ಗಿರಿಗಿಟ್ ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆ:  ವಕೀಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ -ಇಬ್ಬರ ಬಂಧನ

ಗಿರಿಗಿಟ್ ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆ:  ವಕೀಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ -ಇಬ್ಬರ ಬಂಧನ

ಮಂಗಳೂರು: ‘ಗಿರಿಗಿಟ್’ ತುಳು ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆ ತಂದ ವಕೀಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂದರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಉರ್ವ ನಿವಾಸಿ ಭಾಸ್ಕರ (50) ಮತ್ತು ಸುರತ್ಕಲ್ ಕೃಷ್ಣಾಪುರ ನಿವಾಸಿ ರಿತೇಶ್ (32) ಬಂಧಿತರು.

ಈ ಪ್ರಕರಣ ಕುರಿತಂತೆ ಪೊಲೀಸರು ಶನಿವಾರ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇನ್ನೂ ಕೆಲವು ಮಂದಿ ಆರೋಪಿಗಳಿದ್ದು, ಅವರನ್ನು ಕೂಡ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಡೆಯಾಜ್ಞೆ ತಂದ ವಕೀಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಆರೋಪದ ಮೇಲೆ ಒಟ್ಟು ಎರಡು ಪ್ರತ್ಯೇಕ ಪ್ರಕರಣಗಳು ಬಂದರು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಗಿರಿಗಿಟ್ ಚಿತ್ರದ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ನ್ಯಾಯವಾದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಮದ ಅವಹೇಳನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ಎರಡು ಖಾತೆಗಳನ್ನು ಸ್ತಂಬನ ಮಾಡಲಾಗಿದ್ದು, ಇನ್ನಷ್ಟು ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡು ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನ ಬಂದರು ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ವಕೀಲರ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ. ಈಗಾಗಲೇ ಫೇಸ್‌ಬುಕ್‌ನ ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಟ್ರೋಲ್ ಮರ್ಲೆರ್ ಮತ್ತು ಟ್ರೋಲ್ ನಂಜೆಲೆ ಎಂಬ ಎರಡು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನಷ್ಟು ಖಾತೆಗಳ ವಿವರವನ್ನು ಕೋರಲಾಗಿದೆ. ಕೆಲವು ಖಾತೆಗಳ ವಿವರ ಈಗಾಗಲೇ ಪೊಲೀಸ್ ಇಲಾಖೆಯ ಕೈ ಸೇರಿದೆ. ವೈಯಕ್ತಿಕವಾಗಿ ಕೆಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.  ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಎಸಿಪಿ ಭಾಸ್ಕರ್ ಭರವಸೆ ನೀಡಿದ್ದಾರೆ.