ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರಿಂದ ಜಲಾವೃತ ಪ್ರದೇಶಗಳಿಗೆ ಭೇಟಿ

Spread the love

ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರಿಂದ ಜಲಾವೃತ ಪ್ರದೇಶಗಳಿಗೆ ಭೇಟಿ

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಇಂದು ಬಹ್ಮಾವರದ ಉಪ್ಪೂರು ವ್ಯಾಪ್ತಿಯಲ್ಲಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ್ಪೂರು ವ್ಯಾಪ್ತಿಯ ಕೆ.ಜಿ.ರೋಡ್, ಕುದ್ರುಬೆಟ್ಟು , ಹೆರೆಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ಜಲಾವೃತ ಪ್ರದೇಶದ ನಿವಾಸಿಗಳಿಗೆ ಎಲ್ಲಾ ರೀತಿಯ ಸಹಾಯ ಸಹಾಕಾರವನ್ನು ಜಿಲ್ಲಾಡಳಿತ ಒದಗಿಸಲಿದೆ, ಜನರು ಧೈರ್ಯದಿಂದ ಇರುವಂತೆ ಸಚಿವೆ ಈ ಸಂದರ್ಭದಲ್ಲಿ ಸ್ಥಳೀಯರಿಗೆ ಮನವಿ ಮಾಡಿದರು. ಅವಶ್ಯಕ ಸಂದರ್ಭದಲ್ಲಿ ಜನತೆ ಸ್ಥಳೀಯಾಡಳಿತವನ್ನು ಸಂಪರ್ಕಿಸುವಂತೆ ಹೇಳಿದರು, ಇದೇ ವೇಳೆ ಜಿಲ್ಲಾಡಳಿತ ಕೂಡ ನೆರೆ ಪೀಡಿತ ಪ್ರದೇಶಗಳ ಬಗ್ಗೆ ನಿಗಾ ಇರಿಸಿದೆ ಎಂದು ಸಚಿವೆ ಸ್ಥಳೀಯರಿಗೆ ಧೈರ್ಯತುಂಬಿದರು.

ಶಾಲೆಗೆ ಭೇಟಿ .
ಜಲಾವೃತಗೊಂಡಿರುವ ಉಪ್ಪೂರು ಹೆರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದರು. ಶಾಲೆಯ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಚಿವರು ತಹಶೀಲ್ದಾರು ಅವರಿಗೆ ನಿರ್ದೇಶನ ನೀಡಿದರು. ನೆರೆಪೀಡಿತ ಎಲ್ಲಾ ಪ್ರದೇಶದ ಜನರಿಗೂ ಆಹಾರ ಪೂರೈಕೆಗೆ ತೊಂದರೆಯಾಗದಂತೆ ನಿಗಾವಹಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವಶ್ಯಕ ಸಂದರ್ಭದಲ್ಲಿ ನೆರೆಪೀಡಿತ ಪ್ರದೇಶದ ಜನರನ್ನು ಸ್ಥಳಾಂತರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಶೌಚಾಲಯ ನಿರ್ಮಾಣಕ್ಕೆ ಆದೇಶ 
ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಸಂಪ ಪೂಜಾರಿ ಎಂಬವರ ಮನೆಗೆ ಶೌಚಾಲಯ ಇಲ್ಲದಿರುವುದು ಸಚಿವರ ಗಮನಕ್ಕೆ ಬಂತು, ಈ ಬಗ್ಗೆ ಸಂಪ ಪೂಜಾರಿ ಹಾಗೂ ಅವರ ಪುತ್ರನಲ್ಲಿ ಸ್ವತಾ ಸಚಿವೆ ಅವರೇ ವಿಚಾರಿಸಿ, ನಿಮ್ಮ ಮನೆಗೆ ಶೌಚಾಲಯ. ಇದೆಯೇ ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ತಾನು ಬಡವಿಯಾಗಿದ್ದು, ಶೌಚಗೃಹ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರದಿಂದ ಹೇಳಿಕೊಂಡರು .ಸಂಪ ಪೂಜಾರಿ ಅವರ ನೋವು ಆಲಿಸಿದ ಸಚಿವೆ ಡಾ.ಜಯಮಾಲಾ ಅವರು, ನೆರೆ ನೀರು ಇಳಿದ ತಕ್ಷಣ ಇವರಿಗೆ ಸರಕಾರಿ ಯೋಜನೆಯ ಮೂಲಕ ಶೌಚಾಲಯ ನಿರ್ಮಿಸಿಕೊಡಬೇಕೆಂದು ಸ್ಥಳದಲ್ಲಿಯೇ ತಹಾಶಿಲ್ದಾರ್ ಅವರಿಗೆ ಆದೇಶ. ನೀಡಿದರು. ಶೌಚಾಲಯ ಕಟ್ಟಿಕೊಡಲು ಯಾವುದೇ ರೀತಿಯಲ್ಲಿಯೂ ವಿಳಂಬವಾದಂತೆ ನೋಡಿಕೊಳ್ಳಬೇಕೆಂದು ತಹಾಶಿಲ್ದಾರ್ ಅವರನ್ನು ಮತ್ತೊಮ್ಮೆ ಸಚಿವರು ನೆನಪಿಸಿದರು.

ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಶ್ರೀಮತಿ ಸರಳಾ ಕಾಂಚನ್ , ಶಾಲಿನಿ ಪುರಂದರ್ , ಜಯಶ್ರೀ ಕೃಷ್ಣರಾಜ್ , ಚಂದ್ರಿಕಾಶೆಟ್ಟಿ, , ರಮೇಶ್ ಕುಂದರ್, ರಮೇಶ್ ಕರ್ಕೇರಾ, ಉಪ್ಪೂರು ಪಂಚಾಯತ್ ಅಧ್ಯಕ್ಷೆ ಆರತಿ, ತಹಶಿಲ್ದಾರ್ ಪ್ರದೀಪ್, ಕೃಷಿ ಇಲಾಖೆಯ ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರ್ದೇಶಕಿ ಗ್ರೇಸಿ ಗೊನ್ಸಾಲ್ಬಿಸ್ ಮೊದಲಾದವರು ಭಾಗವಹಿಸಿದ್ದರು.


Spread the love