ಜಿಲ್ಲಾಧಿಕಾರಿಯವರ ಮರಳು ಅಡ್ಡೆ ಧಾಳಿ; ಪೋಲಿಸರೇ ಮುಂಚಿತವಾಗಿ ಮಾಹಿತಿ ಇತ್ತು?

Spread the love

ಜಿಲ್ಲಾಧಿಕಾರಿಯವರ ಮರಳು ಅಡ್ಡೆ ಧಾಳಿ; ಪೋಲಿಸರೇ ಮುಂಚಿತವಾಗಿ ಮಾಹಿತಿ ಇತ್ತು?

ಉಡುಪಿ: ಜಿಲ್ಲಾಧಿಕಾರಿಯವರು ಭಾನುವಾರ ಮಧ್ಯರಾತ್ರಿ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ವೇಳೆ ಪೋಲಿಸರಿಗೆ ಮಾಹಿತಿ ನೀಡಬೇಕಿತ್ತು ಎಂಬ ಕುರಿತು ವ್ಯಾಪಕ ಚರ್ಚೆಯಾಗುತ್ತಿದ್ದರೆ, ಜಿಲ್ಲಾಧಿಕಾರಿಗಳ ಧಾಳಿ ಮಾಹಿತಿ ಕುಂದಾಪುರ ಪೋಲಿಸರಿಗೆ ತಿಳಿದಿತ್ತು ಎನ್ನುವ ಕುರಿತು ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭಾನುವಾರ ರಾತ್ರಿ ನಡೆಸುವ ದಾಳಿಯ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂಬುದು ನಿಜ. ಸ್ವತಃ ಅವರ ಅಂಗರಕ್ಷಕನಿಗೂ ಈ ಕುರಿತು ಮಾಹಿತಿ ಇರಲಿಲ್ಲ! ಆದರೆ ಅವರು ತಮ್ಮ ಅಂಗರಕ್ಷಕನಿಗೆ ಸಮವಸ್ತ್ರದಲ್ಲಿ ಬರುವಂತೆ ಸೂಚನೆ ನೀಡಿದ್ದರು. ಉಡುಪಿಯಿಂದ ಕುಂದಾಪುರಕ್ಕೆ ಹೊರಟಾಗ ಈ ಕುರಿತು ಗೊತ್ತಾಗಿತ್ತು.

ಉಡುಪಿಯಿಂದ ಕುಂದಾಪುರ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗೆ ಮೊದಲು ಹಳ್ನಾಡು ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಆರು ಮಂದಿಯನ್ನು ಹಿಡಿದು ಕುಂದಾಪುರ ಪೊಲೀಸರಿಗೆ ಒಪ್ಪಿಸಿದ್ದರು. ಕುಂದಾಪುರ ಠಾಣೆಯಿಂದಲೇ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ತಮ್ಮ ಮುಂದಿನ ದಾಳಿಗಾಗಿ ಕಂಡ್ಲೂರು ಕಡವಿಗೆ ತೆರಳಿದ್ದರು. ಹೀಗಿರುವಾಗ ಜಿಲ್ಲಾಧಿಕಾರಿಯವರು ಯಾರಿಗೂ ಮಾಹಿತಿ ನೀಡಿಲ್ಲ ಎನ್ನುವ ವಾದವನ್ನು ಒಪ್ಪಿಕೊಳ್ಳುವಂತಿಲ್ಲ. ಜಿಲ್ಲಾಧಿಕಾರಿಯೊಬ್ಬರು ದಾಳಿ ನಡೆಸಿ ಪೊಲೀಸ್ ಠಾಣೆಗೆ ಬಂದು, ಅಲ್ಲಿಂದ ತಮ್ಮ ಸಿಬ್ಬಂದಿಯವರೊಂದಿಗೆ ಮುಂದಿನ ದಾಳಿಗೆ ಹೋದ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಜಿಲ್ಲಾಧಿಕಾರಿಯವರು ಮಧ್ಯರಾತ್ರಿಯ ವೇಳೆ ಕುಂದಾಪುರ ಠಾಣೆಗೆ ಬಂದು ಅಕ್ರಮ ಮರಳುಗಾರಿಕೆ ಸಂಬಂಧಿಸಿ ಆರು ಮಂದಿಯನ್ನು ಪೋಲಿಸ್ ಇಲಾಖೆಗೆ ಒಪ್ಪಿಸಿ ಹೊರ ನಡೆದಾಗಲೇ ಪೋಲಿಸರು ಎಚ್ಚೆತ್ತುಕೊಳ್ಳಬೇಕಿತ್ತು. ಜಿಲ್ಲಾಧಿಕಾರಿಗಳು ರಾತ್ರಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧಿಸಿ ರಾತ್ರಿ ಗಸ್ತು ನಡೆಸುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವನ್ನು ಪೋಲಿಸರು ಉಪಯೋಗಿಸಬಹುದಿತ್ತು. ಅಲ್ಲದೆ ಜಿಲ್ಲಾಧಿಕಾರಿಗಳು ಠಾಣೆಯಿಂದ ಹೊರನಡೆಯುವಾಗ ಕುಂದಾಪುರ ತಹಶೀಲ್ದಾರ್ ಬೋರ್ಕರ್ ಅವರಿಗೆ ತಾನು ಪುನಃ ಬರುವವರೆಗೆ ಠಾಣೆಯಿಂದ ತೆರಳದಂತೆ ಸೂಚನೆ ಕೂಡ ನೀಡಿದ ಬಗ್ಗೆ ಪೋಲಿಸ್ ಇಲಾಖೆಯ ಅಧಿಕಾರಿಗಳೇ ಮಾಹಿತಿಯನ್ನು ಮಾಧ್ಯಮದ ಕೆಲವರಿಗೆ ನೀಡಿದ್ದಾರೆ. ಅಂದ ಮೇಲೆ ಮಾಹಿತಿ ಇಲ್ಲ ಎನ್ನುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಪೋಲಿಸರು ಕೂಡ ಧಾಳಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಮೊದಲ ದಾಳಿಯನ್ನು ಯಾರಿಗೂ ತಿಳಿಸದೇ ಹೋದರೂ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲಾಧಿಕಾರಿಯವರು ಯೋಜಿಸದಂತೆ ಅವರ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಮಸ್ಯೆಯಾಗಿರುವುದು ಎರಡನೇ ದಾಳಿಯ ಸಂದರ್ಭ. ವಾಸ್ತವದಲ್ಲಿ ಈ ದಾಳಿಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇತ್ತು.

ಘಟನೆಯ ಬಳಿಕ ಘಟನೆಯ ಪೋಸ್ಟ್ ಮಾರ್ಟಮ್ ಮಾಡಲು ಹೊರಟಿರುವ ಇಲಾಖೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಜಿಡಿಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಯವರು ಜಿಲ್ಲಾಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನುವ ಹೇಳಿಕೆಗಳನ್ನೇ ಪದೇ ಪದೇ ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ತೆರೆಮರೆಯಲ್ಲಿ ಪ್ರಭಾವಿಗಳಿಂದ ನಡೆಯುತ್ತಿದ್ದ ಮರಳು ಮಾಫಿಯಾ ಜಿಲ್ಲಾಧಿಕಾರಿ ದಾಳಿಯಿಂದ ಜಾಹೀರಾಗಿರುವುದಕ್ಕೆ ಅವರ ಮೇಲೆ ಈ ರೀತಿಯ ಆರೋಪಗಳನ್ನು ಹೊರಿಸುತ್ತಿದ್ದಾರೆಯೇ ಎನ್ನುವ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ.

ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ವ್ಯಕ್ತಿ ನಿಘೂಡ?

ಈ ನಡುವೆ ಜಿಲ್ಲಾಧಿಕಾರಿಯವರ ಮೇಲೆ ಹಲ್ಲೆ ನಡೆದ ಪ್ರದೇಶವಾದ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುವವರು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಪ್ರಕರಣ ನಡೆದು ಐದು ದಿನಗಳಾದರೂ ಮರಳು ಗಣಿಗಾರಿಕೆ ಯಾರಿಗೆ ಸೇರಿದೆ ಎನ್ನುವುದನ್ನೂ ಪೊಲೀಸರಿಂದ ಸಾಧ್ಯವಾಗಿಲ್ಲವೋ? ಈ ನಡುವೆ ಜಿಲ್ಲಾಡಳಿತಕ್ಕೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ತಡೆಯಾಗುತ್ತಿದೆಯೇ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

ಹಲ್ಲೆ ನಡೆದ ದಿನದಂದೇ ಜಿಲ್ಲಾಧಿಕಾರಿಯವರ ತಂಡ ಹಳ್ನಾಡು ಪ್ರದೇಶದಲ್ಲಿ ದಾಳಿ ನಡೆಸಿ, ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಹಿಡಿದಿದ್ದರು. ಆ ಅಕ್ರಮ ಮರಳುಗಣಿಗಾರಿಕೆ ಯಾರಿಗೆ ಸೇರಿದ್ದು ಎನ್ನುವುದು ಅದೇ ದಿನ ಗೊತ್ತಾಗಿದೆ. ಇಷ್ಟಿದ್ದರೂ ಕಂಡ್ಲೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ಯಾರು ನಡೆಸುತ್ತಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿರುವುದು ಸಹಜವಾಗಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ವಾಸ್ತವದಲ್ಲಿ ಹೀಗೆ ದಾಳಿಗಳು ನಡೆದಾಗ ಒಂದೆರಡು ದಿನಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರು ಯಾರು ಎನ್ನುವ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತದೆ. ಈ ಹಿಂದೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ದಾಳಿಗಳಿಂದ ಇದು ತಿಳಿದಿದೆ. ಆದರೆ ನಿರ್ದಿಷ್ಟವಾಗಿ ಕಂಡ್ಲೂರಿನಲ್ಲಿ ಮರಳು ಅಡ್ಡೆ ಯಾರಿಗೆ ಸೇರಿದೆ ಎನ್ನುವುದನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವನ್ನುಂಟು ಮಾಡಿದೆ.

ಮಾಜಿ ಜಿ.ಪಂ. ಸದಸ್ಯರೊಬ್ಬರು ಕಂಡ್ಲೂರು ಮರಳು ಅಡ್ಡೆಯ ಹಿಂದೆ ಇದ್ದಾರೆ ಎನ್ನುವ ಗುಮಾನಿ ಇದ್ದು, ಕಳೆದ 3-4 ದಿನಗಳ ಬೆಳವಣಿಗೆ ಅದನ್ನು ಪುಷ್ಟೀಕರಿಸುತ್ತಿದೆ.

ಪೊಲೀಸ್ ಇಲಾಖೆ, ಗಣಿ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾಡಳಿತ ಸಹಿತ ಯಾರೂ ಕೂಡ ಆ ಮರಳು ಅಡ್ಡೆ ಯಾರಿಗೆ ಸೇರಿದ್ದು ಎನ್ನುವುದನ್ನು ಹೇಳುತ್ತಿಲ್ಲ. ತನಿಖೆ ನಡೆಯುತ್ತಿದೆ. ಗೊತ್ತಾಗಬೇಕಿದೆ ಎಂದಷ್ಟೇ ಹೇಳುತ್ತಿದ್ದಾರೆ.


Spread the love

1 Comment

  1. ಮರಳು ಪ್ರಕೃತಿದತ್ತ ಸ್ವಾಭಾವಿಕ ಸ೦ಪತ್ತು ಅ೦ದಮೇಲೆ ಅದು ರಾಜ್ಯಸ೦ಪತ್ತು ತಾನೆ… ಹಾಗಾದರೆ ರಾಜ್ಯಸ೦ಪತ್ತಿನಿ೦ದ ಬರುವ ಹಣದಲ್ಲಿ ಸಿ೦ಹಪಾಲು ರಾಜ್ಯಕ್ಕೆ ಸೇರಬೇಕಾಗಿದೆ. ಆದರೆ ಇಲ್ಲಿ ತದ್ವಿರುಧ್ಧ. ಲೂಟಿಯಲ್ಲಿ ಸಿಕ್ಕಿಬಿದ್ದಲ್ಲಿ ಮಾತ್ರ ರಾಜ್ಯಕ್ಕೆ ಸ್ವಲ್ಪ ಕಪ್ಪಕಾಣಿಕೆ, ಸಿ೦ಹಪಾಲು ಲೂಟಿಕೋರರಿಗೆ. ಪೊಲೀಸರಿಗೆ ಮರಳುದ೦ದೆಯ ಬಗ್ಗೆ ಸ೦ಪೂರ್ಣ ಮಾಹಿತಿ ಇದ್ದಿರುತ್ತದೆ. ಇಲ್ಲದಿದ್ದಲ್ಲಿ ಅವರ ಪೊಲೀಸ್ ಇ೦ಟಲಿಜೆನ್ಸ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆ೦ದೇ ಅರ್ಥ. ಅಕಸ್ಮಾತ್ ಈಗತಾನೇ ಮರಳು ಲೂಟಿ ತೊಡಗಿದಲ್ಲಿ ಇದರ ಬಗ್ಗೆ ಅರಿವಿಲ್ಲ ಎ೦ದು ಹೇಳಬಹುದು. ಇಲ್ಲಿ ವರ್ಷಗಳಿ೦ದ ನಡೆಯುವ ದ೦ದೆಯ ಬಗ್ಗೆ ಪೊಲೀಸರಿಗೇ ಅರಿವಿಲ್ಲದಿದ್ದಲ್ಲಿ ಹೇಗೆ? ಜಿಲ್ಲಾಧಿಕಾರಿಗಳು ದಾಳಿಗಿಳಿದ ಮೇಲೆ ಪೊಲೀಸ್ ಅಧಿಕಾರಿಗಳು ತಮ್ಮ ಇಲಾಖೆಯ ರಕ್ಷಣೆಗಾಗಿ ಬಡಬಡಿಸುವುದು ವಾಸ್ತವ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರು ಚಿಲ್ಲರೆ ಕುಳಗಳಾಗಿರುವುದಿಲ್ಲ. ಲೋಡಿಗೆ ಕೆಲವಾರು ಸಾವಿರ ಬೆಲೆಯ ಮರಳನ್ನು ಅಕ್ರಮವಾಗಿ ಮಾರುವವರ ವ್ಯವಹಾರವು ಲಕ್ಷ, ಕೋಟಿಗಳಲ್ಲಿ ಇರುವುದಿಲ್ಲವೇ? ಹೀಗೆ ಲಕ್ಷ, ಕೋಟಿಗಳ ಅಕ್ರಮ ವ್ಯವಹಾರವಿರುವವರಿಗೆ ರಾಜಕೀಯದ ನ೦ಟೂ ಗ್ಯಾರ೦ಟಿ. ಈ ರಾಜಕೀಯದ ನ೦ಟೇ ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರು ಯಾರು ಎ೦ದು ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲದ ದೊಡ್ಡ ಗ೦ಟು…

Comments are closed.