ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನ ಒದಗಿಸಲು ಕೋರಿಕೆ – ಮಂಜಮ್ಮ ಜೋಗತಿ

Spread the love

ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನ ಒದಗಿಸಲು ಕೋರಿಕೆ – ಮಂಜಮ್ಮ ಜೋಗತಿ

ಉಡುಪಿ: ರಾಜ್ಯದಲ್ಲಿನ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ, ಕರ್ನಾಟಕ ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ ಮಂಜಮ್ಮ ಜೋಗತಿ ತಿಳಿಸಿದ್ದಾರೆ.

ಅವರು ಸೋಮವಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಭಾ ಭವನದಲ್ಲಿ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಸಂಸ್ಕøತಿ ವಿಶ್ವ ಪ್ರತಿಷ್ಠಾನ(ರಿ.), ಉಡುಪಿ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ಇದರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಕಲೆಗಳನ್ನು ಕಲಿಯಲು ಗುರುಗಳನ್ನು ಹುಡುಕಿಕೊಂಡು ಹೋಗಿ, ಅವರಿಗೆ ಗುರುದಕ್ಷಿಣೆ ನೀಡಿ ಕಲಿಯಬೇಕಿತ್ತು ಆದರೆ ಈಗ ಸರ್ಕಾರವೇ ಗುರುಗಳನ್ನು ನೇಮಿಸಿ, ಅವರಿಗೆ ಗುರುದಕ್ಷಿಣೆ ನೀಡಿ, ಕಲಿಯುವ ಶಿಷ್ಯರಿಗೂ ಶಿಷ್ಯ ವೇತನ ನೀಡುತ್ತಿದೆ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಇಂದಿನ ಜನಾಂಗದ್ದಾಗಿದೆ. ಆದ್ದರಿಂದ ರಾಜ್ಯದಲ್ಲಿ ಜಾನಪದ ಕಲೆಗಳನ್ನು ಬೆಳೆಸಲು, ರಾಜ್ಯಾದ್ಯಂತ ವಿವಿಧೆಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದ್ದು, ಇದಕ್ಕಾಗಿ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ, ಬೈಂದೂರಿನ ಮಹಾತ್ಮ ಜ್ಯೋತಿ ಬಾ ಪುಲೆ ಕಲಾ ವೇದಿಕೆ ಅಧ್ಯಕ್ಷ ವೈ. ಲಕ್ಷ್ಮಣ್ ಮಾತನಾಡಿ, ಹಿರಿಯರು ಉಳಿಸಿ ಬೆಳೆಸಿರುವ ವಿವಿಧ ಜಾನಪದ ಪ್ರಕಾರಗಳು ಪ್ರಸ್ತುತ ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ, ಪ್ರತೀ ವ್ಯಕ್ತಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ವ್ಯವಸ್ಥಿತ ತರಬೇತಿ ನೀಡುವ ಮೂಲಕ ಮುಂದಿನ ಜನಾಂಗಕ್ಕೆ ಕಲೆಗಳನ್ನು ತಲುಪಿಸಬೇಕು ಎಂದರು.

ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಕಾಡಿನಲ್ಲಿರುವ ಗಿರಿಜನರು ನಮ್ಮ ನಾಡಿನ ಆಸ್ತಿ. ಇವತ್ತು ಕಾಡುಗಳು ಉಳಿದಿರುವುದಕ್ಕೆ ಗಿರಿಜನರೇ ಕಾರಣ, ಇವರು ಕಾಡು ನಾಶ ಮಾಡುವುದಿಲ್ಲ. ಹಲವಾರು ಜಾನಪದ ಕಲಾಪ್ರಕಾರಗಳನ್ನು ಉಳಿಸಿಕೊಂಡು ಬಂದಿರುವ ಗಿರಿಜನರು ನಮ್ಮ ನಾಡಿನ ಸಂಪತ್ತು. ಜನಪದ ಕಲೆಗಳನ್ನು ಆಸಕ್ತಿಯಿಂದ, ಪ್ರೀತಿಯಿಂದ ನೋಡಿಕೊಳ್ಳದೇ ಹೋದರೆ ನಶಿಸಿ ಹೋಗುತ್ತವೆ. ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು ಕಳೆದ 25 ವರ್ಷಗಳಿಂದ ಹಲವು ಜಾನಪದ ಕಲೆಗಳ ದಾಖಲೀಕರಣಗೊಳಿಸುತ್ತಿದೆ ಎಂದು ಹೇಳಿದರು.

ಗಿರಿಜನ ಉಪಯೋಜನೆಯಡಿಯಲ್ಲಿ, ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಫೆಬ್ರವರಿ 24 ರಿಂದ ಐದು ದಿನಗಳ ಕಾಲ ನಡೆಯುವ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರದಲ್ಲಿ, ಜಾನಪದ ಕಲೆಗಳಾದ ಕೊರಗರ ಡೋಲು, ಸಿದ್ಧಿಢಮಾಮಿ ನೃತ್ಯ, ಮಲ್ಲಕಂಬ, ಕಂಗೀಲು ನೃತ್ಯ, ಡೊಳ್ಳು ಕುಣಿತದ ತರಬೇತಿಯನ್ನು ನೀಡಲಾಗುವುದು.

ಕಾರ್ಯಕ್ರಮದಲ್ಲಿ ಸಂಸ್ಕøತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿಯ ಗೌರವಾಧ್ಯಕ್ಷರಾದ ಯು. ವಿಶ್ವನಾಥ ಶೆಣೈ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ, ಸಂಸ್ಕøತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿಯ ಅಧ್ಯಕ್ಷರಾದ ಪ್ರೊ. ಶಂಕರ್ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್, ಎನ್. ನಮ್ರತಾ ಸ್ವಾಗತಿಸಿದರು, ಸಂಚಾಲಕರಾದ ರವಿರಾಜ್ ಹೆಚ್.ಪಿ ನಿರೂಪಿಸಿ, ವಂದಿಸಿದರು.


Spread the love