ಜನವರಿ 14 ಹಾಗೂ 15 ರಂದು ಬಿಕರ್ನಕಟ್ಟೆ ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ 2026
ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್, ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಪುಣ್ಯಕ್ಷೇತ್ರದ ನಿರ್ದೇಶಕ ಫಾ|ಸ್ಟೀಫನ್ ಪಿರೇರಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿರುವರು. ಅದೇ ದಿನ ಬೆಳಿಗ್ಗೆ 10.00 ಘಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ವಿಶೇಷ ಬಲಿಪೂಜೆಯನ್ನು ನೆರವೇರಿಸುವರು.
ಜನವರಿ 15ರಂದು ಬೆಳಿಗ್ಗೆ 10.00 ಘಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ದುಮಿಂಗ್ ಡಾಯಸ್ ನಡೆಸಿಕೊಡಲಿರುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಅತಿ ವಂದನೀಯ ಮೊನ್ಸಿಂಞೆರ್ ಮ್ಯಾಕ್ಸಿಂ ನೊರೊನ್ಹಾ, ಪ್ರಧಾನ ಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ಇವರು ನೆರವೇರಿಸುವರು.
ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ : ಬೆಳಿಗ್ಗೆ 6.00 (ಕೊಂಕಣಿ), 8.00 (ಇಂಗ್ಲೀಶ್), 1.00 (ಕನ್ನಡ).
ವಾರ್ಷಿಕ ಹಬ್ಬದ ಎರಡನೆಯ ದಿನ: ಜನವರಿ 15 ರಂದು ಬೆಳಿಗ್ಗೆ 6.00, 8.00 ಘಂಟೆಗೆ ಕೊಂಕಣಿಯಲ್ಲಿ, 10.00 ಘಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.
ನವದಿನಗಳ ನವೇನಾ ಪ್ರಾರ್ಥನೆ:
ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯಲಿರುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯುವವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲಿ,್ಲ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.45 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು.
ಧರ್ಮಾಧ್ಯಕ್ಷರ ಪೂಜಾವಿಧಿಗಳು: ಜನವರಿ 5 ಸೋಮವಾರದಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಇಗ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು.
ಜನವರಿ 10, ಶನಿವಾರದಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೆನ್ರಿ ಡಿಸೋಜಾ, ಇವರು ನೆರವೇರಿಸಲಿರುವರು. ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು.
ಪರಮ ಪ್ರಸಾದದ ಆರಾಧನೆ: ಪ್ರತಿ ನವೆನಾ ದಿನಗಳಲ್ಲಿ 11.45 ರಿಂದ 12.30 ಘಂಟೆಯ ವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.
ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ 6.00 ಘಂಟೆಯ ಬಲಿಪೂಜೆಯ ಬಳಿಕ ಸುಮಾರು 7:15 ಕ್ಕೆ ಹಮ್ಮಿಕೊಳ್ಳಲಾಗಿದೆ.
ಹೊರೆಕಾಣಿಕೆ : ಮಹೋತ್ಸವದ ಹೊರೆಕಾಣಿಕೆಯು ಜನವರಿ 3 ರಂದು ಸಂಜೆ 4.30 ಘಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಆರಂಭಗೊಳ್ಳುವುದು. ಹೊರೆಕಾಣಿಕೆಯ ಅಂತಿಮಭಾಗದಲ್ಲಿ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆನಂತರ ವಂ| ಡಾ| ಪ್ರವೀಣ್ ಮಾರ್ಟಿಸ್, ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿಯವರು ಧ್ವಜಾರೋಹಣವನ್ನು ಮಾಡುವರು.
ಅನ್ನಸಂತರ್ಪಣೆ: ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿರುವುದು.
ಕಣ್ಣಿನ ಶಿಬಿರ: ಜನವರಿ 7 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ.
ರಕ್ತದಾನ ಶಿಬಿರ : ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಸಮಾಜಾಭಿವೃದ್ಧಿ ಯೋಜನೆಯ ಅನಾವರಣ: ಕಾರ್ಮೆಲ್ ಸಭೆಯ ಸುಧಾರಕಾರಾದ ಶಿಲುಬೆಯ ಸಂತ ಯೊವಾನ್ನರನ್ನು ಸಂತ ಪದವಿಗೇರಿಸಿ 300 ಸಂವತ್ಸರಗಳು ಹಾಗೂ ಧರ್ಮಸಭೆಯ ಪಂಡಿತ ಎಂದು ನಾಮಕರಣಗೊಳಿಸಿ ಶತಾಬ್ದಿಯನ್ನು ಪೂರೈಸುವ ಜುಬಿಲಿ ವರ್ಷದಲ್ಲಿ ಕಾರ್ಮೆಲ್ ಇಗ್ನೆಟ್ ಎನ್ನುವ ಕಾರ್ಯಕ್ರಮದಡಿ ಬಡ ಹಾಗೂ ಯೋಗ್ಯ 400 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಸ್ತು ಪ್ರದರ್ಶನ: ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಹಾಗೂ ಬೋದನೆಗಳನ್ನು ಆದರಿಸಿ ಒಂದು ವಿಶೇಸ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಗುರುಮಠದ ಮುಖ್ಯಸ್ಥರಾದ ಫಾ|ಮೆಲ್ವಿನ್ ಡಿಕುನ್ಹಾ, ಫಾ|ದೀಪ್ ಫೆರ್ನಾಂಡಿಸ್, ವಲೇರಿಯನ್ ಫುರ್ಟಾಡೊ, ವಿಲ್ಫ್ರೇಡ್ ಲಸ್ರಾದೊ ಉಪಸ್ಥಿತರಿದ್ದರು.













