ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ,  ರಾತ್ರೋರಾತ್ರಿ ಮನೆಗಳಿಗೆ ಬೆಂಕಿ…

Spread the love

ಮುಳಬಾಗಲು: ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರು, ಶಂಕಿತ ಕೆಲ ಸದಸ್ಯರ ಮನೆಗಳ ಮೇಲೆ ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗುರುವಾರ ಮುಳಬಾಗಲಿನ ಬಲ್ಲ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಐದು ಮನೆಗಳು ಭಸ್ಮವಾಗಿದ್ದು, 2 ಟ್ರಾಕ್ಟರ್, 1 ಆಟೋವನ್ನು ಜಖಂಗೊಳಿಸಲಾಗಿದೆ.

ಗುರುವಾರ ರಾತ್ರಿ ಬಲ್ಲ ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಫೋನ್​ನಲ್ಲಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್ನಲಾದ ಸುಬ್ರಹ್ಮಣಿ ಎನ್ನುವವರನ್ನು ದುಷ್ಕರ್ವಿುಗಳು ಕೊಲೆಗೈದು ಪರಾರಿಯಾಗಿದ್ದಾರೆ. ಕೊಲೆಯಾದ ವಿಚಾರ ಸುಬ್ರಹ್ಮಣಿ ಬೆಂಬಲಿಗರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ. ಇದಾಗಿ ಕೆಲ ಹೊತ್ತಿನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್ನಲಾದ ವ್ಯಕ್ತಿಯ ಬೆಂಬಲಿಗರ ಮನೆಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಇದೀಗ ಗ್ರಾಮದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಘಟನಾ ಸ್ಥಳಕ್ಕೆ ಡಿಐಜಿ ಜೆ. ಅರುಣ್ ಚಕ್ರವರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಗೈದ ದುಷ್ಕರ್ವಿುಗಳು ಯಾರೆನ್ನುವುದು? ಕೊಲೆಗೆ ಕಾರಣ ಏನೆನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.


Spread the love