್ನು 2023ರ ಆಗಸ್ಟ್ 20ರಂದು ನೀಡಿದ್ದ. ಆದರೆ ಆನ್ಲೈನ್ನಲ್ಲಿ ಬಂದ ನೇಮಕಾತಿಯ ನಿಜವಾದ ಪಟ್ಟಿ ನೋಡಿದಾಗ ಅದರಲ್ಲಿ ನಮ್ಮ ಯಾರ ಹೆಸರೂ ಇರಲಿಲ್ಲ. ದಯಾನಂದನನ್ನು ಈ ಬಗ್ಗೆ ವಿಚಾರಿಸಿದಾಗ ಹೈಕೋರ್ಟ್ ನಿಂದ ಬೇರೆಯೇ ಲಿಸ್ಟ್ ಬರುವುದಾಗಿ ನಂಬಿಸಿ ಕ್ಯಾಂಡಿಡೇಟ್ ಪ್ಲೇಸ್ಮೆಂಟ್ ಲಿಸ್ಟ್ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ತಮಗೆ ವಂಚನೆ ಮಾಡಿರುವುದನ್ನು ತಿಳಿದು ಹಣ ವಾಪಾಸು ನೀಡಲು ಕೇಳಿದಾಗ ತ್ರಾಸಿ ಗ್ರಾಮದ ಜಾಗದ ಜಿಪಿಎ ಪತ್ರವನ್ನು ನೀಡಿದ್ದು, ಅಲ್ಲೂ ಜಾಗ ವರ್ಗಾಯಿಸದೇ ವಂಚಿಸಿದ್ದ. ಒಟ್ಟಾರೆ ಉದ್ಯೋಗ ಕೊಡಿಸುವ ನೆಪದಲ್ಲಿ 70.25 ಲಕ್ಷ ರೂ.ಹಣ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love