ಜೆಡಿಎಸ್ ಪ್ರಾಯೋಜಕತ್ವದ ‘ಕರಾವಳಿ ಸೌಹಾರ್ದ ಸಮಾವೇಶ’ ಮುಂದೂಡಿಕೆ

Spread the love

ಜೆಡಿಎಸ್ ಪ್ರಾಯೋಜಕತ್ವದ ‘ಕರಾವಳಿ ಸೌಹಾರ್ದ ಸಮಾವೇಶ’ ಮುಂದೂಡಿಕೆ

ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜ.9ರಂದು ಜೆಡಿಎಸ್‌ ನಡೆಸಲಿರುವ ‘ಕರಾವಳಿ ಸೌಹಾರ್ದ ಸಮಾವೇಶ’ವನ್ನು ಮುಂದೂಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞ ಅವರು ತಿಳಿಸಿದ್ದಾರೆ.

ಗುರುವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ನಡೆಸುವ ಕರಾವಳಿ ಸೌಹಾರ್ದ ಸಮಾವೇಶದ ಅಂತಿಮ ಸಿದ್ದತೆಗಳು ನಡೆದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಡೆದ ಕೊಲೆ ಹಾಗೂ ಕೊಲೆಯತ್ನದಿಂದ ಮತ್ತೊಮ್ಮೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಕರಾವಳಿ ಸೌಹಾರ್ದ ಸಮಾವೇಶಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರು ಆಗಮಿಸಲಿದ್ದಾರೆ. ಆದ್ದರಿಂದ ಯಾವುದೇ ತೊಂದರೆಯಾಗದಂತೆ ಜ.9ರಂದು ನಡೆಯಲಿರುವ ಸಮಾವೇಶವನ್ನು ಮುಂದಿನ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ, ವರಿಷ್ಠ ದೇವೇಗೌಡ ಅವರಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವೇ ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಆಗಮಿಸಿದ ವೇಳೆ ಸಮಾವೇಶ ಸಿದ್ದತೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು ಎಂದು ಹೇಳಿದರು.

ಇದೇ ವೇಳೆ ಬುಧವಾರ ಹತ್ಯೆಯಾದ ದೀಪು ರಾವ್‌ ಕೊಲೆಗೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಬಂದಾಗಿನಿಂದ ಜಿಲ್ಲೆಯು ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯದಂತೆ ಗೂಂಡಾ ರಾಜ್ಯವಾಗಿದೆ. ಇಂತಹ ಸರಣಿ ಕೊಲೆಗಳನ್ನು ನಿಯಂತ್ರಿಸಲಾಗದ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಮಂತ್ರಿಗಳು ರಾಜೀನಾಮೆ ನೀಡಿ ಮನೆಗೆ ಹೊಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಎಂ.ಕೆ ಅಬ್ದುಲ್‌ ಖಾದರ್‌, ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್‌ ಸುವರ್ಣ, ರತೀಶ್‌ ಕರ್ಕೇರ, ಪ್ರವೀಣ್‌ ಚಂದ್ರ ಜೈನ್‌ ಉಪಸ್ಥಿತರಿದ್ದರು.


Spread the love