ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರು ಪಾಲು

Spread the love

ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರು ಪಾಲು

ಉಪ್ಪಿನಂಗಡಿ: ಗೆಳೆಯನ ಹುಟ್ಟುಹಬ್ಬ ಆಚರಿಸಲು ನೇತ್ರಾವತಿ ನದಿಯ ಬದಿಗೆ ತೆರಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ವರದಿಯಾಗಿದೆ.

34ನೇ ನೆಕ್ಕಿಲಾಡಿ ಆದರ್ಶ ನಗರ ನಿವಾಸಿ ಫಿರ್ಝಾನ್, ಪೆರ್ನೆ ಬಿಳಿಯೂರು ನಿವಾಸಿ ಮುಹಮ್ಮದ್ ಶಹೀರ್, ನೆಲ್ಯಾಡಿ ನಿವಾಸಿ ಮುಹಮ್ಮದ್ ಸುಹೈಲ್ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಇವರು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿದ್ದು, ಫಿರ್ಝಾನ್ ನ ಹುಟ್ಟುಹಬ್ಬ ಪಾರ್ಟಿ ಆಚರಿಸಲು ಕಾಲೇಜಿನ ಸನಿಹದಲ್ಲಿರುವ ನೇತ್ರಾವತಿ ನದಿಗೆ ಸೋಮವಾರ ಸಂಜೆ ತೆರಳಿದ್ದರು ಎನ್ನಲಾಗಿದೆ. ಆದರೆ ಇವರು ತೆರಳಿದ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ. ಇವರೊಂದಿಗೆ ತೆರಳಿದ ಇತರ ಸಹಪಾಠಿಗಳು ಈ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎನ್ನಲಾಗಿದೆ.
ಸಂಜೆ ಮೂವರು ವಿದ್ಯಾರ್ಥಿಗಳು ಮನೆಗೆ ಬಾರದಿದ್ದಾಗ ವಿದ್ಯಾರ್ಥಿಗಳ ಬಗ್ಗೆ ಪೋಷಕರು ವಿಚಾರಿಸಿದ್ದು, ಆಗಲೂ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಿರಲಿಲ್ಲ. ಅವರು ನಾಪತ್ತೆಯಾಗಿರುವ ಬಗ್ಗೆ ಮನೆಯವರು ಮತ್ತಷ್ಟು ವಿಚಾರಿಸಿದಾಗ ಅವರು ನದಿ ಬದಿ ಕೇಕ್ ಹಿಡಿದುಕೊಂಡು ತೆರಳಿದ ವಿಚಾರ ವಿದ್ಯಾರ್ಥಿಯೋರ್ವ ಬಾಯ್ಬಿಟ್ಟ ಎನ್ನಲಾಗಿದೆ. ಮತ್ತೆ ಮನೆಯವರು ಮಧ್ಯರಾತ್ರಿ ನದಿಯತ್ತ ತೆರಳಿ ಇವರಿಗಾಗಿ ಹುಡುಕಾಟ ನಡೆಸಿದಾಗ ನದಿಯ ಸನ್ಯಾಸಿ ಕಯದಲ್ಲಿ ವಿದ್ಯಾರ್ಥಿಯೋರ್ವನ ಮೃತದೇಹ ರಾತ್ರಿ ಒಂದರ ಸುಮಾರಿಗೆ ಪತ್ತೆಯಾಗಿದೆ. ಅದೇ ಜಾಗದಲ್ಲಿ ಮತ್ತಿಬ್ಬರ ಮೃತದೇಹವೂ ಪತ್ತೆಯಾಗಿವೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love