ಜಗತ್ತಿನಲ್ಲಿ ಪ್ರೀತಿ ಬಾಂಧವ್ಯ ಬೆಸೆಯಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್

Spread the love

ಜಗತ್ತಿನಲ್ಲಿ ಪ್ರೀತಿ ಬಾಂಧವ್ಯ ಬೆಸೆಯಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್

ಉಡುಪಿ : ಜಗತ್ತಿನಲ್ಲಿ ಮಾನವರ ಮಧ್ಯೆ ಪ್ರೀತಿ ಬಾಂಧವ್ಯ ಇನ್ನಷ್ಟು ಹೆಚ್ಚಾಗಿ ಮೂಡಿಬರಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಕರೆ ನೀಡಿದ್ದಾರೆ.

ಅವರು ಬುಧವಾರ ಉಡುಪಿ ಪೇಜಾವರ ಮಠ ಹಾಗೂ ಕೃಷ್ಣಮಠಕ್ಕೆ ಭೇಟಿ ನೀಡಿ ಮಾತನಾಡಿದರು. ಪರಮಾತ್ಮನು ಜಗತ್ತಿನಲ್ಲಿ ಹಲವು ಜೀವಿಗಳನ್ನು ಸೃಷ್ಠಿಸಿದ್ದಾನೆ. ಈ ಪೈಕಿ ಮಾನವನು ದೇವನ ಅತ್ಯುತ್ತಮ ಸೃಷ್ಟಿಯಾಗಿದ್ದಾನೆ. ಇವರ ಮಧ್ಯೆ ಪ್ರೀತಿ ಪ್ರೇಮದ ಬೆಸುಗೆ ಇಂದಿನ ಅವಶ್ಯವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಹಲವು ನಾಮಗಳಲ್ಲಿ ದೇವನು ಕರೆಯಲ್ಪಡುತ್ತಿದ್ದರೂ, ದೇವ ಸ್ವರೂಪ ಒಂದೇ ಆಗಿದೆ ಎಂದರು.

ಪ್ರಸಿದ್ಧ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲು ಬಹುದಿನಗಳಿಂದ ಯೋಚಿಸುತ್ತಿದ್ದೆ. ಇಂದು ಭೇಟಿ ನೀಡಿರುವುದು ಸಂತೋಷ ತಂದಿದೆ. ಪೇಜಾವರ ಸ್ವಾಮೀಜಿಗಳ ಬಗ್ಗೆ ಕೇಂದ್ರ ಸಚಿವೆ ಉಮಾಭಾರತಿಯವರು ಬಹಳ ತಿಳಿಸಿದ್ದಾರೆ. ಸ್ವಾಮೀಜಿಗಳು ಚೈತನ್ಯದಿಂದ ಓಡಾಡುತ್ತಿರುವುದು ಸಂತಸ ಮೂಡಿಸಿದೆ. ಅವರು ಶತಾಯುಷಿ ತಲುಪವಂತಾಗಲಿ, ಅವರ ಧಾರ್ಮಿಕ ಮತ್ತು ಸಾಮಾಜಿಕ ಕೈಂಕರ್ಯಗಳು ಇನ್ನಷ್ಟು ಮೂಡಿಬರಲಿ ಎಂದು ರಾಷ್ಟ್ರಪತಿಗಳು ಹಾರೈಸಿದರು.

ರಾಮರಾಜ್ಯವು ಆದರ್ಶ ರಾಜ್ಯವಾಗಿದ್ದು, ಪ್ರಜೆಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕು ಮತ್ತು ಆಡಳಿತ ನಡೆಸಬೇಕು ಎಂಬುದಕ್ಕೆ ಮಾದರಿಯಾಗಿದೆ. ಈ ಆದರ್ಶವನ್ನು ಪಾಲಿಸಿದರೆ ಜಗತ್ತು ಸುಖಿಯಾಗಿ ಇರಬಲ್ಲದು ಎಂದು ರಾಷ್ಟ್ರಪತಿಗಳು ಹೇಳಿದರು.

ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರು ಮಾತನಾಡಿ, ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಾಷ್ಟ್ರಪತಿಗಳ ಆಗಮನವು ಸಂತೋಷ ನೀಡಿದೆ ಎಂದರು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು ರಾಷ್ಟ್ರಪತಿಗಳನ್ನು ಸ್ವಾಗತಿಸಿದರು.

ರಾಷ್ಟ್ರಪತಿಗಳ ಧರ್ಮಪತ್ನಿ ಸವಿತಾ ಕೋವಿಂದ್, ಕರ್ನಾಟಕ ರಾಜ್ಯಪಾಲ ವಜೂಬಾಯಿವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರಾ ಮತ್ತಿತರರು ಇದ್ದರು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಎಡಿಜಿಪಿ ಕಮಲಪಂಥ್, ಐಜಿಪಿ ಅರುಣ್ ಚಕ್ರವರ್ತಿ ಮತ್ತಿತರರು ಇದ್ದರು.


Spread the love