ಜುಲೈ 13ರಂದು ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ವತಿಯಿಂದ ಕ್ರೈಸ್ತರಿಗಾಗಿ ಜನಸ್ಪಂದನ

Spread the love

ಜುಲೈ 13ರಂದು ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ವತಿಯಿಂದ ಕ್ರೈಸ್ತರಿಗಾಗಿ ಜನಸ್ಪಂದನ

ಉಡುಪಿ: ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕ್ರೈಸ್ತರಿಗೆ ಸಿಗುವ ಸವಲತ್ತುಗಳ ಮಾಹಿತಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲುಗಳ ಸ್ವೀಕಾರ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗಳ ವಿತರಣೆಯ ‘ಜನಸ್ಪಂದನ’ಕಾರ್ಯಕ್ರಮ ಜುಲೈ 13ರಂದು ಶನಿವಾರ ಮಧ್ಯಾನ್ಹ 3ಗಂಟೆಗೆ ಉಡುಪಿ ಬಾಸೆಲ್ ಮಿಷನ್ ಸಭಾಭವನ ಮಿಷನ್ ಕಂಪೌಂಡ್ ಬಳಿಯ ಹುಡುಗರ ವಸತಿ ಶಾಲೆಯ ಸ್ನೇಹಾಲಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಸಹ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದರು.

ಅವರು ಗುರುವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಹಲವಾರು ಸೌಲಭ್ಯಗಳು ಕ್ರೈಸ್ತ ಸಮಾಜ ಬಾಂಧವರಿಗೆ ಇದ್ದು ಅದರ ಸರಿಯಾದ ಮಾಹಿತಿಯ ಕೊರತೆಯಿಂದ ಮತ್ತು ಕೆಲವೊಂದು ಅಧಿಕಾರಿಗಳ ಅಸಡ್ಡೆಯಿಂದ, ಸೌಲಭ್ಯಗಳು ಕ್ರೈಸ್ತ ಸಮಾಜ ಬಾಂಧವರಿಗೆ ಸಿಗದೇ ಇರುವುದು ನಮ್ಮ ದುರದಷ್ಟವಾಗಿದೆ.

ಸರಕಾರದ ಸೌಲಭ್ಯಗಳು ನಮ್ಮ ಸಮಾಜ ಬಾಂಧವರಿಗೆ ನಿಸ್ವಾರ್ಥವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಸಂಘಟನೆಯ ಕಚೇರಿಯನ್ನು ಆರಂಭಿಸಿದ್ದು ವಿಧಾನಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಉದ್ಘಾಟಿಸಿದ್ದಲ್ಲದೆ ತಿಂಗಳಿಗೆ ಒಂದು ಬಾರಿ ಅವರು ಉಡುಪಿ ಕಚೇರಿಗೆ ಆಗಮಿಸಿ ಕ್ರೈಸ್ತರ ಅಹವಾಲುಗಳನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.

ಅದರಂತೆ ಜುಲೈ 13ರಂದು ಜನಸ್ಪಂದನದಲ್ಲಿ ಐವನ್ ಡಿಸೋಜಾ ಉಪಸ್ಥಿತಿಯಲ್ಲಿ ಸರಕಾರಿ ಅಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಹಾಯಕ ಕಮೀಷನರ್, ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳು ಆಗಮಿಸಲಿದ್ದಾರೆ. ಉಡುಪಿ ಜಿಲ್ಲೆಯ ಕ್ರೈಸ್ತ ಸಮಾಜ ಬಾಂಧವರಿಗೆ ಈಗಾಗಲೇ ಆಯಾ ದೇವಾಲಯಗಳ ಮೂಲಕ ಮಾಹಿತಿಯನ್ನು ನೀಡಿದ್ದು ಇದರ ಪ್ರಯೋಜವನ್ನು ಪಡೆಯಲು ಅವರು ವಿನಂತಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷರಾದ ಸುನೀಲ್ ಕಬ್ರಾಲ್ ಶಿರ್ವ, ಕಾರ್ಯದರ್ಶಿ ಚಾರ್ಲ್ಸ್ ಅಂಬ್ಲರ್, ಉಪಾಧ್ಯಕ್ಷರಾದ ಮೆಲ್ವಿನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಡಿಯೋನ್ ಡಿಸೋಜಾ, ಸಂಪಾದಕಿ ಶೀಲಾ ಜತ್ತನ್ನ ಉಪಸ್ಥಿತರಿದ್ದರು.


Spread the love