ಚಿಂತಕ ಡಾ.ಬಿ.ಎಂ.ಹೆಗ್ಡೆ ಅವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

Spread the love

ಚಿಂತಕ ಡಾ.ಬಿ.ಎಂ.ಹೆಗ್ಡೆ ಅವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಕೋಟ: ಕಾರಂತರು ಅದ್ಬುತ ವ್ಯಕ್ತಿ ಮತ್ತು ಶಕ್ತಿಯಾಗಿದ್ದರು. ಲೋಕ ನಡೆಯುವುದೂ ಸಹ ಶಕ್ತಿಯಿಂದ. ನಾವೆಲ್ಲ ಒಂದೇ ಎನ್ನುವ ಭಾವನೆ ಇದ್ದಲ್ಲಿ ಮಾತ್ರ ಸಮಾಜ ಹಾಗೂ ಲೋಕದಲ್ಲಿ ಬದಲಾವಣೆ ತರಲು ಸಾಧ್ಯ. ಹಳೆಯ ಕಾಲದ ವಿಜ್ಞಾನ ಇಂದು ಹೋಗಿ ಪಾಶ್ಚಾತ್ಯ ವಿಜ್ಞಾನ ಬಂದಿರುವುದರಿಂದ ಹೆತ್ತವರನ್ನೇ ದೂರ ಮಾಡಿ ಅಪಾರ್ಟ್‍ಮೆಂಟ್ ನಲ್ಲಿ ಬಾಳಿ ಬದುಕುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಇದನ್ನು ಬಿಟ್ಟು ಜೀವನದಲ್ಲಿ ಧ್ಯೇಯವನ್ನು ಬೆಳೆಸಿಕೊಂಡು ಪರೋಪಕಾರಿಯಾಗಿ ಜೀವನ ನಡೆಸಿದಲ್ಲಿ ಉತ್ತಮ ಎಂದು ಬರಹಗಾರ ಹಾಗೂ ಚಿಂತಕ ಡಾ.ಬಿ.ಎಂ.ಹೆಗ್ಡೆ ಹೇಳಿದರು.

ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ಸೋಮವಾರ ಕೋಟತಟ್ಟು ಗ್ರಾಮ ಪಂಚಾಯಿತಿಯ ಸಾರಥ್ಯದಲ್ಲಿ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಕಾರಂತರ ಹುಟ್ಟೂರಿನಲ್ಲಿರುವ ಅಭಿಮಾನಿಗಳು ಕಾರಂತರನ್ನು ಇಂದಿಗೂ ಜೀವಂತವಾಗಿರಿಸಿದ್ದು ಶ್ಲಾಘನೀಯ ಎಂದರು.

karantha-huttura-award-dr-bm-hegde

ಕಾರ್ಯಕ್ರಮವನ್ನು ಜಿ.ಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಾರ್ ಕಾರ್ತಿಕ್ ಆಚಾರ್ ಎಲ್ಲರಂತಲ್ಲ ನನ್ನ ಕಾರಂತ ವಿಷಯದ ಬಗ್ಗೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಂದಾಪುರ ನ್ಯಾಯವಾದಿ ಹಾಗೂ ಸಾಹಿತಿ ಎ.ಎಸ್.ಎನ್.ಹೆಬ್ಬಾರ್, ಆಯ್ಕೆ ಸಮಿತಿಯ ಯು.ಎಸ್.ಶೆಣೈ, ತಾಲ್ಲೂಕು ಪಂಚಾಯಿತಿ ಸದಸ್ಯೆಯರಾದ ಜ್ಯೋತಿ ಕುಂದರ್, ಲಲಿತಾ ಉಪಸ್ಥಿತರಿದ್ದರು.

ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ್ ಹಂದೆ ಯಕ್ಷಗಾನ ಶೈಲಿಯಲ್ಲಿ ಡಾ.ಬಿ.ಎಂ.ಹೆಗ್ಡೆ ಅವರ ಬಗ್ಗೆ ಯಕ್ಷಗಾನ ಶೈಲಿಯಲ್ಲಿ ಪರಿಚಯ ನೀಡಿದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಂದಿಸಿದರು. ಅಧ್ಯಾಪಕ ನರೇಂದ್ರ ಕುಮಾರ್ ಕೋಟ ಉಪಕಾರ ಸ್ಮರಣೆ ಮಾಡಿದರು. ಪಂಚಾಯಿತಿ ಪಿ.ಡಿ.ಓ ಪಾರ್ವತಿ ವಂದಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಮತ್ತು ಉಷಾ ಕಾರ್ಯಕ್ರಮ ನಿರೂಪಿಸಿದರು.


Spread the love