ಗೌರವ ಸ್ವೀಕರಿಸುವುದು ಸುಲಭ, ಉಳಿಸಿಕೊಳ್ಳುವುದು ಕಷ್ಟ – ಜನಾರ್ದನ್ ಕೊಡವೂರು

Spread the love

ಗೌರವ ಸ್ವೀಕರಿಸುವುದು ಸುಲಭ, ಉಳಿಸಿಕೊಳ್ಳುವುದು ಕಷ್ಟ – ಜನಾರ್ದನ್ ಕೊಡವೂರು

ಉಡುಪಿ: ಗೌರವ ಸ್ವೀಕರಿಸುವುದು ಸುಲಭ, ಉಳಿಸಿಕೊಳ್ಳುವುದು ಕಷ್ಟ, ಸಮಾಜದಲ್ಲಿ ಗುರುತಿಸುವಿಕೆ ಜಾಸ್ತಿಯಾದಂತೆ ಜವಾಬ್ದಾರಿಗಳು ಜಾಸ್ತಿಯಾಗುವುದು ಎಂದು ಸ್ಪಂದನಾ ಸೇವಾ ಸಂಸ್ಥೆಯ ವತಿಯಿಂದ ಕೊಡಮಾಡಲ್ಪಟ್ಟ “ಯಶೋ ಮಾಧ್ಯಮ-2018” ಪುರಸ್ಕಾರವನ್ನು ಪಡೆದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಪತ್ರಿಕಾ ಛಾಯಾಗ್ರಾಹಕರಾದ ಜನಾರ್ದನ್ ಕೊಡವೂರು ಅಭಿಪ್ರಾಯ ಪಟ್ಟರು.

ಅವರು ಶನಿವಾರ ಉಡುಪಿಯ ಕಲ್ಯಾಣಪುರದ ವೆಂಕಟರಮಣ ದೇವಾಲಯ ಆವರಣದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ “ಯಶೋ ಮಾಧ್ಯಮ-2018” ಪ್ರಶಸ್ತಿ ಪಡೆದು ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಉಡುಪಿಯ ಶಾಸಕ ಕೆ.ರಘುಪತಿ ಭಟ್ ಮಾತನಾಡುತ್ತಾ ಪರವೂರಿನಲ್ಲಿ ಉದ್ಯೋಗದಲ್ಲಿದ್ದು ತಮ್ಮ ಬಾಲ್ಯವನ್ನು ಕಳೆದ ಊರು ಹಾಗು ಕಲಿತ ಶಾಲೆಗಳಿಗೆ ದೇಣಿಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಕೆಲಸ. ಈ ಬಾರಿ ಅರ್ಹ ವ್ಯಕ್ತಿಯನ್ನು ಆರಿಸಿ ಪ್ರಶಸ್ತಿ ನೀಡಿರುವ ಸ್ಪಂದನಾ ಸಂಸ್ಥೆ ಅಭಿನಂದನೀಯ ಎಂದರು. ಈ ಕಾರ್ಯಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್ ಇವರಿಗೆ ಪ್ರಜಾಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಪೂರ್ಣಿಮಾ ಜನಾರ್ದನ್, ಪ್ರಕಾಶ್ ಕಾಮತ್, ಇಂದುಮತಿ ಮಲ್ಯ, ಸುಕುಮಾರ್ ವೈದ್ಯ, ಸುನಂದ, ಗಣೇಶ್ ನಾಯಕ್, ಸಂತೋಷ್ ಕಾಮತ್ ಉಪಸ್ಥಿತರಿದ್ದರು. ಸ್ಪಂದನಾ ಸಂಸ್ಥೆ ಪ್ರವರ್ತಕ ವೆಂಕಟೇಶ್ ಪೈ. ಸ್ವಾಗತಿಸಿದರು.


Spread the love