ಗಂಗೊಳ್ಳಿ ಬಂದರು ಆಧುನೀಕರಣಕ್ಕೆ 22 ಕೋಟಿ ರೂ. ಮಂಜೂರು – ಸಚಿವ ಮಂಕಾಳ್ ವೈದ್ಯ

Spread the love

ಗಂಗೊಳ್ಳಿ ಬಂದರು ಆಧುನೀಕರಣಕ್ಕೆ 22 ಕೋಟಿ ರೂ. ಮಂಜೂರು – ಸಚಿವ ಮಂಕಾಳ್ ವೈದ್ಯ

ಕುಂದಾಪುರ: ಮೀನುಗಾರರು ಬೋಟು, ಬಲೆಗಳನ್ನು ಕಳೆದುಕೊಂಡರೆ ಅವರಿಗೆ ತಮ್ಮ ಮನೆ ಕಳೆದುಕೊಂಡಂತೆ. ಜೀವನಾಧಾರವಾಗಿದ್ದ ಬೋಟುಗಳು ಆಕಸ್ಮಿಕ ಆಗ್ನಿ ದುರಂತದಲ್ಲಿ ನಾಶವಾದಾಗ ಮೀನುಗಾರರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಪರಿಹಾರ ಒದಗಿಸುವಾಗ ಎದುರಾಗುವ ಅಡೆತಡೆಗಳನ್ನು ನಿಭಾಯಿಸಿ ಸ್ವಲ್ಪ ವಿಳಂಬವಾದರೂ ಗರಿಷ್ಠ ಪ್ರಮಾಣದ ಪರಿಹಾರ ಕೊಡಿಸಿದ ತೃಪ್ತಿ ನನಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು.

 

ಭಾನುವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಇಲಾಖೆಯ ವತಿಯಿಂದ ಸಂತ್ರಸ್ತ ಮೀನುಗಾರರಿಗೆ ಪರಿಹಾರ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ಮೀನುಗಾರಿಕೆ ನಡೆಸುವ ವೇಳೆ ಬೋಟ್ ದುರಂತ ಅಥವಾ ಬೇರ್ಯಾವುದೇ ಅವಘಢ ಸಂಭವಿಸಿದ ವೇಳೆ ಸಂತ್ರಸ್ತ ಮೀನುಗಾರರಿಗೆ 1 ಲಕ್ಷ ರೂ. ನಿಂದ ಗರಿಷ್ಠ 10 ಲಕ್ಷ ರೂ.ವರೆಗೆ 24 ಗಂಟೆಯೊಳಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೀನುಗಾರರಿಗೆ ತತ್ಕ್ಷಣ ಪರಿಹಾರ ಸಿಕ್ಕರೆ ಸಂಕಷ್ಟದಲ್ಲಿ ಅನುಕೂಲವಾಗಲಿದೆ. ಈ ಬಗ್ಗೆ ಇಲಾಖೆಯಿಂದ ಯಾವುದೇ ರೀತಿಯ ವಿಳಂಬ ಆಗದಂತೆ ಕ್ರಮ ವಹಿಸಲಾಗುವುದು. ಹಿಂದೆ ಜಯಪ್ರಕಾಶ್ ಹೆಗ್ಡೆಯವರು ಈ ಸಂಕಷ್ಟ ಪರಿಹಾರ ಆರಂಭಿಸಿದ್ದು, ಪ್ರಮೋದ್ ಮಧ್ವರಾಜ್ ಅದನ್ನು 6 ಲಕ್ಷ ರೂ.ಗೆ ಹೆಚ್ಚಿಸಿದರು. ಈಗ ನಾವು ಅದನ್ನು 8 ಲಕ್ಷ ರೂ. ನಿಂದ ಗರಿಷ್ಠ 10 ಲಕ್ಷ ರೂ. ನೀಡಲು ಕ್ರಮಕೈಗೊಂಡಿದ್ದೇವೆ. ಬೋಟ್ ದುರಂತ ಆದಾಗ ಬೋಟ್ ಶೇ.50 ರಷ್ಟು ಪರಿಹಾರ ನೀಡಲಾಗುವುದು. ಕಳೆದ 4 ವರ್ಷದಿಂದ ಹಿಂದಿನ ಸರಕಾರ ಒಂದು ರೂ. ಸಹ ಸಂಕಷ್ಟ ಪರಿಹಾರ ಹಣವನ್ನು ನೀಡಿಲ್ಲ. ನಾವು ಬಂದ ಬಳಿಕ ಈವರೆಗೆ 9 ಕೋ.ರೂ.ವರೆಗೆ ಪರಿಹಾರ ಹಣವನ್ನು ಸಂತ್ರಸ್ತ ಮೀನುಗಾರರಿಗೆ ವಿತರಿಸಿದ್ದೇವೆ. ಗಂಗೊಳ್ಳಿ ಬಂದರು ಆಧುನೀಕರಣಕ್ಕೆ 22 ಕೋಟಿ. ರೂ. ಮಂಜೂರಾಗಿದ್ದು, ಇದರ ಬಗ್ಗೆ ಟೆಂಡರ್ ಕರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರಿಂದ ಗಂಗೊಳ್ಳಿ ಭಾಗದ ಮೀನುಗಾರರಿಗೆ ಅನುಕೂಲವಾದರೆ ನಮಗೆ ನೆಮ್ಮದಿ ಎಂದರು.

ಮೀನುಗಾರ ಮುಖಂಡರ ಸಮಿತಿಯ ಸಭೆ ಕರೆಯದೆ ಎರಡು ವರ್ಷಗಳಾಯಿತು. ನಾನು ಈ ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಸಭೆಗಳನ್ನು ನಡೆಸಿ ಮೀನುಗಾರಿಕೆಗೆ ಪೂರಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಕೆಲಸಗಳಾಗುತ್ತಿವೆ. ನಮ್ಮ ಉದ್ದೇಶ ಇಷ್ಟೇ ಮೀನುಗಾರರು ಎಂದಿಗೂ ಬೇರೆಯವರ ಎದುರು ಕೈಚಾಚಬಾರದು. ಕಷ್ಟದಲ್ಲಿದ್ದಾಗ ನಾವು ಸಹಾಯಕ್ಕೆ ನಿಲ್ಲುತ್ತೇವೆ. ನಾವು ನಮ್ಮ ಸರ್ಕಾರ ಸದಾ ಮೀನುಗಾರರೊಂದಿಗಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮೀನುಗಾರರಿಗೆ ಗರಿಷ್ಠ ಮೊತ್ತದ ಪರಿಹಾರ ನೀಡುವಲ್ಲಿ ಸಚಿವರ ಶ್ರಮ ಶ್ಲಾಘನೀಯ. ಸಚಿವರು ಕೇಂದ್ರ ಕೊಟ್ಟಿಲ್ಲವೆಂದು ಹೇಳುವ ಜತೆಗೆ ಕೇಂದ್ರದಿಂದ ಕೊಟ್ಟಿರುವುದನ್ನು ಸಹ ಹೇಳಿದ್ದರೆ ಖುಷಿ ಪಡುತ್ತಿದ್ದೆ ಎಂದರು.

ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಮೀನುಗಾರರ ಸಂಕಷ್ಟಗಳನ್ನು ಅರಿತಿರುವ ಸಚಿವರು ಮೀನುಗಾರಿಕಾ ವಲಯದ ಸುಧಾರಣೆಗೆ ಮಾಸ್ಟರ್ ಪ್ಲಾನ್ ಮೂಲಕ ಪ್ರಯತ್ನಿಸಬೇಕಿದೆ. ಹಳೆಯದಾದ ಗಂಗೊಳ್ಳಿ ಬಂದರಿನ ಅಭಿವೃದ್ಧಿಗೂ ಒತ್ತು ನೀಡಬೇಕು ಎಂದರು.

ಮಂಕಾಳ್ ವರ್ಸಸ್ ಯಶ್ಪಾಲ್:
ಮೀನುಗಾರರ ಪರವಾದ ಸರ್ಕಾರದ ನಾನಾ ಯೋಜನೆಗಳ ಕುರಿತು ಸಚಿವರು ಮಾಹಿತಿ ನೀಡುತ್ತಿರುವ ವೇಳೆ, ನಾನು ಇಲೆಕ್ಷನ್ ಬಂತೆಂದು ಏನೇನೊ ಮಾತನಾಡಲ್ಲ, ಅದು ಬೇರೆಯವರು ಮಾತ್ರ ಎಂದು ಮಾರ್ಮಿಕವಾಗಿ ನುಡಿದರು. ಈ ವೇಳೆ ಸಭೆಯಲ್ಲಿ ಕೂತ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ ರಿಸಲ್ಟ್ನಲ್ಲಿ ತೋರಿಸ್ತೀವಿ ಎಂದು ನಗು-ನಗುತ್ತಾ ಪ್ರತಿಕ್ರಿಯಿಸಿದಾಗ ಸಚಿವ ಮಂಕಾಳ್ ವೈದ್ಯ, “ಇವರದು ಅಹಂಕಾರದ ಮಾತು. ನಿಮ್ಮ ಮೇಲೆ ನಂಬಿಕೆಯೋ ಅಥವಾ ಅಸಹಂಕಾರವೋ ನನಗೆ ತಿಳಿಯುತ್ತಿಲ್ಲ. ನಿಮ್ಮ ಸಮಸ್ಯೆಗಳನ್ನು ಸರಿಪಡಿಸುವವರು ನಾವು. ಆದರೆ ಮೀನುಗಾರರು ನಮ್ಮೊಂದಿಗಿದ್ದಾರೆ ಎಂದು ಅವರು ವಿಶ್ವಾಸದಿಂದ ಮಾತನಾಡುತ್ತಾರೆ. ನಿಮಗೆ ಸೀಮೆ ಎಣ್ಣೆ ಕೊಟ್ಟಿಲ್ಲ. ಬೋಟಿಗೆ ಸಬ್ಸಿಡಿ ಕೊಡುತ್ತಿರುವುದನ್ನೂ ಕೈಬಿಟ್ಟಿದ್ದಾರೆ. ಅವರೇನೇ ಕೊಡದಿದ್ದರೂ ನೀವು ಅವರ ಜೊತೆಗಿರುತ್ತೀರಿ ಎನ್ನುವ ಅಹಂಕಾರದಲ್ಲಿದ್ದಾರೆ. ಆದರೆ ನಮಗೆ ವಿಶ್ವಾಸವಿದೆ. ನಾವೇನಾದರೂ ಕೊಟ್ಟಿಲ್ಲ ಎಂದರೆ ನೀವು ಮತ್ತೆ ಬಡವರಾಗುತ್ತೀರಿ. ನಿಮಗೆ ಸಹಾಯ ಮಾಡಿ ಮೇಲೆತ್ತುವುದು ನಮ್ಮ ಉದ್ದೇಶ” ಎಂದು ಶಾಸಕ ಯಶ್ಪಾಲ್ಗೆ ಸಚಿವರು ಟಾಂಗ್ ನೀಡಿದರು.

ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ಎಸ್. ಮದನ್ ಕುಮಾರ್, ಮೀನುಗಾರಿಕಾ ನಿರ್ದೇಶಕ ಹರೀಶ್ ಕುಮಾರ್, ಎಡಿಸಿ ಮಮತಾದೇವಿ, ಇಲಾಖಾ ಅಧಿಕಾರಿಗಳಾದ ಗಣೇಶ್ ಕೆ., ಅಂಜನಾದೇವಿ ಟಿ., ಸಂಜೀವ ಅರಕೆರಿ, ಸುಮಲತಾ, ಮೀನುಗಾರ ಮುಖಂಡರಾದ ಜನಾರ್ದನ ಖಾರ್ವಿ, ಪ್ರಭಾಕರ ಕುಂದರ್, ಸದಾಶಿವ ಖಾರ್ವಿ, ಯಶವಂತ ಖಾರ್ವಿ, ಬಸವ ಖಾರ್ವಿ, ವೆಂಕಟರಮಣ ಖಾರ್ವಿ, ಆನಂದ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.

ಮ್ಯಾಂಗನೀಸ್ ವಾರ್ಫ್ನಲ್ಲಿ ಕಳೆದ ನವೆಂಬರ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್ಗಳಿಗೆ 10 ಲಕ್ಷ ರೂ., 1 ಬೋಟ್ಗೆ 5 ಲಕ್ಷ ರೂ., 1 ದೋಣಿಗೆ 2 ಲಕ್ಷ ರೂ., 2 ಡಿಂಗಿಗೆ 5 ಲಕ್ಷ ರೂ., ಸಂಪೂರ್ಣ ಬಲೆ ಹಾನಿಯಾದ 4 ಮಂದಿಗೆ 10 ಲಕ್ಷ ರೂ., 4 ದೋಣಿಗಳ ಬಲೆಗೆ 2 ಲಕ್ಷ ರೂ., 2022ರಲ್ಲಿ ಶಿರೂರಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ 32 ಮೀನುಗಾರರಿಗೆ ತಲಾ 10 ಲಕ್ಷ ರೂ. ಸಹಿತ ಒಟ್ಟು 1.71 ಕೋ.ರೂ. ಪರಿಹಾರ ವಿತರಿಸಲಾಯಿತು. ಇದೇ ವೇಳೆ ಪ. ಜಾತಿ- ಪಂಗಡದ ಮೀನುಗಾರರಿಗೆ ಸಲಕರಣೆ ಕಿಟ್, 84 ನಾಡದೋಣಿ ಮೀನುಗಾರರಿಗೆ ಜೀವ ರಕ್ಷಕ ಸಾಮಗ್ರಿಗಳನ್ನು ನೀಡಲಾಯಿತು.

ಮೀನುಗಾರಿಕಾ ಅಪರ ನಿರ್ದೇಶಕ ಹರೀಶ ಕುಮಾರ್ ಸ್ವಾಗತಿಸಿ, ಜಂಟಿ ನಿರ್ದೇಶಕ ವಿವೇಕ್ ಆರ್. ವಂದಿಸಿದರು. ರಮೇಶ್ ಕುಂದರ್ ಅಭಿನಂದನಾ ಪತ್ರ ವಾಚಿಸಿದರು. ಜಿ. ಸುಂದರ ಕಾರ್ಯಕ್ರಮ ನಿರೂಪಿಸಿದರು.


Spread the love